Advertisement
ಈ ಸಂಬಂಧ ಮಾಜಿ ಸಚಿವ ಕುಮಾರ್ ಬಂಗಾರಪ್ಪ ನಿವಾಸದಲ್ಲಿ ತುರ್ತು ಪತ್ರಿಕಾಗೋಷ್ಠಿ ಕರೆದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ ಲಿಂಬಾವಳಿ, ರಮೇಶ್ ಜಾರಕಿಹೊಳಿ ನೇತೃತ್ವದ ತಂಡವು ನ. 25ರಿಂದ ಡಿ. 25ರ ವರೆಗೆ ಬೀದರ್‌ನಿಂದ ಬೆಳಗಾವಿ ತನಕ ಜನ ಜಾಗೃತಿ ಅಭಿಯಾನ ನಡೆಸುವುದಾಗಿ ಪ್ರಕಟಿಸಿತು.
ಕೆಲವು ದಿನಗಳಿಂದ ತಟಸ್ಥವಾಗಿದ್ದ ಈ ತಂಡ ಅತ್ಯಂತ ವ್ಯವಸ್ಥಿತವಾಗಿಯೇ ಈ ಅಭಿಯಾನದೊಂದಿಗೆ ಏಕಕಾಲಕ್ಕೆ ಸರಕಾರ ಹಾಗೂ ವಿಜಯೇಂದ್ರ ವಿರುದ್ಧ ರಣಕಹಳೆ ಮೊಳಗಿಸಿದೆ. ಅಭಿಯಾನಕ್ಕೆ ಸಂಬಂಧಪಟ್ಟಂತೆ ವಾರ್ ರೂಂ ಪ್ರಾರಂಭಿಸುವುದರ ಜತೆಗೆ ಸಂತ್ರಸ್ತರಿಂದ ಮಾಹಿತಿ ಪಡೆಯುವುದಕ್ಕಾಗಿ 9035675734 ಎಂಬ ವಾಟ್ಸ್‌ಆ್ಯಪ್ ನಂಬರ್ ಬಿಡುಗಡೆ ಮಾಡಲಾಗಿದೆ.
Related Articles
ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದಲ್ಲಿ ಜನ ಜಾಗೃತಿ ಅಭಿಯಾನ ನಡೆಯಲಿದೆ. ಯತ್ನಾಳ್ ವಿಜಯಪುರದಲ್ಲಿ ಆರಂಭಿಸಿದ ಹೋರಾಟದ ಪರಿಣಾಮವಾಗಿ ಕೇಂದ್ರದ ವಕ್ಫ್ ಸಮಿತಿ ಸದಸ್ಯರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಇದು ರೈತರಿಗಾಗಿ ಬಿಜೆಪಿ ನಡೆಸುವ ಹೋರಾಟ ಎಂದು ಪತ್ರಿಕಾಗೋಷ್ಠಿಯಲ್ಲಿ ಅರವಿಂದ ಲಿಂಬಾವಳಿ ತಿಳಿಸಿದರು.
Advertisement
ಸರಕಾರದ ವಿರುದ್ಧ ಯತ್ನಾಳ್ ಕಿಡಿಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಸನಗೌಡ ಪಾಟೀಲ್ ಯತ್ನಾಳ್, ರಾಜ್ಯದಲ್ಲಿ ಮೊದಲಿಗೆ 1 ಲಕ್ಷ ಎಕ್ರೆ ಜಮೀನು ನಮ್ಮದಿದೆ ಎಂದರು. ಈಗ 6 ಲಕ್ಷ ಎಕ್ರೆ ಭೂಮಿಯನ್ನು ವಕ್ಫ್ ಸುಪರ್ದಿಗೆ ತೆಗೆದುಕೊಳ್ಳಲು ಹೊರಟಿದ್ದಾರೆ. ಇಡೀ ದೇಶದಲ್ಲಿ 38 ಲಕ್ಷ ಎಕ್ರೆ ಜಮೀನು ತಮ್ಮದು ಎನ್ನುತ್ತಿದ್ದಾರೆ. ನಾವು ಕಾನೂನು ತಂಡದೊಂದಿಗೆ ಹೋರಾಟ ಮಾಡುತ್ತಿದ್ದೇವೆ ಎಂದರು. ರಾಜ್ಯ ಸರಕಾರವು ಜಮೀರ್ ಅಹ್ಮದ್ ಖಾನ್ ಮೂಲಕ ಹಿಂದುಗಳಿಗೆ ಬೆದರಿಕೆ ಹಾಕುವ ಕೆಲಸ ಮಾಡುತ್ತಿದೆ. ನಮ್ಮನ್ನು ಸೈತಾನ್‌ಗೆ ಹೋಲಿಸುತ್ತಿದ್ದಾರೆ. ಅಧಿಕಾರಿಗಳಿಗೆ ಧಮ್ಕಿ ಹಾಕುತ್ತಿದ್ದಾರೆ. ಸಿಎಂ ಹೆಸರಿನಲ್ಲಿ ಜಮೀರ್ ಹಾಕಿರುವ ಬೆದರಿಕೆಗೆ ಅಧಿಕಾರಿಗಳು ಬೆಚ್ಚಿಬಿದ್ದಿದ್ದಾರೆ. ಕೆಲವು ಮುಸ್ಲಿಂ ಮುಖಂಡರೂ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ನಮ್ಮ ಜತೆಗೆ ಧ್ವನಿ ಸೇರಿಸಿದ್ದಾರೆ ಎಂದು ತಿಳಿಸಿದರು. ವಕ್ಫ್ ಟ್ರಿಬ್ಯೂನಲ್ ರದ್ದಾಗಬೇಕು. ಬಿಜೆಪಿ ಕಾಲದಲ್ಲಿ ನಡೆದದ್ದನ್ನೂ ನಾವು ಸಮರ್ಥನೆ ಮಾಡುವುದಿಲ್ಲ. ಕ್ರಿಮಿನಲ್ ಪ್ರಕರಣ ರದ್ದಾಗಬೇಕು. ಎಲ್ಲವೂ ನ್ಯಾಯಾಲಯದ ಮೂಲಕವೇ ತೀರ್ಮಾನ ಆಗಬೇಕು. ಜನಜಾಗೃತಿ ಮೂಲಕ ಸಂಸತ್ತಿನ ಜಂಟಿ ಸದನ ಸಮಿತಿಗೆ ವರದಿ ನೀಡುತ್ತೇವೆ. ವಕ್ಫ್ ಹೆಸರಿನಲ್ಲಿ ಬೊಮ್ಮಾಯಿ, ಯಡಿಯೂರಪ್ಪ ಸೇರಿ ಯಾರ ಕಾಲದಲ್ಲಿ ನೋಟಿಸ್ ಕೊಟ್ಟಿದ್ದರೂ ನಮ್ಮ ಸಮರ್ಥನೆ ಇಲ್ಲ ಎಂದರು. ಇದು ಬಿಜೆಪಿ ಹೋರಾಟವೋ, ಯತ್ನಾಳ್ ಹೋರಾಟವೋ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಇದು ಬಿಜೆಪಿ ನಡೆಸುತ್ತಿರುವ ಹೋರಾಟ. ಇದಕ್ಕೆ ಕೇಂದ್ರದ ನಾಯಕರು ಅನುಮತಿ ನೀಡುವ ಪ್ರಶ್ನೆ ಇಲ್ಲಿ ಉದ್ಭವಿಸುವುದಿಲ್ಲ. ಈಗಾಗಲೇ ನಮ್ಮ ಗೃಹ ಸಚಿವರು, ಪ್ರಧಾನಿ ಮೋದಿಯವರು ಧ್ವನಿಗೂಡಿಸಿದ್ದಾರೆ. ಹೀಗಾಗಿ ನಮ್ಮ ಅಭಿಯಾನಕ್ಕೆ ವರಿಷ್ಠರ ಬೆಂಬಲ ಇಲ್ಲ ಎಂಬ ಪ್ರಶ್ನೆ ಉದ್ಭವಿಸುವುದಿಲ್ಲ. ಇದು ಜನರ ಹಿತದೃಷ್ಟಿಯಿಂದ ನಡೆಸುತ್ತಿರುವ ಅಭಿಯಾನ. ಕಾಂಗ್ರೆಸ್ ಶಾಸಕರು ಹಾಗೂ ಸಂಸದರು ಬೇಕಾದರೂ ಇದರಲ್ಲಿ ಪಾಲ್ಗೊಳ್ಳಬಹುದು ಎಂದು ಕರೆ ನೀಡಿದರು. “ನಮ್ಮ ಹೋರಾಟಕ್ಕೆ ಕೇಂದ್ರ ಸಚಿವರು ಬಂದಿದ್ದರು. ಪ್ರಹ್ಲಾದ್ ಜೋಶಿ, ಶೋಭಕ್ಕ, ಸೋಮಣ್ಣ ಹೋರಾಟದಲ್ಲಿ ಪಾಲ್ಗೊಂಡಿದ್ದರು. ಇದು ನಮ್ಮ ನಾಯಕರ ಬೆಂಬಲ ಇದೆ ಎಂದು ಸೂಚಿಸುವುದಿಲ್ಲವೇ? ನಮಗೆ ರಾಜ್ಯಾಧ್ಯಕ್ಷರ ಮೌನವೇ ಸಮ್ಮತಿ. ಬಿಜೆಪಿ ಸರ್ವಾಂತರಗಾಮಿ ಪಕ್ಷ, ಬಿಜೆಪಿ ಎಲ್ಲ ಕಡೆ ಇದೆ.”
– ಬಸನಗೌಡ ಪಾಟೀಲ್ ಯತ್ನಾಳ್, ವಿಜಯಪುರ ಶಾಸಕ