ಧಾರವಾಡ: ಜಿಲ್ಲೆಯಲ್ಲಿ 1,272ಕ್ಕೂ ಹೆಚ್ಚು ಕೆಪಿಎಂಇ ನೋಂದಾಯಿತ ಆಸ್ಪತ್ರೆಗಳಿವೆ. ಅವುಗಳಲ್ಲಿ ಕೆಲವು ಸಕ್ರಿಯವಾಗಿಲ್ಲ. ಕಾರ್ಯ ನಿರ್ವಹಿಸದಿರುವ ಆಸ್ಪತ್ರೆಗಳ ಕುರಿತು ಖುದ್ದು ಪರಿಶೀಲನೆ ಆಗಬೇಕು ಎಂದು ಡಿಸಿ ದೀಪಾ ಚೋಳನ್ ಹೇಳಿದರು.
ಡಿಸಿ ಕಚೇರಿಯಲ್ಲಿ ಜಿಲ್ಲಾ ಆರೋಗ್ಯ ಕಾರ್ಯಪಡೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಖಾಸಗಿಯಾಗಿ ವೃತ್ತಿ ನಿರ್ವಹಿಸುತ್ತಿರುವ ಎಲ್ಲಾ ಅಲೋಪತಿ ಹಾಗೂ ವಿವಿಧ ಆಯುಷ್ ಪದ್ಧತಿಗಳ ವೈದ್ಯರು ತಮ್ಮ ಬಳಿ ಚಿಕಿತ್ಸೆಗೆ ಬರುವ ರೋಗಿಗಳಲ್ಲಿ ನೆಗಡಿ ಹಾಗೂ ತೀವ್ರ ಜ್ವರ (ಐಎಲ್‌ಐ) ಲಕ್ಷಣಗಳಿರುವವರು ಕಂಡುಬಂದರೆ ಕೂಡಲೇ ಆ ಕುರಿತ ಮಾಹಿತಿಯನ್ನು ಕೆಪಿಎಂಇ ಪೋರ್ಟಲ್ ಮೂಲಕ ಜಿಲ್ಲಾಡಳಿತಕ್ಕೆ ಒದಗಿಸಬೇಕು. ಈ ಸೂಚನೆಯನ್ನು ಪಾಲಿಸದ ಆಸ್ಪತ್ರೆಗಳು ಮತ್ತು ವೈದ್ಯರಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿ, ನಂತರ ಕೆಪಿಎಂಇ ನೋಂದಣಿಯನ್ನು ಅಮಾನತು ಮಾಡಲಾಗುವುದು ಎಂದರು.
ಜಿಲ್ಲೆಯ ರೈಲು, ವಿಮಾನ ನಿಲ್ದಾಣಗಳಲ್ಲಿ ಹೊರ ರಾಜ್ಯಗಳಿಂದ ಆಗಮಿಸುವ ಜನರ ಮಾಹಿತಿ ಪ್ರತಿದಿನ ಕ್ರೋಢೀಕರಿಸಲಾಗುತ್ತಿದೆ. ಸೇವಾಸಿಂಧು ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಂಡಿರುವ ಜನರಲ್ಲಿ ಎಷ್ಟು ಜನ ಜಿಲ್ಲೆಗೆ ಆಗಮಿಸಿದ್ದಾರೆ ಎಂಬುದನ್ನು ಪರಿಶೀಲಿಸಬೇಕು. ಈ ಮಾಹಿತಿಯನ್ನು ಐಎಸ್‌ಟಿ ಮೊಬೈಲ್ ಆ್ಯಪ್‌ನಲ್ಲಿ ಅಪ್‌ಡೇಟ್ ಮಾಡಬೇಕು. ಜಿಲ್ಲೆಯಲ್ಲಿ ಗುರುತಿಸಲಾಗಿರುವ ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಪ್ರತಿನಿತ್ಯ ಮೂರು ಪಾಳಿಗಳಲ್ಲಿ ಕರ್ತವ್ಯ ನಿರ್ವಹಿಸಲು ಅಗತ್ಯವಿರುವ ವೈದ್ಯರು, ನರ್ಸ್ ಹಾಗೂ ಗ್ರೂಪ್ “ಡಿ’ ಸಿಬ್ಬಂದಿ ಪಟ್ಟಿ ಮಾಡಿಟ್ಟುಕೊಳ್ಳಬೇಕು ಎಂದು ಸೂಚಿಸಿದರು.
ಮಹಾನಗರ ಪಾಲಿಕೆ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳು ಮಾಸ್ಕ್ ಧರಿಸದ, ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವ ವ್ಯಕ್ತಿಗಳಿಂದ ದಂಡ ಸಂಗ್ರಹಿಸುವ ಕಾರ್ಯ ಚುರುಕುಗೊಳಿಸಬೇಕು. ಸರ್ಕಾರದ ಪರಿಷ್ಕೃತ ಮಾರ್ಗಸೂಚಿಗಳಂತೆ ಕೊಳಚೆ ಪ್ರದೇಶದ ನಿವಾಸಿಗಳು, ಬೀದಿ ಬದಿ ವ್ಯಾಪಾರಸ್ಥರು, ಮಾಲ್, ಸೂಪರ್ ಮಾರ್ಕೆಟ್‌ಗಳಲ್ಲಿ ಕಾರ್ಯ ನಿರ್ವಹಿಸುವ ಕೆಲಸಗಾರರು, ಹೋಟೆಲ್‌ಗಳ ಪಾರ್ಸಲ್ ಸೇವೆ ಮತ್ತು ಕೋರಿಯರ್ ಸೇವೆ ನೀಡುವ ಡೆಲಿವರಿ ಬಾಯ್ಸಗಳ ಹಾಗೂ 50 ವರ್ಷ ಮೇಲ್ಪಟ್ಟ ಮಧುಮೇಹಿಗಳು ಮತ್ತು ಇತರ ದುರ್ಬಲ ಆರೋಗ್ಯ ಹೊಂದಿರುವವರನ್ನು ಆದ್ಯತೆಯ ಮೇಲೆ ರ್‍ಯಾಂಡಮ್ ಆಗಿ ಆಯ್ದುಕೊಂಡು ಆರ್ ಟಿಪಿಸಿಆರ್ ಪೂಲ್ಡ್ ತಂತ್ರಜ್ಞಾನ ಮೂಲಕ ಕೋವಿಡ್ ತಪಾಸಣೆಗೆ ಒಳಪಡಿಸಬೇಕು ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಯಶವಂತ ಮದೀನಕರ, ಕಿಮ್ಸ್ ತಜ್ಞವೈದ್ಯ ಡಾ| ಲಕ್ಷ್ಮೀಕಾಂತ, ಎಸ್.ಎಚ್. ನರೇಗಲ್, ಜಿಲ್ಲಾ ಸರ್ವೆಕ್ಷಣಾ ಧಿಕಾರಿ ಡಾ|ಸುಜಾತಾ ಹಸವೀಮಠ, ಡಾ| ಶಶಿ ಪಾಟೀಲ, ಡಾ| ಎಸ್.ಎಂ. ನಿಂಬಣ್ಣವರ, ಡಾ| ಎಸ್. ಎಂ. ಹೊನಕೇರಿ, ಡಾ| ತನುಜಾ ಇದ್ದರು.
ಕೆಪಿಎಂಇ ಕಾಯ್ದೆಯಡಿ ನೋಂದಣಿ ಮಾಡಿಕೊಂಡು ಕಾರ್ಯ ನಿರ್ವಹಿಸುತ್ತಿರುವ ಖಾಸಗಿ ಆಸ್ಪತ್ರೆಗಳು, ಕ್ಲಿನಿಕ್‌ಗಳು ಪ್ರತಿದಿನ ತಮಲ್ಲಿ ಚಿಕಿತ್ಸೆಗೆ ಬರುವ ಕೆಮ್ಮು, ನೆಗಡಿ ಹಾಗೂ ತೀವ್ರ ಜ್ವರ (ಐಎಲ್‌ಐ) ಲಕ್ಷಣಗಳಿರುವ ವ್ಯಕ್ತಿಗಳ ಹೆಸರು, ವಿಳಾಸ ಹಾಗೂ ಸಂಪರ್ಕ ಸಂಖ್ಯೆ ಮಾಹಿತಿಯನ್ನು ಕೆಪಿಎಂಇ ಪೋರ್ಟಲ್‌ನಲ್ಲಿ ಕಡ್ಡಾಯವಾಗಿ ಅಪ್‌ಡೇಟ್ ಮಾಡಬೇಕು. ಈ ಸೂಚನೆಯನ್ನು ಪಾಲಿಸದ ಆಸ್ಪತ್ರೆಗಳ ವಿರುದ್ಧ ಸಾಂಕ್ರಾಮಿಕ ರೋಗಗಳ ತಡೆ ಕಾಯ್ದೆಯಡಿ ಶಿಸ್ತು ಕ್ರಮ ಜರುಗಿಸಲಾಗುವುದು.
– ದೀಪಾ ಚೋಳನ್, ಜಿಲ್ಲಾಧಿಕಾರಿ