Advertisement
ಸೂರಿಂಜೆ: ಸೂರಿಂಜೆ ಗ್ರಾಮದಲ್ಲಿ ತ್ಯಾಜ್ಯ ವಿಲೇವಾರಿಗೆ ಸಮರ್ಪಕ ವ್ಯವಸ್ಥೆಯಿಲ್ಲದೆ ರಸ್ತೆಯುದ್ದಕ್ಕೂ ಪ್ಲಾಸ್ಟಿಕ್, ಮಾಂಸದ ತ್ಯಾಜ್ಯ ತುಂಬಿದ ಚೀಲಗಳು, ಬೇಡದ ವಸ್ತುಗಳು ಕಂಡು ಬರುತ್ತಿವೆ. ಇಲ್ಲಿ ಮನೆ ಮನೆ ತ್ಯಾಜ್ಯ ಸಂಗ್ರಹಿಸುವ ವ್ಯವಸ್ಥೆಯಿಲ್ಲ. ಕಸ ಹಾಕಲು ತೊಟ್ಟಿಯಿದ್ದರೂ ತುಂಬಿ ಹೊರಭಾಗದಲ್ಲಿ ಚೆಲ್ಲಾಪಿಲ್ಲಿಯಾಗಿ ಹರಡಿದ್ದು, ಇದು ಸ್ಥಳೀಯರಿಗೆ ಅನಾರೋಗ್ಯ ಕಾಡುವ ಭೀತಿ ಎದುರಾಗಿದೆ.
Related Articles
ತ್ಯಾಜ್ಯ ಸಂಸ್ಕರಣೆಗೆ ಜಾಗ ಗುರುತಿಸಿದ್ದರೂ ಘಟಕ ನಿರ್ಮಾಣಕ್ಕೆ ಸರಕಾರ ಅನುದಾನ ಒದಗಿಸಿಲ್ಲ. ಹೆಚ್ಚಿನ ವಸತಿ ಬಡಾವಣೆ, ಅಂಗಡಿ, ಮಾಂಸದ ಅಂಗಡಿಗಳು ಇರುವುದರಿಂದ ನಿತ್ಯ ಕೆ.ಜಿ.ಗಟ್ಟಲೆ ತ್ಯಾಜ್ಯ ಸಂಗ್ರಹವಾಗುತ್ತದೆ. ಪಂಚಾಯತ್‌ನಲ್ಲಿ ವ್ಯವಸ್ಥೆ ಇಲ್ಲದ ಪರಿಣಾಮ ಸುಲಭವಾಗಿ ಕಂಡಲ್ಲಿ ತ್ಯಾಜ್ಯ ಬಿಸಾಡುವ ಪ್ರವೃತ್ತಿ ಹಲವರಲ್ಲಿ ಬೆಳೆದಿದೆ.
Advertisement
ಜಲಜೀವನ್, ಮರವೂರು ಅಣೆಕಟ್ಟಿನ ಸೌಲಭ್ಯ ಇರುವುದರಿಂದ ನೀರಿನ ಸಮಸ್ಯೆ ಹಾಗೂ ವಿದ್ಯುತ್ ದೀಪದ ಸಮಸ್ಯೆ ಇಲ್ಲಿ ಅಷ್ಟಾಗಿ ಇಲ್ಲವೆಂದು ಹೇಳಬಹುದು. ಸಂಪರ್ಕ, ಸಾರಿಗೆ ವ್ಯವಸ್ಥೆ ಜನಸ್ನೇಹಿಯಾಗಿದೆ.
ಇತರ ಸಮಸ್ಯೆಗಳೇನು?– ಬಡವರಿಗೆ ನಿವೇಶನ ನೀಡಲು ಅಂದಾಜು 3 ಎಕರೆ ಜಾಗವನ್ನು ಜಿಲ್ಲಾಧಿಕಾರಿ ಕಾದಿರಿಸಿದ್ದರೂ ಬಡವರಿಗೆ ಸಿಕ್ಕಿಲ್ಲ. ಅತಿಕ್ರಮಣವಾಗುವ ಮುನ್ನ ಹಂಚಿಕೆ ಆಗಬೇಕಿದೆ.
– ಹಲವಾರು ಕಡೆ ಒಳರಸ್ತೆಗಳು ಸಂಪೂರ್ಣ ಕೆಟ್ಟು ಹೋಗಿದ್ದು, ಕಾಯಕಲ್ಪ ಸಿಗಬೇಕಿದೆ.
– ಬೊಳ್ಳಾಯರು ಸರಕಾರಿ ಶಾಲೆಗೆ ಸುಣ್ಣ ಬಣ್ಣ ಹಚ್ಚಿ, ಕಟ್ಟಡವನ್ನು ದುರಸ್ತಿಗೊಳಿಸಿ ಮಕ್ಕಳು ಬರುವಂತೆ ಕ್ರಮ ಕೈಗೊಳ್ಳಬೇಕಿದೆ.
– ಶಾಂತಿ ಸೌಹಾರ್ದಕ್ಕೆ ಒತ್ತು ನೀಡಲು, ಮಕ್ಕಳು ದುಶ್ಚಟಗಳಿಗೆ ಬಲಿಯಾಗದಂತೆ ತಡೆಯಲು, ನಿಗಾವಹಿಸಲು ಪೊಲೀಸ್ ಔಟ್ ಪೋಸ್ಟ್ ಅಗತ್ಯವಿದೆ.
– ಕಾಟಿಪಳ್ಳ-ಸೂರಿಂಜೆ ಸಂಪರ್ಕ ರಸ್ತೆ ವಿಸ್ತರಣೆಗೆ ಕ್ರಮ ಅಗತ್ಯ. ಈ ಪ್ರದೇಶ ಕಿನ್ನಿಗೋಳಿಗೆ ಹತ್ತಿರವಾಗಿರುವುದರಿಂದ ವಾಹನ ಓಡಾಟ ಹೆಚ್ಚಾಗಿದೆ. ಹಾಗಾಗಿ ರಸ್ತೆ ಅಭಿವೃದ್ಧಿಗೆ ಆದ್ಯತೆ ನೀಡಬೇಕಿದೆ.
– ಎರಡು ಸರಕಾರಿ ಪ್ರೌಢಶಾಲೆಗಳಿದ್ದು, ಈ ಭಾಗದಲ್ಲಿ ಸರಕಾರಿ ಪಿಯು ಕಾಲೇಜೊಂದು ಸ್ಥಾಪಿಸಬೇಕೆಂಬುದು ಗ್ರಾಮಸ್ಥರ ಬೇಡಿಕೆಯಾಗಿದೆ. – ಲಕ್ಷ್ಮೀನಾರಾಯಣ ರಾವ್