Advertisement

ಬಳಸದೆ ಹಾಳಾದ ಸಾಮೂಹಿಕ ಶೌಚಾಲಯ!

05:00 PM Jul 13, 2018 | |

ಬಾಗಲಕೋಟೆ: ಸ್ವಚ್ಚ  ಬಾಗಲಕೋಟೆ ಉದ್ದೇಶದೊಂದಿಗೆ ನಗರದಲ್ಲಿ ನಿರ್ಮಿಸಿದ 20ಕ್ಕೂ ಹೆಚ್ಚು ಸಾಮೂಹಿಕ ಶೌಚಾಲಯಗಳು ಗಬ್ಬೆದ್ದು ಹೋಗಿವೆ. ನಗರಸಭೆ ಅಧಿಕಾರಿಗಳು, ನಿರ್ಮಾಣಕ್ಕೆ ತೋರುವ ಆಸಕ್ತಿ, ನಿರ್ವಹಣೆಗೆ ತೋರಿಲ್ಲ. ಹೀಗಾಗಿ ಕೋಟ್ಯಂತರ ಖರ್ಚು ಮಾಡಿ ನಿರ್ಮಿಸಿದ ಸಾಮೂಹಿಕ ಶೌಚಾಲಯಗಳು, ಇಂದು ಕಾಲಿಡಲೂ ಆಗದ ಸ್ಥಿತಿ ತಲುಪಿವೆ.

Advertisement

ಹೌದು, ನಗರಸಭೆ, ನಗರದ ಹಲವೆಡೆ ಒಟ್ಟು 44 ಸಾಮೂಹಿಕ ಶೌಚಾಲಯ, ಸಾರ್ವಜನಿಕ ಶೌಚಾಲಯ ನಿರ್ಮಿಸಿದೆ. ಸ್ವಚ್ಚ ಭಾರತ ಮಿಷನ್‌ ಅಡಿಯಲ್ಲಿ 19 ಹೊಸ ಸಾಮೂಹಿಕ ಶೌಚಾಲಯ ನಿರ್ಮಿಸಿ, ವರ್ಷ ಕಳೆದರೂ, ಇಂದಿಗೂ ಸಾರ್ವಜನಿಕರ ಬಳಕೆಗೆ ಮುಕ್ತವಾಗಿಲ್ಲ.

1.23 ಕೋಟಿ ಖರ್ಚು : ಸ್ವಚ್ಚ ಭಾರತ ಮಿಷನ್‌ ಅಡಿಯಲ್ಲಿ ನಗರ, ವಿದ್ಯಾಗಿರಿ, ಆಶ್ರಯ, ವಾಂಬೆ ಕಾಲೋನಿ ಸೇರಿದಂತೆ ವಿವಿಧೆಡೆ ಒಟ್ಟು 19 ಸಾಮೂಹಿಕ ಶೌಚಾಲಯ ನಿರ್ಮಿಸಲಾಗಿದೆ. ಪ್ರತಿಯೊಂದು ಶೌಚಾಲಯಕ್ಕೂ 6.50 ಲಕ್ಷ ಖರ್ಚು ಮಾಡಿದ್ದು, ಒಟ್ಟು 1.23 ಕೋಟಿ ವೆಚ್ಚ ಮಾಡಲಾಗಿದೆ. ವೈಯಕ್ತಿಕ ಶೌಚಾಲಯ ಇಲ್ಲದ ಜನರು, ಬಯಲು ಶೌಚಕ್ಕೆ ಹೋಗುವುದನ್ನು ತಪ್ಪಿಸಲು ಹಾಗೂ ಸ್ವಚ್ಚ  ಬಾಗಲಕೋಟೆ ಕಾಪಾಡಿಕೊಳ್ಳುವ ಉದ್ದೇಶದಿಂದ ಈ ಶೌಚಾಲಯ ನಿರ್ಮಿಸಲಾಗಿದೆ. ಆದರೆ, ಈ ಶೌಚಾಲಯಗಳು ಬಳಕೆಗೆ ಮುಕ್ತವಾಗಿಲ್ಲ. ಇನ್ನು ಎಸ್‌ಎಫ್‌ಸಿ ಯೋಜನೆ (ಕರ್ನಾಟಕ ಹಣಕಾಸು ಯೋಜನೆ) ಮತ್ತು ವಿವಿಧ ಯೋಜನೆಗಳಡಿ 8 ಶೌಚಾಲಯ ನಿರ್ಮಾಣ ಮಾಡಲಾಗಿದೆ. ಅವುಗಳೂ ಬಳಕೆಗೆ ಮುನ್ನವೇ ಒಡೆದು ಹೋಗಿವೆ.

ಶೌಚಾಲಯಕ್ಕೆ ಅಳವಡಿಸಿದ್ದ ಬಾಗಿಲು, ಕಿಟಕಿ ಸೇರಿದಂತೆ ವಿವಿಧ ಕಬ್ಬಿಣದ ವಸ್ತುಗಳ ಮುರಿದಿದ್ದಾರೆ. ಇನ್ನೂ ಕೆಲ ವಸ್ತುಗಳನ್ನು ದೋಚಿಕೊಂಡು ಹೋಗಿದ್ದಾರೆ. ಬಾಗಿಲು ಮುರಿದು ಹೋಗಿದ್ದರಿಂದ ಆ ಶೌಚಾಲಯಗಳಲ್ಲಿ ಹಂದಿಗಳು ಆಶ್ರಯ ಪಡೆದಿವೆ.

ನಿರ್ಮಾಣದ ಆಸಕ್ತಿ- ನಿರ್ವಹಣೆಗಿಲ್ಲ : ಸಾರ್ವಜನಿಕ ಶೌಚಾಲಯಗಳನ್ನು ಸ್ವಚ್ಚವಾಗಿಡುವ ಜತೆಗೆ ಅವುಗಳ ನಿರ್ವಹಣೆಯನ್ನು ಸಂಘ- ಸಂಸ್ಥೆಗಳಿಗೆ ವಹಿಸುವ ಪರಂಪರೆ ಇದೆ. ಆದರೆ, ನಗರಸಭೆಯಿಂದ ಶೌಚಾಲಯ ನಿರ್ವಹಣೆಗೆ ಟೆಂಡರ್‌ ಕರೆದರೂ, ಯಾರೂ ಬಂದಿಲ್ಲ ಎಂಬುದು ಅಧಿಕಾರಿಗಳ ಹೇಳಿಕೆ. ಕೊನೆ ಪಕ್ಷ ನಗರಸಭೆಯಿಂದಲೇ ನಿರ್ವಹಿಸುವ ಗೋಜಿಗೂ ಹೋಗಿಲ್ಲ. ಕೇವಲ ಕೋಟ್ಯಂತರ ರೂಪಾಯಿ ಖರ್ಚು ಮಾಡಿ, ಶೌಚಾಲಯ ನಿರ್ಮಿಸಿ, ಬಾಗಿಲು ಹಾಕಿದ್ದಾರೆ. ನಿರ್ಮಿಸಿದ ಗುತ್ತಿಗೆದಾರರಾಗಲಿ, ಅಧಿಕಾರಿಗಳಾಗಲಿ ಅತ್ತ ಹೊರಳಿ ನೋಡಿಲ್ಲ. ಹೀಗಾಗಿ ಶೌಚಾಲಯಕ್ಕೆ ಅವಳಡಿಸಿದ್ದ ವಸ್ತುಗಳು ಕಂಡವರ ಪಾಲಾಗಿವೆ.

Advertisement

ಜನರಿಗೂ ಇಲ್ಲ ಜವಾಬ್ದಾರಿ : ಅಧಿಕಾರಿಗಳ ಬೇಜವಾಬ್ದಾರಿ ಒಂದೆಡೆಯಾದರೆ, ಸಾರ್ವಜನಿಕರ ತೆರಿಗೆ ಹಣದಲ್ಲಿ ಲಕ್ಷಾಂತರ ರೂ. ಖರ್ಚು ಮಾಡಿ ನಿರ್ಮಿಸಿದ ಶೌಚಾಲಯ ಬಳಕೆ ಅಥವಾ ಅವುಗಳನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಆಯಾ ಬಡಾವಣೆ ಸಾರ್ವಜನಿಕರೂ ದಿವ್ಯ ನಿರ್ಲಕ್ಷ್ಯ ವಹಿಸಿರುವುದು ಗೋಚರಿಸುತ್ತದೆ. ಜನರಿಗಾಗಿಯೇ ಕಟ್ಟಿದ ಈ ಶೌಚಾಲಯಗಳನ್ನು ಕಿಡಿಗೇಡಿಗಳು ಧ್ವಂಸಗೊಳಿಸಿದರೂ ಯಾರೂ ಪ್ರಶ್ನೆ ಮಾಡಿಲ್ಲ. ಹೀಗಾಗಿ 14.50 ಲಕ್ಷ ಖರ್ಚು ಮಾಡಿ ಕಟ್ಟಿದ ಹೊಳೆಯ ದಂಡೆಯ ಶೌಚಾಲಯ ಈಗ, ಹಂದಿಗಳ ತಾಣವಾಗಿ ಮಾರ್ಪಟ್ಟಿದೆ

ನಗರಸಭೆಯಿಂದ ಸ್ವಚ್ಛ ಭಾರತ ಯೋಜನೆಯಡಿ ತಲಾ 6.50 ಲಕ್ಷ ವೆಚ್ಚದಲ್ಲಿ 19 ಸಾಮೂಹಿಕ ಶೌಚಾಲಯ ನಿರ್ಮಿಸಲಾಗಿದೆ. ಎಸ್‌ಎಫ್‌ಸಿ ಹಾಗೂ ವಿವಿಧ ಯೊಜನೆಯಡಿಯೂ ಶೌಚಾಲಯ ಕಟ್ಟಲಾಗಿದೆ. ನಗರದಲ್ಲಿ ಒಟ್ಟು 27 ಸಾಮೂಹಿಕ ಶೌಚಾಲಯ ಸೇರಿ 44 ಶೌಚಾಲಯಗಳಿವೆ.
 ನವೀದ ಖಾಜಿ,
ಸಹಾಯಕ ಅಭಿಯಂತರ.

ಬಯಲು ಶೌಚಮುಕ್ತ ನಗರ ಮಾಡುವ ಉದ್ದೇಶದಿಂದ ನಗರಸಭೆಯಿಂದ 27 ಶೌಚಾಲಯ ನಿರ್ಮಿಸಲಾಗಿದೆ. ಅವುಗಳ ನಿರ್ವಹಣೆಗೆ ಟೆಂಡರ್‌ ಕರೆಯಲಾಗಿತ್ತು. ಯಾರೂ ಬಂದಿಲ್ಲ. ಹೀಗಾಗಿ ಬಾಗಲಕೋಟೆ ಶಾಸಕರ ನಿರ್ದೇಶನದಂತೆ ನಗರಸಭೆಯಿಂದಲೇ ನಿರ್ವಹಿಸಲು ಪ್ರಕ್ರಿಯೆ ನಡೆದಿದೆ.
 ಎಚ್‌.ವಿ. ಕಲಾದಗಿ, ಪರಿಸರ ಅಭಿಯಂತರ.

ಬಳಸದ ಶೌಚಾಲಯಕ್ಕೆ ದುರಸ್ತಿ ವೆಚ್ಚ
‌ಗರದ ಹೊಳೆ ದಂಡೆಯಲ್ಲಿ 2013-14ನೇ ಸಾಲಿನ ಎಸ್‌ ಎಫ್‌ಸಿ ಯೋಜನೆಯಡಿ 14.50 ಲಕ್ಷ ಖರ್ಚು ಮಾಡಿ ಶೌಚಾಲಯ ನಿರ್ಮಿಸಲಾಗಿದೆ. ನಿರ್ಮಾಣಗೊಂಡು ನಾಲ್ಕು ವರ್ಷ ಕಳೆದಿವೆ. ಒಂದು ದಿನವೂ ಬಳಕೆ ಮಾಡಿಲ್ಲ. ಕಿಡಿಗೇಡಿಗಳು ಬಾಗಿಲು, ಕಿಟಗಿ ಮುರಿದಿದ್ದಾರೆ. ಕೆಲವು ಸಾಮಗ್ರಿ ಒಡೆದಿದ್ದಾರೆ. ಹೀಗಾಗಿ ಬಳಕೆ ಮಾಡದಿದ್ದರೂ, ಈಗ ಅದನ್ನು ಪುನಃ ದುರಸ್ತಿಗೊಳಿಸಿ, ನಗರಸಭೆಯಿಂದ ನಿರ್ವಹಣೆ ಮಾಡಲು ಅನುದಾನ ಬಳಸಲು ನಗರಸಭೆ ತಯಾರಿ ಮಾಡುತ್ತಿದೆ ಎನ್ನಲಾಗಿದೆ.

ಶ್ರೀಶೈಲ ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next