Advertisement
ಮಂಗಳೂರಿನ ಬಹುತೇಕ ಭಾಗಗಳಿಗೆ ನಿಯಮಿತವಾಗಿ ನೀರಿನ ಬಿಲ್ ಪಾವತಿಯಾಗುತ್ತಿಲ್ಲ; ಹೀಗಾಗಿ ಒಂದೇ ಬಾರಿ 3-4 ತಿಂಗಳಿನ ಬಿಲ್ ಬಂದು ಕೆಲವರು “ಹೊರೆ’ ಎದುರಿಸುತ್ತಿದ್ದಾರೆ. ಇಂತಹ ಪರಿಸ್ಥಿತಿಗೆ ಮುಕ್ತಿ ನೀಡಲು ನೀರಿನ ಬಿಲ್ ಸಮರ್ಪಕವಾಗಿ ನೀಡಲು ಪಾಲಿಕೆ “ಹೊರಗುತ್ತಿಗೆ’ ಬಗ್ಗೆ ಚಿಂತನೆ ನಡೆಸಿದೆ.
Related Articles
Advertisement
ಆಗಿದ್ದೇನು? ಪ್ರತೀ ವಾರ್ಡ್‌ಗೆ ತೆರಳುವ ಮಲೇರಿಯಾ ನಿಯಂತ್ರಣ ಘಟಕದ ಸಿಬಂದಿ ಆರೋಗ್ಯದ ಜತೆಗೆ ನೀರಿನ ಬಿಲ್ ಕೂಡ ನೀಡಿದರೆ ಲಾಭದಾಯಕ ಎಂದು ಅಂದಾಜಿಸಿದ ಪಾಲಿಕೆ ಕಳೆದ 4-5 ವರ್ಷದಿಂದ ಈ ಕಾರ್ಮಿಕರಿಗೆ ಹೆಚ್ಚುವರಿ ಜವಾಬ್ದಾರಿಯನ್ನೂ ಹೆಗಲಿಗೇರಿಸಿತ್ತು. ಮಲೇರಿಯಾ ಕಾರ್ಯನಿರ್ವಹಣೆ ಜವಾಬ್ದಾರಿಯಂತೆ ನೀರಿನ ಬಿಲ್ ವಿತರಣೆಗಾಗಿ ಪ್ರತೀ ವಾರ್ಡ್‌ಗೆ ಒಬ್ಬ ಎಂ.ಪಿ.ಡ ಬ್ಲ್ಯು.ವನ್ನು ನಿಯುಕ್ತಿಗೊಳಿಸಲಾಗಿತ್ತು. ಅವರು ತಮ್ಮ ವಾರ್ಡ್ ವ್ಯಾಪ್ತಿಯ ಎಲ್ಲ ಕಟ್ಟಡಗಳನ್ನು ಭೇಟಿ ನೀಡಿ ಮಲೇರಿಯಾ ನಿಯಂತ್ರಣ, ನೀರಿನ ಬಿಲ್ ವಿತರಣೆ ಕಾರ್ಯವನ್ನು ನಿರ್ವಹಿಸುತ್ತಿದ್ದರು. ನಗರದಲ್ಲಿ ಕೊರೊನಾ ಸಹಿತ ವಿವಿಧ ಆರೋಗ್ಯದ ಸಮಸ್ಯೆ ಉಲ್ಬಣಗೊಂಡಾಗ ನೀರಿನ ಬಿಲ್ ಕೊಡುವುದು ಬಾಕಿಯಾಗಿತ್ತು. ಕೆಲವು ತಿಂಗಳ ನೀರಿನ ಬಿಲ್ ಬಹುತೇಕ ಮಂದಿಗೆ ಸಿಗಲೇ ಇಲ್ಲ.
ಪರಿಹಾರವೇನು? ಎಂ.ಪಿ.ಡಬ್ಲ್ಯು. ಕಾರ್ಮಿಕರಿಗೆ ಮತ್ತೆ ನೀರಿನ ಬಿಲ್ ಹೊರೆ ನೀಡುವ ಬದಲು ಪ್ರತ್ಯೇಕ ಏಜೆನ್ಸಿ ಮೂಲಕವೇ ನೀರಿನ ಬಿಲ್ ನೀಡುವ ಕ್ರಮ ಜಾರಿಗೊಳಿಸಿದರೆ ಉತ್ತಮ ಎಂದು ಅಂದಾಜಿಸಿರುವ ಪಾಲಿಕೆ ಹೊರಗುತ್ತಿಗೆ ನೀಡಲು ಮುಂದಾಗಿದೆ.
ಮಂಗಳೂರು: ನೀರಿನ ಸಂಪರ್ಕದ ವಿವರ:
ಗೃಹ ಬಳಕೆ- 86,711
ಗೃಹೇತರ- 5,069
ವಾಣಿಜ್ಯ -1,610
ಕಟ್ಟಡ ರಚನೆ -1,215
ಕೈಗಾರಿಕೆ- 2
ಸಗಟು ಪೂರೈಕೆ- 5
ಒಟ್ಟು -94,612
ನೀರಿನ ಬಿಲ್ ಕೋಟ್ಯಂತರ ರೂ. ಬಾಕಿ!
ನೀರಿನ ಬಿಲ್ ನೀಡಿದ ಅನಂತರವೂ ಮಂಗಳೂರಿನ ವಿವಿಧ ಮೂಲಗಳಿಂದ ಪಾಲಿಕೆಗೆ ನೀರಿನ ಶುಲ್ಕ ಕೋಟ್ಯಂತರ ರೂ. ಬರಲು ಬಾಕಿ ಇದೆ. 2020-21ನೇ ಸಾಲಿನಲ್ಲಿ 3,279 ಲಕ್ಷ ರೂ., 2021-22ರಲ್ಲಿ 4,815 ಲಕ್ಷ ರೂ. ವಸೂಲಾತಿಗೆ ಬಾಕಿ ಇದೆ. 2 ವರ್ಷಗಳಲ್ಲಿ ಶೇ.50ರಷ್ಟು ಮಾತ್ರ ನೀರಿನ ಶುಲ್ಕ ವಸೂಲಾತಿ ಆಗಿದೆ. ಈ ವರ್ಷ 4,919 ಲಕ್ಷ ರೂ. ಪ್ರಸ್ತುತ ಬಾಕಿಯಾಗಿದ್ದು, ವಸೂಲಾತಿ ವಿವರ ನಿರೀಕ್ಷಿಸಲಾಗಿದೆ.
ಶೀಘ್ರ ಅಂತಿಮ ನಿರ್ಧಾರ: ನಗರದ ಎಲ್ಲ ಕಡೆಗಳಿಗೆ ಕುಡಿಯುವ ನೀರಿನ ಬಿಲ್ ಸಮರ್ಪಕವಾಗಿ ನೀಡುವ ಉದ್ದೇಶದಿಂದ ಪ್ರತ್ಯೇಕ ಏಜೆನ್ಸಿಯವರಿಗೆ ಹೊರಗುತ್ತಿಗೆ ನೀಡುವ ಬಗ್ಗೆ ಚಿಂತನೆ ನಡೆಸಲಾಗಿದೆ. ಜನರಿಗೆ ಸಮರ್ಪಕವಾಗಿ ಬಿಲ್ ವಿತರಿಸಿ ಆದಾಯ ಸಂಗ್ರಹಿಸುವ ನಿಟ್ಟಿನಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು, ಶೀಘ್ರ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು. –ಪ್ರೇಮಾನಂದ ಶೆಟ್ಟಿ , ಮೇಯರ್, ಮಂಗಳೂರು