ಲಕ್ಷ್ಮೇಶ್ವರ: ಪಟ್ಟಣಕ್ಕೆ ಹೊಂದಿಕೊಂಡಿರುವ ದೊಡ್ಡದಾದ ಲಂಡಿಹಳ್ಳದ ಸಂಗ್ರಹವಾದ ತ್ಯಾಜ್ಯ, ಗಿಡಗಂಟೆ, ಗಲೀಜು ನೀರನ್ನು ಪುರಸಭೆಯವರು 2 ದಿನಗಳ ಸ್ವತ್ಛಗೊಳಿಸುವ ಕಾರ್ಯ ಮಾಡಿ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಪಟ್ಟಣದ ಹುಬ್ಬಳ್ಳಿ ರಸ್ತೆ ಪಕ್ಕದ ಯಲಿಗಾರ ಪ್ಲಾಟ್, ಜನ್ನತ್‌ನಗರ, ಹಳ್ಳದಕೇರಿ, ಕೆಂಚಲಾಪುರ, ಬಳಿಗಾರ ಓಣಿ, ಅಂಬೇಡ್ಕರ್ ನಗರ, ಇಂದಿರಾ ನಗರ ಬಡಾವಣೆಯ ಗುಂಟ ಹರಿಯುವ ಹಳ್ಳದುದ್ದಕ್ಕೂ ನಿಲ್ಲುವ ಗಲೀಜು ನೀರು, ಗಿಡಗಂಟೆಗಳು, ಆಳೆತ್ತರದ ಆಪಿನಂತಹ ಕಸ, ವಿಷಜಂತುಗಳಿಂದಾಗಿ ರೋಗ ರುಜಿನುಗಳ ತಾಣವಾಗುತ್ತಿತ್ತು.
ಸದ್ಯ ಮಳೆಗಾಲ ಆರಂಭಗೊಂಡಿದ್ದು ಹಳ್ಳದ ನೀರು ಮಾರ್ಗ ಬದಲಿಸಿ ಜನವಸತಿ ಪ್ರದೇಶ ಮತ್ತು ಜಮೀನುಗಳಿಗೆ ನುಗ್ಗಬಾರದೆಂಬ ಉದ್ದೇಶದಿಂದ ಪುರಸಭೆಯವರು ಹಳ್ಳದಲ್ಲಿ ಸಂಗ್ರವಾಗಿದ್ದ ಅಪಾರ ಪ್ರಮಾಣ ಪ್ಲಾಸ್ಟಿಕ್ ಸಹಿತ ತ್ಯಾಜ್ಯ, ಗಿಡಗಂಟೆ, ಕಸವನ್ನು ಜೆಸಿಬಿಯಿಂದ ಸ್ವತ್ಛಗೊಳಿಸುವ ಕಾರ್ಯ ಮಾಡಿದರು.
ಈ ಕುರಿತು ಮಾತನಾಡಿದ ಪುರಸಭೆ ಮುಖ್ಯಾ ಧಿಕಾರಿ ಶಂಕರ ಹುಲ್ಲಮ್ಮನವರ, ಮಳೆಗಾಲದಲ್ಲಿ ಚರಂಡಿ, ನಾಲಾ ನೀರಿನಿಂದ ತೊಂದರೆ ಉಂಟಾಗದಂತೆ, ಸಾಂಕ್ರಾಮಿಕ ರೋಗ ಹರಡದಂತೆ ಸ್ವತ್ಛತಾ ಕಾರ್ಯ ಕೈಗೊಳ್ಳಬೇಕೆಂದು ನಿರ್ದೇಶನ ನೀಡಿದ್ದಾರೆ.
ಈ ನಿಟ್ಟಿನಲ್ಲಿ ಪಟ್ಟಣಕ್ಕೆ ಹೊಂದಿಕೊಂಡ ಲಂಡಿ ನಾಲಾ ಸ್ವತ್ಛಗೊಳಿಸಲಾಗಿದೆ. ಕಳೆದ ವರ್ಷವೂ ಹಳ್ಳದಕೇರಿ ಓಣಿಗೆ ಹೊಂದಿಕೊಂಡ ಹಳ್ಳವನ್ನು ಜಿಲ್ಲೆಯ ಮೂರ್‍ನಾಲ್ಕು ಪುರಸಭೆಯವರ ಸಹಕಾರದಿಂದ ನಾಲ್ಕಾರು ಜೆಸಿಬಿ ಬಳಸಿ ಸ್ವತ್ಛತೆ ಕಾರ್ಯ ಮಾಡಲಾಗಿದೆ.ಈ ಭಾಗದ ಜನರು ಹಳ್ಳದಲ್ಲಿ ತ್ಯಾಜ್ಯ ಸುರಿಯವುದು, ಹಳ್ಳದ ದಂಡೆಯಗುಂಟ ತಿಪ್ಪೆ, ಬಣವೆ ಹಾಕುವುದು ಮಾಡಬಾರದು. ಹಳ್ಳದಲ್ಲಿ ಸಂಗ್ರಹವಾಗುವ ನೀರನ್ನು ಪಂಪ್ ಮಾಡಿ ಯುಜಿಡಿ ಪ್ಲಾಂಟ್‌ಗೆ ಸರಬರಾಜು ಮಾಡಲಾಗುತ್ತಿದೆ ಈ ನಿಟ್ಟಿನಲ್ಲಿ ಜನರ ಸಹಕಾರವೂ ಅಗತ್ಯ ಎಂದರು.