ಗಂಗಾವತಿ: ಕಿಷ್ಕಿಂದಾ ಪ್ರದೇಶದ ಹಂಪಿ ವಿರೂಪಾಪುರಗಡ್ಡಿ ಭಾಗದಲ್ಲಿ ತಲೆ ಎತ್ತಿರುವ ರೆಸ್ಟೋರೆಂಟ್, ಹೋಟೆಲ್‌ಗಳು ಶೌಚಾಲಯದ ನೀರು ಸೇರಿದಂತೆ ಎಲ್ಲ ತ್ಯಾಜ್ಯವನ್ನು ನೇರವಾಗಿ ತುಂಗಭದ್ರಾ ನದಿಗೆ ಬಿಡುತ್ತಿರುವುದರಿಂದ ನದಿ ನೀರು ಕಲ್ಮಷಗೊಳುತ್ತಿದೆ. ಹಂಪಿ, ವಿರೂಪಾಪೂರಗಡ್ಡಿ, ಸಾಣಾಪೂರ, ಹನುಮನಹಳ್ಳಿ ಹಾಗೂ ಆನೆಗೊಂದಿ ಹತ್ತಿರ ಹರಿಯುವ ತುಂಗಭದ್ರಾ ನದಿ ಕಲುಷಿತವಾಗಿದೆ.
ಈ ವಿಷಯವನ್ನು ಹಂಪಿಗೆ ಭೇಟಿ ನೀಡುವ ವಿದೇಶಿ ಪ್ರವಾಸಿಗರು ಫೇಸ್‌ಬುಕ್ ಹಾಗೂ ಇತರೆ ಸಾಮಾಜಿಕ ಜಾಲತಾಣಗಳಲ್ಲಿ ನದಿ ನೀರು ಕಲುಷಿತಗೊಂಡಿದೆ ಎಂದು ಸ್ಟೇಟಸ್ ಹಾಕಿಕೊಂಡಿದ್ದಾರೆ. ನದಿಯಲ್ಲಿ ಸ್ನಾನ ಮಾಡಿದರೆ ಹಾಗೂ ಈ ನೀರು ಕುಡಿದರೆ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ ಎಂದು ವಿದೇಶಿಗರು ಸಾಮಾಜಿಕ ಜಾಲತಾಣದ ಮೂಲಕ ಎಚ್ಚರಿಕೆ ನೀಡಿದ್ದಾರೆ.
ಹಂಪಿ, ವಿರೂಪಾಪೂರಗಡ್ಡಿ ಪ್ರದೇಶದಲ್ಲಿ ನಿತ್ಯ ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ. ಹಂಪಿ, ಅಂಜನಾದ್ರಿಬೆಟ್ಟ, ಪಂಪಾ ಸರೋವರ ಸುತ್ತಮುತ್ತಲಿರುವ ರೆಸ್ಟೋರೆಂಟ್, ಹೋಟೆಲ್‌ಗಳಲ್ಲಿ ತಂಗುತ್ತಾರೆ. ಅದರ ಮಾಲೀಕರು ಮದ್ಯದ ಬಾಟಲಿ, ಪ್ಲಾಸ್ಟಿಕ್, ಹೋಟೆಲ್ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡದೆ ನದಿ ದಂಡೆಗೆ ಹಾಕುತ್ತಿದ್ದಾರೆ. ಶೌಚಾಲಯದ ನೀರನ್ನು ಇಂಗಿಸದೆ ಅಥವಾ ಶುದ್ಧೀಕರಿಸದೆ ನೇರವಾಗಿ ನದಿಗೆ ಬಿಡುತ್ತಿದ್ದಾರೆ.
ಪರಿಸರ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಒಮ್ಮೆಯೂ ಇಲ್ಲಿಗೆ ಭೇಟಿ ನೀಡಿ ಪರಿಸರ ಹಾಳು ಮಾಡುತ್ತಿರುವವರ ವಿರುದ್ಧ ಕ್ರಮಕೈಗೊಂಡಿಲ್ಲ. ಆನೆಗೊಂದಿಯಿಂದ ಸಾಣಾಪೂರದವರೆಗೆ ನದಿ ಪಕ್ಕದದಲ್ಲಿರುವ ಹೊಲ-ಗದ್ದೆಗಳಲ್ಲಿ ಘನತ್ಯಾಜ್ಯ ಹಾಕುವ ಮೂಲಕ ನೈರ್ಮಲ್ಯ ಹಾಳು ಮಾಡಲಾಗಿದೆ. ಸ್ಥಳೀಯ ಗ್ರಾಪಂ ಅಥವಾ ತಾಲೂಕಾಡಳಿತ, ಅರಣ್ಯ ಇಲಾಖೆ ಮತ್ತು ತುಂಗಭದ್ರಾ ಬೋರ್ಡ್ ನಿರ್ಲಕ್ಷ್ಯದಿಂದ ಈ ಭಾಗದಲ್ಲಿ ನದಿ ಪ್ರದೇಶ ಮಾಲಿನ್ಯವಾಗಿದೆ.
ನದಿಗೆ ಪ್ಲಾಸ್ಟಿಕ್ ಹಾಗೂ ಮದ್ಯದ ಬಾಟಲ್ ಸೇರ್ಪಡೆಯಿಂದ ಮಾಲಿನ್ಯವಾಗಿದೆ. ನದಿಯಲ್ಲಿ ಸ್ನಾನ ಮಾಡುವುದರಿಂದ ಚರ್ಮರೋಗ, ನೀರು ಸೇವನೆಯಿಂದ ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳು ಬರುತ್ತಿದ್ದು, ನಮ್ಮ ಸ್ನೇಹಿತರ ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಚರ್ಚೆಯಾಗುತ್ತಿದೆ. ಸರ್ಕಾರ ಕೂಡಲೇ ಕ್ರಮ ಕೈಗೊಳ್ಳದಿದ್ದರೆ ಪರಿಸರ ನಾಶ ಖಚಿತ.
ಡೇವಿಡ್, ಇಸ್ರೇಲ್ ದೇಶದ ಪ್ರವಾಸಿ
ಕಿಷ್ಕಿಂದಾ, ವಿರೂಪಾಪೂರಗಡ್ಡಿ ಪ್ರದೇಶದಲ್ಲಿ ಅತಿಯಾದ ಪ್ಲಾಸ್ಟಿಕ್ ಬಳಕೆಯಿಂದ ಪರಿಸರ ಮಾಲಿನ್ಯವಾಗುತ್ತಿದೆ. ಜಿಲ್ಲಾಡಳಿತ ಪರಿಸರ ಜಾಗೃತಿ ಮೂಡಿಸುವ ಕಾರ್ಯ ಮಾಡಲು ಯೋಜಿಸಿದೆ. ಕೆಲ ರೆಸ್ಟೋರೆಂಟ್, ಹೊಟೇಲ್‌ನವರು ನದಿ ದಂಡೆಗೆ ಶೌಚಾಲಯದ ನೀರು ಬಿಡುತ್ತಿದ್ದು, ಪ್ಲಾಸ್ಟಿಕ್ ಸಾಮಾಗ್ರಿ ಎಸೆಯುತ್ತಿದ್ದಾರೆ. ಅಂತಹವರ ವಿರುದ್ಧ ಕ್ರಮಕೈಗೊಳ್ಳಲು ಹಂಪಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಸೂಚನೆ ನೀಡಲಾಗುತ್ತದೆ.
.
ಪಿ. ಸುನೀಲಕುಮಾರ, ಜಿಲ್ಲಾಧಿಕಾರಿ
ತುಂಗಭದ್ರಾ ನದಿಯಲ್ಲಿ ಅಪರೂಪದ ಜೀವಸಂಕುಲವಿದೆ. ನದಿ ನೀರು ಕಲುಷಿತವಾಗಿರುವ ಕಾರಣ ನೀರನಾಯಿ (ಚೀರನಾಯಿ) ಮತ್ತು ವಿವಿಧ ಬಗೆಯ ಮೀನುಗಳ ಸಂತತಿ ನಾಶವಾಗುತ್ತಿದೆ. ಮೀನುಗಾರರ ಬದುಕು ಶೋಚನೀಯವಾಗಿದೆ. ಸರ್ಕಾರ ಕೂಡಲೇ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕಿದೆ.
. ಸಮದ್ ಕೊಟ್ಟೂರು, ವನ್ಯಜೀವಿ ಸಂಶೋಧಕರು
ಕೆ. ನಿಂಗಜ್ಜ