Advertisement

ಕನಸಲ್ಲಿ ಭೂತ ಬರುತ್ತೆ ಹುಷಾರ್‌ …

06:15 AM Apr 20, 2018 | Team Udayavani |

ಇದು ಬೆಳಿಗ್ಗೆ ಆರರಿಂದ ಸಂಜೆ ಆರರವರೆಗೂ ನಡೆಯುವ ಕಥೆ, ಬಹಳ ಅಪರೂಪದ ಲೊಕೇಶನ್‌ಗಳಲ್ಲಿ ಚಿತ್ರೀಕರಣ ಮಾಡಿದ್ದೇವೆ, ಎಲ್ಲರೂ ಬಹಳ ಸಹಕಾರ ಕೊಟ್ಟಿದ್ದಾರೆ, ಚಿತ್ರ ಬಹಳ ಚೆನ್ನಾಗಿ ಮೂಡಿಬಂದಿದೆ, ನಟನೆ ಚೆನ್ನಾಗಿದೆ, ಛಾಯಾಗ್ರಹಣ ಚೆನ್ನಾಗಿದೆ, ಹಾಡುಗಳು ಚೆನ್ನಾಗಿವೆ …

Advertisement

“ಸಿಕ್ಸ್‌ ಟು ಸಿಕ್ಸ್‌’ ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭದ ಸಂದರ್ಭದಲ್ಲಿ ಚಿತ್ರತಂಡದವರು ಮಾತನಾಡಿದ್ದಕ್ಕೂ, ಬಿಡುಗಡೆಯ ಸಂದರ್ಭದಲ್ಲಿ ಮಾತನಾಡಿದ್ದಕ್ಕೂ ಹೆಚ್ಚು ವ್ಯತ್ಯಾಸವಿರಲಿಲ್ಲ. ಎರಡೂ ಪತ್ರಿಕಾಗೋಷ್ಠಿಗಳಿಗೆ ಸುಮಾರು ಒಂದು ತಿಂಗಳ ವ್ಯತ್ಯಾಸವಿತ್ತು. ಆದರೆ, ಎರಡೂ ಕಡೆ ಅದೇ ಜನ, ಅದೇ ಮಾತು. ಮಿಕ್ಕಂತೆ ವಿಶೇಷವಾದದ್ದೇನೂ ಅಂದಿನ ಪತ್ರಿಕಾಗೋಷ್ಠಿಯಲ್ಲಿ ನಡೆಯಲಿಲ್ಲ. ಎಂದಿನಂತೆ ಚಿತ್ರದ ಸೂತ್ರಧಾರ “ಶಂಖನಾದ’ ಅರವಿಂದ್‌ ಮೊದಲು ಮಾತನಾಡಿ ಎಲ್ಲರನ್ನೂ ಪರಿಚಯಿಸಿದರು. ಒಬ್ಬಬ್ಬರನ್ನೂ ನೆನೆಯುತ್ತಾ ಅವರ ಕೆಲಸ, ಕಾರ್ಯವೈಖರಿಯನ್ನು ನೆನೆದರು. ನಂತರ ನಿರ್ದೇಶಕ ಶಿಡ್ಲಘಟ್ಟ ಶ್ರೀನಿವಾಸ್‌, ನಟರಾದ ತಾರಕ್‌ ಪೊನ್ನಪ್ಪ ಮತ್ತು ಸಚಿನ್‌, ಸಂಗೀತ ನಿರ್ದೇಶಕಿ ಮಾನಸ ಹೊಳ್ಳ, ನಿರ್ಮಾಪಕ ರಘುನಂದನ್‌ ಮುಂತಾದವರು ಚಿತ್ರದ ಬಗ್ಗೆ ನಾಲ್ಕಾಲ್ಕು ಮಾತುಗಳನ್ನಾಡಿದರು. ಇನ್ನೇನು ಪತ್ರಿಕಾಗೋಷ್ಠಿ ಮುಗಿಯುವುದಕ್ಕೆ ಬಂತು, ಆಗ ಚಿತ್ರದ ಪ್ರಚಾರ ಮಾಡುತ್ತಿರುವ ಭರತ್‌ ಎನ್ನುವವರನ್ನು ಪರಿಚಯಿಸಲಾಯಿತು.

ಈ ಭರತ್‌ ಎನ್ನುವವರು ಚಿತ್ರದ ಪ್ರಚಾರವನ್ನು ಬೇರೆ ತರಹ ಮಾಡುತ್ತಿದ್ದಾರೆ. ಬೇರೆ ತರಹ ಎಂದರೆ ಹೇಗೆ ಎಂದರೆ ಉತ್ತರವನ್ನು ಅವರಿಂದಲೇ ಕೇಳಿ. “ಚಿತ್ರದಲ್ಲಿ ಹಾರರ್‌ ಅಂಶಗಳು ಒಂದಿಷ್ಟಿವೆ. ನಾವೊಂದು 50 ಸೆಕೆಂಡ್‌ನ‌ ವೀಡಿಯೋ ಮಾಡಿದ್ದೇವೆ. ಕಿವಿಗೆ ಇಯರ್‌ಫೋನ್‌ ಹಾಕಿಕೊಂಡು ಕೇಳುತ್ತಾ ಅದನ್ನು ನೋಡಿದರೆ, ಕನಸಲ್ಲಿ ಭೂತ ಬರುತ್ತದೆ. ಇದನ್ನು ಬ್ರೈನ್‌ ಸ್ಟಿಮ್ಯುಲೇಷನ್‌ ಟೆಕ್ನಾಲಜಿ ಎಂಬ ತಂತ್ರಜ್ಞಾನದ ಮೂಲಕ ಮಾಡಿದ್ದೇವೆ. ಇದುವರೆಗೂ ಯಾವ ಚಿತ್ರರಂಗದಲ್ಲೂ ಮಾಡಿಲ್ಲ’ ಎಂದರು. ಜನರಿಗೆ ಭೂತ ತೋರಿಸಿ ಹೆದರಿಸುವುದು ಎಷ್ಟು ಸರಿ ಎಂಬ ಪ್ರಶ್ನೆ ಬಂತು. ಅದಕ್ಕವರು, “ಪ್ರಮೋಷನ್‌ಗಾಗಿ ಇದನ್ನು ಮಾಡುತ್ತಿದ್ದೇವೆ. ಇದರಿಂದ ಯಾವುದೇ ಸಮಸ್ಯೆ ಆಗುವುದಿಲ್ಲ. ರೀಸರ್ಚ್‌ ಮಾಡಿಯೇ ಮಾಡಿದ್ದೇವೆ’ ಎಂದರು. ಇದರ ಜೊತೆಗೆ ಚಿತ್ರವನ್ನು ನೋಡುವುದಕ್ಕೆ 66 ಕಾರಣಗಳನ್ನೂ ಅವರು ಕೊಟ್ಟಿದ್ದಾರೆ. ಚಿತ್ರಕ್ಕಾಗಿಯೇ ಫೇಸ್‌ಬುಕ್‌ನಲ್ಲೊಂದು ಪೇಜ್‌ ಸೃಷ್ಟಿಸಿರುವ ಅವರು, ಅಲ್ಲಿ ಚಿತ್ರ ನೋಡುವುದಕ್ಕೆ 66 ಕಾರಣಗಳನ್ನು ನೀಡಿದ್ದಾರಂತೆ. ಇವೆಲ್ಲಾ ಹೇಳುತ್ತಿದ್ದಂತೆಯೇ ಚಿತ್ರದ ಬಿಡುಗಡೆ ಪತ್ರಿಕಾಗೋಷ್ಠಿಯೂ ಮುಗಿಯಿತು.

Advertisement

Udayavani is now on Telegram. Click here to join our channel and stay updated with the latest news.

Next