Advertisement

ಮಿನಿ ವಿಧಾನಸೌಧದ ಹಿಂಭಾಗದಲ್ಲಿ ತ್ಯಾಜ್ಯ ರಾಶಿ

09:26 AM Jan 16, 2019 | |

ನಗರ : ತಾಲೂಕಿನ ಶಕ್ತಿಕೇಂದ್ರ ಪುತ್ತೂರು ಮಿನಿ ವಿಧಾನಸೌಧದ ಹಿಂಭಾಗ ರಾಶಿ ಬಿದ್ದಿದ್ದ ತ್ಯಾಜ್ಯ ರಾಶಿಯನ್ನು ತೆರವು ಮಾಡಲಾಗಿದೆ. ಆದರೆ ಮತ್ತೆ ಇಲ್ಲಿ ತ್ಯಾಜ್ಯ ತಂದು ಸುರಿಯುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು ಇದರತ್ತ ಗಮನ ಹರಿಸುವ ಅಗತ್ಯವಿದೆ.

Advertisement

ಸಹಾಯಕ ಆಯುಕ್ತರ ಕಚೇರಿಯೂ ಮಿನಿ ವಿಧಾನಸೌಧದಲ್ಲಿ ಇರುವುದರಿಂದ ಇದು ಮೂರು ತಾಲೂಕುಗಳ ಶಕ್ತಿ ಕೇಂದ್ರ ಎಂದರೂ ತಪ್ಪಾಗಲಾರದು. ಈ ಮೂರು ತಾಲೂಕುಗಳ ಕಂದಾಯ ಸೇರಿದಂತೆ ಎಲ್ಲ ಕೆಲಸಗಳಿಗೂ ವೇಗ ತುಂಬಬೇಕಾಗಿರುವುದು ಇಲ್ಲಿಂದಲೇ. ಇಂತಹ ಶಕ್ತಿ ಕೇಂದ್ರವೇ ತ್ಯಾಜ್ಯವನ್ನು ಸರಿಯಾಗಿ ನಿರ್ವಹಿಸದೇ ಇದ್ದಲ್ಲಿ, ಜನಸಾಮಾನ್ಯರಿಗೆ ಬುದ್ಧಿಮಾತು ಹೇಳುವುದು ಹೇಗೆ?

ಒಮ್ಮೆಗೆ ರಾಶಿ ಬಿದ್ದಿದ್ದ ತ್ಯಾಜ್ಯ ರಾಶಿಯನ್ನು ಅಧಿಕಾರಿಗಳೇನೋ ತೆರವು ಮಾಡಿಸಿದ್ದಾರೆ. ಆದರೆ ತೆರವು ಮಾಡಿಸಿದಷ್ಟೇ ವೇಗವಾಗಿ ಮತ್ತೆ ತ್ಯಾಜ್ಯ ಬಂದು ತುಂಬುತ್ತಿದೆ. ಇದೇ ಜಾಗದಲ್ಲಿ ತ್ಯಾಜ್ಯವನ್ನು ತಂದು ಸುರಿಯುತ್ತಿರುವುದು ಗಮನಕ್ಕೆ ಬಂದಿದೆ. ಆದ್ದರಿಂದ ತ್ಯಾಜ್ಯ ನಿರ್ವಹಣೆ ವಿಷಯವನ್ನು ಪುತ್ತೂರು ಮಿನಿ ವಿಧಾನ ಸೌಧದ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಬೇಕಾದ ಅಗತ್ಯ ಇದೆ.

ಪುತ್ತೂರು ಪೇಟೆಯ ಅಂಗಡಿ, ಮನೆಗಳ ತ್ಯಾಜ್ಯವನ್ನು ಪ್ರತಿ ಎರಡು ದಿನಗಳಿಗೊಮ್ಮೆ ವಿಲೇವಾರಿ ಮಾಡಲಾಗುತ್ತಿದೆ. ಇದರಂತೆ ಮಿನಿ ವಿಧಾನಸೌಧದ ತ್ಯಾಜ್ಯವನ್ನು ಪ್ರತಿ ಎರಡು ದಿನಗಳಿಗೊಮ್ಮೆಯಾದರೂ ವಿಲೇ ಮಾಡಬೇಕು. ಹಾಗೆಂದು ಇದು ತ್ಯಾಜ್ಯ ಸಂಗ್ರಹಾಗಾರರ ಜವಾಬ್ದಾರಿ ಎಂದಲ್ಲ. ಸೌಧದ ಕಸವನ್ನು ಒಂದು ಬುಟ್ಟಿಯಲ್ಲಿ ತುಂಬಿಸಿಟ್ಟು, ಅದನ್ನು ತ್ಯಾಜ್ಯ ಸಂಗ್ರಹಕಾರರಿಗೆ ನೀಡುವ ಕೆಲಸವನ್ನು ಅಧಿಕಾರಿಗಳು ಹಾಗೂ ಸಿಬಂದಿಯೇ ನಿರ್ವಹಿಸಬೇಕು.

ತೆರವಿಗೆ ಸೂಚನೆ
ತ್ಯಾಜ್ಯ ರಾಶಿ ಬಿದ್ದಿರುವುದನ್ನು ನೋಡಿ, ತೆರವಿಗೆ ಸೂಚಿಸಿದ್ದೆ. ಮುಂದೆ ಪ್ರತಿ 2 ದಿನಗಳಿಗೊಮ್ಮೆ ತ್ಯಾಜ್ಯ ಕೊಂಡೊಯ್ಯುವಂತೆ ಸೂಚನೆ ನೀಡಿದ್ದೇನೆ.
– ಎಚ್.ಕೆ. ಕೃಷ್ಣಮೂರ್ತಿ
ಸಹಾಯಕ ಆಯುಕ್ತರು, ಪುತ್ತೂರು

Advertisement

ಸುದಿನ ವರದಿ
ಪುತ್ತೂರು ಮಿನಿ ವಿಧಾನಸೌಧದ ಹಿಂಬದಿ ತ್ಯಾಜ್ಯ ರಾಶಿ ಬಿದ್ದಿದ್ದು, ವಿಲೇವಾರಿಗೆ ಹಿನ್ನಡೆಯಾಗುತ್ತಿದೆ ಎನ್ನುವ ವರದಿಯನ್ನು ಜ. 8ರಂದು ‘ಉದಯವಾಣಿ’ ಸುದಿನ ಪ್ರಕಟಿಸಿತ್ತು. ಈ ವರದಿಗೆ ಸ್ಪಂದಿಸಿರುವ ಅಧಿಕಾರಿಗಳು, ತತ್‌ಕ್ಷಣವೇ ತ್ಯಾಜ್ಯವನ್ನು ತೆರವು ಮಾಡಿಸಿದ್ದರು. ಆದರೆ ಕೆಲವು ದಿನಗಳಲ್ಲೇ ಮತ್ತದೇ ಸ್ಥಳದಲ್ಲಿ ತ್ಯಾಜ್ಯ ಸುರಿಯಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next