ಹೊಸದಿಲ್ಲಿ: ಭಾರತ ಮತ್ತು ಆಸ್ಟ್ರೇಲಿಯ ನಡುವಿನ ಬಾರ್ಡರ್-ಗವಾಸ್ಕರ್ ಟ್ರೋಫಿ ಆರಂಭಕ್ಕೆ ಇನ್ನೂ ಕೆಲವು ದಿನಗಳು ಬಾಕಿ ಉಳಿದಿದ್ದು ಸದ್ಯ ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ಆಸೀಸ್ ಮಾಜಿ ನಾಯಕ ರಿಕಿ ಪಾಂಟಿಂಗ್ ನಡುವೆ ವಾಗ್ಯುದ್ಧ ಹೆಚ್ಚು ಸುದ್ದಿಯಾಗುತ್ತಿದೆ.
ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮ ಅವರ ಬಗ್ಗೆ ಪಾಂಟಿಂಗ್ ಅವರ ಹೇಳಿಕೆಗಳ ಕುರಿತು ಪ್ರತಿಕ್ರಿಯೆ ನೀಡಿದ್ದ ಗಂಭೀರ್, ಮಾಜಿ ನಾಯಕ ತಮ್ಮದೇ ತಂಡದ ವಿಚಾರಕ್ಕೆ ಮಾತ್ರ ಅಂಟಿಕೊಳ್ಳುವಂತೆ ಸೂಚಿಸಿದ್ದರು. ಇದೀಗ, ಪಾಂಟಿಂಗ್ ಕೂಡ ”ಗಂಭೀರ್ ಅವರದ್ದು ಚುಚ್ಚಿ ಮಾತನಾಡುವ ಸ್ವಭಾವ”ಎಂದು ಹೇಳಿದ್ದಾರೆ. ಭಾರತ ತಂಡ ಆಸ್ಟ್ರೇಲಿಯಕ್ಕೆ ಹಾರುವ ಮುನ್ನ ಇಬ್ಬರು ವಾಗ್ಯುದ್ಧ ನಡೆಸುತ್ತಿರುವುದು ಭಾರಿ ಚರ್ಚೆಗೆ ಗುರಿಯಾಗಿದೆ.
”ಗೌತಮ್ ಗಂಭೀರ್ ಅವರು ಸಾಕಷ್ಟು ಚುಚ್ಚಿ ಮಾತನಾಡುವ ಸ್ವಭಾವದವರಾಗಿದ್ದಾರೆ, ಆದ್ದರಿಂದ ಅವರು ಹೇಳಿದ್ದರಲ್ಲಿ ನನಗೆ ಆಶ್ಚರ್ಯವಿಲ್ಲ” ಎಂದು ಪಾಂಟಿಂಗ್ ಸುದ್ದಿ ವಾಹಿನಿಯೊಂದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
”ವಿರಾಟ್ ಕೊಹ್ಲಿ ಕುರಿತಾದ ನನ್ನ ಹೇಳಿಕೆಗಳು ಯಾವುದೇ ರೀತಿಯಲ್ಲಿ ಅವಮಾನ ಅಥವಾ ಟೀಕೆಯಲ್ಲ” ಎಂದು ಪಾಂಟಿಂಗ್ ಸ್ಪಷ್ಟಪಡಿಸಿದ್ದಾರೆ. ”ಕೊಹ್ಲಿ ಅವರು ಕಳೆದುಹೋದ ಫಾರ್ಮ್ ಅನ್ನು ಮರಳಿ ಪಡೆಯುತ್ತಾರೆ” ಎಂದು ಹೇಳಿದ್ದಾರೆ.
ಸೋಮವಾರ ನಡೆದ ಸರಣಿಯ ಪೂರ್ವಭಾವಿ ಪತ್ರಿಕಾಗೋಷ್ಠಿಯಲ್ಲಿ ಪಾಂಟಿಂಗ್ ಅವರ ಹೇಳಿಕೆಗಳ ಕುರಿತು ಗಂಭೀರ್ ಪ್ರತಿಕ್ರಿಯಿಸಿ, ‘ಕೊಹ್ಲಿ ಮತ್ತು ರೋಹಿತ್ ಬಗ್ಗೆ ಆಸ್ಟ್ರೇಲಿಯದ ಶ್ರೇಷ್ಠ ನಾಯಕನ ಟೀಕೆಗಳಿಗೆ ತೀಕ್ಷ್ಣವಾದ ಉತ್ತರವನ್ನು ನೀಡಿ “ಪಾಂಟಿಂಗ್ಗೂ ಭಾರತೀಯ ಕ್ರಿಕೆಟ್ಗೂ ಏನು ಸಂಬಂಧ? ಆಸ್ಟ್ರೇಲಿಯನ್ ಕ್ರಿಕೆಟ್ ಬಗ್ಗೆ ಅವರು ಯೋಚಿಸಬೇಕು. ನನಗೆ ಯಾವುದೇ ಕಾಳಜಿ ಇಲ್ಲ.ಕೊಹ್ಲಿ ಮತ್ತು ರೋಹಿತ್ ನಂಬಲಾಗದಷ್ಟು ಕಠಿನ ಆಟಗಾರರು. ಅವರು ಭಾರತೀಯ ಕ್ರಿಕೆಟ್ಗಾಗಿ ಸಾಕಷ್ಟು ಸಾಧಿಸಿದ್ದಾರೆ ಮತ್ತು ಭವಿಷ್ಯದಲ್ಲಿಯೂ ಸಾಕಷ್ಟು ಸಾಧಿಸಲಿದ್ದಾರೆ” ಎಂದಿದ್ದರು.