Advertisement
ಚುಮುಚುಮು ಚಳಿಯಿಂದ ಪಾರಾಗಲು ಎರಡು ದಾರಿಗಳಿವೆ. ಬೆಚ್ಚನೆಯ ಉಡುಗೆ ತೊಡುವುದು ಅವುಗಳಲ್ಲಿ ಒಂದಾದರೆ, ಬಿಸಿಲಿಗೆ ಮೈಯನ್ನು ಒಡ್ಡಿಕೊಳ್ಳುವುದು ಮತ್ತೂಂದು. ಚಳಿಯ ಕಾಟ ಹೆಚ್ಚಾದಷ್ಟೂ, ನಮ್ಮ ಮನೆಯ ಪರಿಸರವೂ ಬೆಚ್ಚಗಿದ್ದರೆ ಹೇಗೆ? ಎಂಬ ಯೋಚನೆಯೂ ಸಾಮಾನ್ಯವಾಗೇ ಬರುತ್ತದೆ. ಮನೆಯಲ್ಲಿ ಆ ಒಂದು ಬೆಚ್ಚಗಿನ ಅನುಭವ ನೀಡುವಲ್ಲಿ ಬಣ್ಣಗಳ ಪಾತ್ರವೂ ಮುಖ್ಯ.
Related Articles
Advertisement
ಬೆಚ್ಚನೆಯ ಬಣ್ಣ ಎಲ್ಲೆಲ್ಲಿ ಬಳಸಬಹುದು: ಸಮಯವೇ ಇಲ್ಲ ಎಂದು ದಿನದ ಬಹುಹೊತ್ತು ಹೊರಗೆ ಕೆಲಸದಲ್ಲಿ ತೊಡಗುವವರೂ ಕೂಡ ದಿನದ ಬಹುತೇಕ ಅವಧಿಯನ್ನು ಮನೆಯಲ್ಲೇ ಕಳೆಯುತ್ತಾರೆ. ಇದರಲ್ಲಿ ನಿದ್ರೆಹೋಗುವ ಅವಧಿಯೇ ಅಧಿಕವಾಗಿದ್ದರೂ ಮಿಕ್ಕ ವೇಳೆ ಬೆಚ್ಚಗಿನ ಚೇತೋಹಾರಿಯಾಗಿರುವ ಅನುಭವ ನೀಡುವಂತೆ ಮನೆಗೆ ಬಣ್ಣ ನೀಡುವುದು ಉತ್ತಮ. ಬೆಳಗ್ಗೆ ಎದ್ದೊಡನೆ ಒಂದಷ್ಟು ಹೊತ್ತು ತಿಂಡಿತಿನ್ನುತ್ತ ದಿನದ ಕೆಲಸಕ್ಕೆ ತಯಾರಾಗುವ ಯೋಚನೆಯಲ್ಲಿ ಇರುವವರಿಗೆ ಬೆಚ್ಚನೆಯ ಅನುಭವ ನೀಡುವಂತಿರಬೇಕು. ಹಾಗಾಗಿ ಡೈನಿಂಗ್ ರೂುಗೆ ಸಾಮಾನ್ಯವಾಗೇ ವಾರ್ಮ್ ಕಲರ್ ಅನ್ನು ಬಳಸುವುದು.
ಲಿವಿಂಗ್ ರೂಮ್ ಲೆಕ್ಕಾಚಾರ: ಬೆಳಗಿನ ಹೊತ್ತು ಹೆಚ್ಚು ಸಮಯ ಕಳೆಯಲು ಆಗದಿದ್ದರೂ, ಹೊರಗೆ ಕೊರೆಯುವ ಚಳಿಯಿಂದ ತಪ್ಪಿಸಿಕೊಂಡು ಬೇಗ ಮನೆ ತಲುಪೋಣ ಎನ್ನುವವರಿಗೆ ಒಳಗೆ ಬಂದೊಡನೆ ಸ್ವಾಗತಿಸುವುದೇ ಹಾಲ್. ಇಲ್ಲಿನ ಬಣ್ಣ ಬೆಚ್ಚನೆಯ ಅನುಭವ ನೀಡುವಂತಿದ್ದರೆ ಹೊರಗಿನ ಚಳಿಯ ಜೊತೆಗೆ ಇತರೆ ತಾಪತ್ರಯಗಳನ್ನೂ ದೂರವಿಡಲು ಸಹಾಯಕಾರಿ. ವಾರ್ಮ್ ಕಲರ್ಸ್ ಎಂದರೆ ತೀರ ಕಡುಗೆಂಪು, ಹಳದಿ ಬಣ್ಣ ಬಳಿದು ಇಡಬೇಕು ಎಂದೇನೂ ಇಲ್ಲ. ಇದೇ ಬಣ್ಣಗಳ ತೆಳು – ಲೈಟ್ ಶೇಡ್‌ಗಳನ್ನು “ಪೇಸ್ಟಲ್ ಕಲರ್ಸ್’ ಪಂಗಡಕ್ಕೆ ಸೇರಿದವನ್ನು ಧಾರಾಳವಾಗಿ ಬಳಸಬಹುದು. ಕೆಲವೊಮ್ಮೆ ಬಣ್ಣ ಎದ್ದು ಕಾಣಲು, ಒಂದಷ್ಟು ಕಾಂಟ್ರಾಸ್ಟ್ -ಪೈಪೋಟಿ ಬಣ್ಣಗಳನ್ನೋ ಇಲ್ಲ ಹಾರ್ಮೊನಿ ಕಲರ್ಸ್ -ಹೀಗೆ ಬಣ್ಣದ ಜೋಡಿಗಳನ್ನು ಬಳಸಬಹುದು.
ಬೆಳಕು ಮತ್ತು ಬಣ್ಣಗಳು: ಬಣ್ಣಗಳು ಪರಿಣಾಮಕಾರಿಯಾಗಿ ಕಾಣಬೇಕೆಂದರೆ ಅದಕ್ಕೆ ಸೂಕ್ತ ರೀತಿಯ ಬೆಳಕೂ ಇರಬೇಕಾಗುತ್ತದೆ. ಸಾಮಾನ್ಯವಾಗಿ ದಿನದ ಹೊತ್ತು ಕಿಟಕಿಗಳಿಂದ ನೈಸರ್ಗಿಕವಾಗಿ ಬೆಳಕು ಮನೆಯನ್ನು ಪ್ರವೇಶಿಸುವುದರಿಂದ ನಾವು ಇದನ್ನೂ ಪರಿಗಣಿಸಿ ಬಣ್ಣಗಳ ಆಯ್ಕೆ ಮಾಡಬೇಕು. ಹೆಚ್ಚು ಬೆಳಕು ಬೀಳುವ ಸ್ಥಳದಲ್ಲಿ ಸ್ವಲ್ಪ ಗಾಢ ಬಣ್ಣವೂ, ತೆಳುವಾಗಿಯೂ ಮನಸ್ಸಿಗೆ ಆಹ್ಲಾದಕರವಾಗಿಯೂ ಇರುತ್ತದೆ. ಅದೇ ರೀತಿ, ಹೆಚ್ಚು ಬೆಳಕು ಬೀಳದ ಸ್ಥಳಗಳು ಮಬ್ಬುಮಬ್ಟಾಗಿದ್ದು ಗಾಢಬಣ್ಣ ಹೊಡೆಯಲು ಸೂಕ್ತವಾಗಿರುವುದಿಲ್ಲ.
ಇಂಥ ಸ್ಥಳಗಳಲ್ಲಿ ಕಡ್ಡಾಯವಾಗಿ ಮಾರ್ಮ್ ಕಲರ್ ಅನ್ನು ಲೈಟ್ ಶೇಡ್‌ನಲ್ಲಿ ಬಳಸಬೇಕು.ದಿನದಹೊತ್ತು ಬೀಳುವ ಬೆಳಕಿನ ಮೂಲಕ್ಕೆ ಹೊಂದಿಕೊಂಡಂತೆ ನಾವು ಸಾಮಾನ್ಯವಾಗಿ ನಮ್ಮ ದೈನಂದಿನ ಚಟುವಟಿಕೆಗಳನ್ನು ಮಾಡಿಕೊಳ್ಳುತ್ತೇವೆ. ದಿನದ ಪೇಪರ್ ಓದುವುದು ಇತ್ಯಾದಿ ಕಿಟಕಿಯ ಬಳಿ ಮಾಡಿದಂತೆಯೇ ಸಂಜೆ ಕಿಟಕಿಯ ಮೂಲಕ ಬೆಳಕು ಬಾರದಿದ್ದರೂ ನಾವು ನಮ್ಮ ಪ್ರಿಯ ಆಸನವನ್ನು ಬೇರೆಡೆ ತೆಗೆದುಕೊಂಡು ಹೋಗುವುದಿಲ್ಲ. ಹಾಗಾಗಿ ಕಿಟಕಿಯ ಮೇಲೆ ವಿದ್ಯುತ್ ದೀಪ ಇಟ್ಟರೆ, ರಾತ್ರಿಹೊತ್ತೇ ಅಲ್ಲದೆ, ಇತರೆ ವೇಳೆಯಲ್ಲೂ ಬೆಳಕು ಕಡಿಮೆ ಇದ್ದರೆ, ದೀಪ ಹತ್ತಿಸಿಕೊಂಡು ಓದಲು ಅನುಕೂಲಕರ.
ಮನೆ ಬೆಚ್ಚಗಿಡುವಲ್ಲಿ ಬೆಳಕಿನ ಮಹಾತ್ಮೆ: ಬೆಳಕು ಹೆಚ್ಚಿದ್ದಷ್ಟೂ ಚಳಿಗಾಲದಲ್ಲಿ ನಮಗೆ ಬೆಚ್ಚನೆಯ ಅನುಭವ ಹೆಚ್ಚಾಗುತ್ತದೆ. ಹೇಳಿಕೇಳಿ ಈ ಅವಧಿಯಲ್ಲಿ ದಿನದ ಹೊತ್ತು ಕಡಿಮೆ ಇದ್ದು ರಾತ್ರಿಯ ಅವಧಿ ಹೆಚ್ಚು ಇರುವುದರ ಜೊತೆಗೆ ಸೂರ್ಯ ಕಿರಣಗಳೂ ಕೂಡ ಕೆಳಕೋನದಲ್ಲಿ ನಮ್ಮನ್ನು ತಾಗುವುದರಿಂದ, ಬೆಳಕಿನ ಅಭಾವ ಇರುತ್ತದೆ. ಆದುದರಿಂದ ಮನೆಯನ್ನು ವಿನ್ಯಾಸ ಮಾಡುವಾಗಲೇ ಸೂರ್ಯ ಕಿರಣಗಳು ಚಳಿಗಾಲದಲ್ಲಿ ಬರುವ ದಿಕ್ಕನ್ನು ಗಮನಿಸಿ ಸಾಕಷ್ಟು ವಿಶಾಲವಾದ ಕಿಟಕಿಗಳನ್ನು ಇಟ್ಟುಕೊಂಡರೆ, ನಾವು ಬಳಸುವ ಬೆಚ್ಚನೆಯ ಬಣ್ಣಗಳ ಪರಿಣಾಮ ಮತ್ತೂ ಹೆಚ್ಚಾಗುತ್ತದೆ.
ಬಣ್ಣಗಳನ್ನು ಬಯಸದವರು ಯಾರೂ ಇಲ್ಲ. ಆದರೆ ಇದೇ ಬಣ್ಣಗಳು ನಮ್ಮನ್ನು ವಿವಿಧ ಋತುಗಳಲ್ಲಿ, ವಿವಿಧ ರೀತಿಯಲ್ಲಿ ಸ್ಪಂದಿಸುವಂತೆ ಮಾಡುತ್ತವೆ. ಆದುದರಿಂದ ನಿಮ್ಮ ಮನೆಯ ಬಣ್ಣವನ್ನು ಸ್ವಲ್ಪ ಯೋಚಿಸಿ ಬಳಸಿದರೆ, ಹೆಚ್ಚು ಖರ್ಚಿಲ್ಲದೆ ಬೆಚ್ಚನೆಯ ಮನೆ ಚಳಿಗಾಲದಲ್ಲಿ ನಿಮ್ಮದಾಗುತ್ತದೆ.
ಹೆಚ್ಚಿನ ಮಾಹಿತಿಗೆ: 98441 32826
* ಆರ್ಕಿಟೆಕ್ಟ್ ಕೆ ಜಯರಾಮ್