ಬೀದರ: ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಘನ ತ್ಯಾಜ್ಯ ವಸ್ತುಗಳ ವೈಜ್ಞಾನಿಕ ವಿಲೇವಾರಿಗಾಗಿ 500 ಕೋಟಿ ರೂ. ಯೋಜನೆ ರೂಪಿಸಿ ಜಾರಿಗೆ ತರಲು ಉದ್ದೇಶಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.
ನಗರದ ಜಿಲ್ಲಾ ರಂಗಮಂದಿರದಲ್ಲಿ ರವಿವಾರ ರೋಟರಿ ಕ್ಲಬ್ಸ್ ಆಫ್ ಬೀದರ ಮತ್ತು ರೋಟರಿ ಇನ್ನರ್ ವೀಲ್‌ನಿಂದ ಸರ್ಕಾರಿ ಶಾಲೆ ವಿದ್ಯಾರ್ಥಿಗಳಲ್ಲಿ ಶೌಚಾಲಯ, ವಾಷ್ ಬೇಸಿನ್ ನಿರ್ಮಾಣ, ಊಟಕ್ಕೆ ಮುನ್ನ ಸಾಬೂನಿನಿಂದ ಕೈತೊಳೆಯುವಿಕೆ ಕುರಿತು ತಿಳಿವಳಿಕೆ ಮೂಡಿಸಲು ಆಯೋಜಿಸಿದ್ದ ರೋಟರಿ ಅಂತರ್ ಜಿಲ್ಲಾ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದ ಎಲ್ಲ ನಗರಸಭೆ, ಪುರಸಭೆ ಸೇರಿದಂತೆ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಜಾರಿಗೆ ತರಲು ಚಿಂತನೆ ಇದೆ ಎಂದರು.
ಜಿಲ್ಲೆಯ ಸರ್ಕಾರಿ ಶಾಲೆಗಳ ಪೈಕಿ ಎಷ್ಟು ಶಾಲೆಗಳಲ್ಲಿ ಶೌಚಾಲಯ ನಿರ್ಮಿಸಲಾಗಿದೆ, ಎಲ್ಲೆಲ್ಲಿ ಶುದ್ಧ ಕುಡಿವ ನೀರಿನ ವ್ಯವಸ್ಥೆ ಮಾಡಲಾಗಿದೆ ಎಂಬ ಬಗ್ಗೆ ದಾಖಲೆ ಬೇಕಾದಷ್ಟು ಸಿಗುತ್ತವೆ. ಆದರೆ ವಾಸ್ತವ ಏನಿದೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು. ಇಂದು ಸರ್ಕಾರದಿಂದ ವಿದ್ಯಾರ್ಥಿಗಳಿಗೆ ಸಾಕಷ್ಟು ಹಣ ಬರುತ್ತಿದೆ. ಆದರೆ ಈ ಹಣ ಉದ್ದೇಶಿತ ಕೆಲಸಕ್ಕೆ ಬಳಕೆಯಾಗಿರುವುದನ್ನು ಗಮನಿಸಿದಾಗ ನಿರಾಶೆಯಾಗುತ್ತದೆ ಎಂದು ಹೇಳಿದರು.
ರೋಟರಿ ಕಲ್ಯಾಣ ವಲಯ ಸಹಾಯಕ ಗವರ್ನರ್ ಬಸವರಾಜ ಧನ್ನೂರ ಪ್ರಾಸ್ತಾವಿಕವಾಗಿ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಬಾಲಕ ಮತ್ತು ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯ, ವಾಶ್ ಬೇಸಿನ್, ಶುದ್ಧ ಕುಡಿಯುವ ನೀರಿನ ಘಟಕ ಅಗತ್ಯವಿದೆ. ಕೈ ತೊಳೆದುಕೊಳ್ಳುವ ಸಾಬೂನು ಮತ್ತು ಶೌಚಾಲಯ ಸ್ವತ್ಛಗೊಳಿಸಲು ಫಿನಾಯಿಲ್ ಅನ್ನೂ ಪೂರೈಸಬೇಕಿದೆ. ರೋಟರಿ ಕ್ಲಬ್ ಈ ದಿಸೆಯಲ್ಲಿ ಅರಿವು ಮೂಡಿಸಲಿದೆ ಎಂದು ಹೇಳಿದರು.
ರೋಟರಿ ಇಂಡಿಯಾ ವಿನ್ಸ್ ಸದಸ್ಯ ಕಾರ್ಯದರ್ಶಿ ರಮೇಶ ಅಗ್ರವಾಲ್, ರವಿ ವದ್ಲಾಮಣಿ ಮುಖ್ಯ ಭಾಷಣ ಮಾಡಿದರು. ರೋಟರಿ ಜಿಲ್ಲಾ ಗವರ್ನರ್ ಕೆ.ಮಧುಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ಡಾ| ಮಹೇಶ ಕೊತಬಗಿ, ಜೆ.ಅಬ್ರಾಹಮ್, ವೆಂಕಟೇಶ ಚನ್ನಾ, ಜಿ.ಎನ್. ವರಲಕ್ಷ್ಮೀ, ಕೆ. ಚಂದ್ರಸೇನನ್, ಕೆ. ಶ್ರೀರಾಮ ಮೂರ್ತಿ, ಗುರುನಾಥ ಕೊಳ್ಳುರ, ಸುರೇಶ ಚನ್ನಶೆಟ್ಟಿ ವೇದಿಕೆಯಲ್ಲಿದ್ದರು. ತೆಲಂಗಾಣ, ಮಹಾರಾಷ್ಟ್ರ, ಆಂಧ್ರ ರೋಟರಿ ಪ್ರತಿನಿಧಿಗಳು ಪಾಲ್ಗೊಂಡಿದ್ದರು.