Advertisement
ಶುಕ್ರವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲೆಯ ಆಯ್ದ ಗ್ರಾಮ ಪಂಚಾಯತ್ ಅಧ್ಯಕ್ಷರು, ಪಿಡಿಒಗಳು, ವೈದ್ಯರು, ಶಿಕ್ಷಕರು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಏರ್ಪಡಿಸಿದ್ದ ಘನ ಮತ್ತು ದ್ರವ ತ್ಯಾಜ್ಯ ನಿರ್ವ ಹಣೆ ಕುರಿತ ಸಮಾಲೋಚನ ಸಭೆ, ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು ದಿನನಿತ್ಯದ ಬದುಕಿನಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವುದರ ಮೂಲಕ ತ್ಯಾಜ್ಯ ವಿಲೇವಾರಿ ಸುಲಭವಾಗಲಿದೆ ಎಂದರು. ಹಸಿರು ಶಿಷ್ಟಾಚಾರಗಳ ಭಿತ್ತಿಪತ್ರವನ್ನು ಅವರು ಬಿಡುಗಡೆಗೊಳಿಸಿದರು.
ಎಲ್ಲ ಗ್ರಾ.ಪಂ.ಗಳಲ್ಲಿ ತ್ಯಾಜ್ಯ ವಿಲೇವಾರಿ ಸವಾಲಿನ ಕೆಲಸ ಆಗಿದೆ. ಮನೆಯಲ್ಲಿನ ಕಸವನ್ನು ಪೈಪ್ ಕಾಂಪೋಸ್ಟ್ ಮೂಲಕ ವಿಲೇವಾರಿ ಮಾಡುವಂತೆ ಹಾಗೂ ದಿನ ನಿತ್ಯದ ಬಳಕೆಯಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವ ಮೂಲಕ ತ್ಯಾಜ್ಯ ವಿಲೇವಾರಿ ಸಮರ್ಪಕವಾಗಿ ಮಾಡಲು ಸಾಧ್ಯವಾಗಲಿದೆ. ಕಸವನ್ನು ಮೂಲದಲ್ಲೇ ವಿಂಗಡಿಸುವುದರಿಂದ ವಿಲೇವಾರಿ ಸುಲಭವಾಗಲಿದೆ ಎಂದು ದಿನಕರ ಬಾಬು ಹೇಳಿದರು. ಗ್ರಾಮಪಂಚಾಯತ್‌ಗಳಲ್ಲಿ ವಾರದ ಒಂದು ದಿನ ಘನ ಮತ್ತು ದ್ರವ ತ್ಯಾಜ್ಯ ವಿಲೇವಾರಿ ಸಂಬಂಧ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವಂತೆ ಸೂಚಿಸಿದ ಅಧ್ಯಕ್ಷರು, ತಮ್ಮ ಕ್ಷೇತ್ರ ವ್ಯಾಪ್ತಿಯ ಯುವಕ ಮಂಡಲದಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಸಂಪೂರ್ಣ ಪ್ಲಾಸ್ಟಿಕ್ ನಿಷೇಧ ಮಾಡಿ, ಸ್ಟೀಲ್ ಮತ್ತು ಇತರ ಪರಿಸರ ಸ್ನೇಹಿವಸ್ತುಗಳ ಬಳಕೆಯಿಂದ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ಸಂಘಟಿಸಲಾಗಿತ್ತು. ಇದನ್ನು ಎಲ್ಲ ಸಂಘ – ಸಂಸ್ಥೆಗಳೂ ಅನುಸರಿಸುವಂತೆ ತಿಳಿಸಿದರು. ಕಲ್ಯಾಣ ಮಂಟಪಗಳಲ್ಲಿ ಪ್ಲಾಸ್ಟಿಕ್ ಬಳಕೆ ಕುರಿತು ಅರಿವು ಮೂಡಿಸುವಂತೆ ತಿಳಿಸಿದರು.
Related Articles
ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಮಾತನಾಡಿ, ಘನ ಮತ್ತು ದ್ರವ ತ್ಯಾಜ್ಯಗಳು ತ್ಯಾಜ್ಯವಲ್ಲ. ಅದನ್ನು ಸಮರ್ಪಕರೀತಿಯಲ್ಲಿ ಮರು ಬಳಕೆ ಮಾಡಿದರೆ ಅದು ಸಂಪನ್ಮೂಲವಾಗಲಿದೆ. ತ್ಯಾಜ್ಯವನ್ನು ಸಂಪನ್ಮೂಲವಾಗಿ ಪರಿವರ್ತಿಸಿ ಆರ್ಥಿಕವಾಗಿ ಸಬಲರಾಗಲು ಸಾಧ್ಯವಿದೆ. ತ್ಯಾಜ್ಯ ಎಂಬುದು ಸುಮಾರು 20 ವರ್ಷಗಳಿಂದ ಮಾತ್ರ ಕೇಳಿಬರುತ್ತಿದೆ, ನಮ್ಮ ಪೂರ್ವಜರು ತ್ಯಾಜ್ಯವನ್ನು ಸಮರ್ಪಕವಾಗಿ ಮರುಬಳಕೆ ಮಾಡುತ್ತಿದ್ದುದರಿಂದ ತ್ಯಾಜ್ಯದ ಸಮಸ್ಯೆ ಇಲ್ಲವಾಗಿತ್ತು. ಆದರೆ ನಾವು ಆಧುನಿಕರಾಗಿ ಪ್ಲಾಸ್ಟಿಕ್ ಬಳಕೆ ಜಾಸ್ತಿ ಮಾಡುತ್ತಿರುವುದರಿಂದ ತ್ಯಾಜ್ಯ ಸಮಸ್ಯೆ ಉಂಟಾಗುತ್ತಿದೆ. ಪ್ಲಾಸ್ಟಿಕ್ ಬಳಕೆ ತ್ಯಾಜ್ಯ ನಿರ್ವಹಣೆಗೆ ಸವಾಲಾಗಿದೆ. ಇದರ ನಿವಾರಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ತಮ್ಮ ಕಾರ್ಯ ಕ್ಷೇತ್ರದಲ್ಲಿ ಕಾರ್ಯೋನ್ಮುಖರಾಗುವಂತೆ ಹಾಗೂ ಹಸಿರು ಶಿಷ್ಟಾಚಾರ ಜಾರಿಗೆ ತರುವಂತೆ ತಿಳಿಸಿದರು. ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ನಾಗೇಶ್ ರಾಯ್ಕರ್ ಉಪಸ್ಥಿತರಿದ್ದರು. ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್ ಸ್ವಾಗತಿಸಿ, ವಂದಿಸಿದರು.
Advertisement