Advertisement

ಗೊತ್ತುಗುರಿಯಿಲ್ಲದ ಕೆಲಸ ತಂದಿತ್ತ ಅವಾಂತರ

03:35 AM Jun 13, 2018 | Team Udayavani |

ಕುಂದಾಪುರ: ಗೊತ್ತುಗುರಿ ಇಲ್ಲದ ಕೆಲಸದಿಂದಾಗಿ ಸೆಂಟ್ರಲ್‌ ವಾರ್ಡ್‌ನ ರಸ್ತೆಗಳು ಹಾಳಾಗಿವೆ. ಮರುಸ್ಥಾಪನೆ ಕೆಲಸ ಮಾಡಿದರೂ ಇಂಟರ್‌ ಲಾಕ್‌ ಗಳು ಅಲ್ಲಲ್ಲಿ ಎದ್ದು ಹೋಗಿದ್ದು, ಅವ್ಯವಸ್ಥೆ ಕಣ್ಣಿಗೆ ರಾಚುತ್ತಿದೆ. ಈ ವಾರ್ಡ್‌ ಕುಂದಾಪುರದ ಕೇಂದ್ರ ಸ್ಥಾನದಲ್ಲಿದೆ. ನಗರದಲ್ಲಿ ಸೂರ್ನಳ್ಳಿ ರಸ್ತೆ, ಗುರುನಾರಾಯಣ ರಸ್ತೆ, ನಗರದ ಪ್ರಮುಖ ಎರಡು ಬೀದಿಗಳಷ್ಟೇ ಈ ವಾರ್ಡ್‌ನ ಆಸ್ತಿ. ಸುಮಾರು 800ರಷ್ಟು ಮತದಾರರು, 200ರಷ್ಟು ಮನೆಗಳು ಇಲ್ಲಿವೆ.

Advertisement

ಮೊದಲ ಕೆಲಸ ಅನಂತರ
ರಸ್ತೆಗಳಿಗೆ ಕಾಂಕ್ರೀಟ್‌, ಇಂಟರ್‌ ಲಾಕ್‌ ಹಾಕಿಸುವ ಕೆಲಸ ಮುಗಿದ ನಂತರ ಇಲ್ಲಿ ಒಳಚರಂಡಿ ಕಾಮಗಾರಿ ಮಾಡಲಾಗಿದೆ. ಸುಂದರ ರಸ್ತೆ ಅಗೆದು ಚರಂಡಿಯೇನೋ ಆಯಿತು. ಅನಂತರ ಹಚ್ಚಿದ ತೇಪೆ ಹೆಚ್ಚು ಕಾಲ ಬರಲೇ ಇಲ್ಲ. ಕೂರಿಸಿದ ಇಂಟರ್‌ ಲಾಕ್‌ ಎದ್ದು ಹೋಗಿದೆ. ಮೊದಲು ಮಾಡಬೇಕಾದ್ದನ್ನು ಅನಂತರ ಮಾಡಿ ಹೀಗಾಗಿದೆ. ನಗರದ ಎಲ್ಲೆಡೆ ಕಾಂಕ್ರೀಟ್‌ ರಸ್ತೆ ಅಂದಗೆಡಲು ರಸ್ತೆ ಮಾಡಿದ ಅನಂತರ ಚರಂಡಿಗಾಗಿ ಅಗೆದದ್ದೇ ಕಾರಣ ಎನ್ನುತ್ತಾರೆ ಇಲ್ಲಿನವರು. ದುರ್ಗಾಂಬಾ ಗ್ಯಾರೇಜ್‌ ಬಳಿ ಚಂಡಿ ಕಾಮಗಾರಿ ನಡೆಯುತ್ತಿದೆ. ಅಲ್ಲೇ ಪಕ್ಕದಲ್ಲಿ ಬೇರೆ ಕಡೆಯವರು ಕಸ ತಂದು ಹಾಕುತ್ತಿರುವ ಕಾರಣ ಸ್ಥಳೀಯರಿಗೆ ಸಮಸ್ಯೆಯಾಗಿದೆ.

ಹೂಳು ತೆಗೆದಿಲ್ಲ, ಫಾಗಿಂಗ್‌ ಮಾಡಿಲ್ಲ
ಸಾಮಾನ್ಯವಾಗಿ ಮಳೆಗಾಲಕ್ಕೆ ಮುನ್ನವೇ ಚರಂಡಿಯ ಹೂಳು ತೆಗೆಯುತ್ತಾರೆ. ಆದರೆ ನಗರದ ಕೆನರಾ ಬ್ಯಾಂಕ್‌ ಎದುರು ಚರಂಡಿಯ ಹೂಳು ತೆಗೆಯುವ ಕಾರ್ಯ ಪುರಸಭೆಯಿಂದ ಆಗಲೇ ಇಲ್ಲ. ಮಳೆ ಬಂದ ತತ್‌ ಕ್ಷಣ ಸೊಳ್ಳೆ ಉತ್ಪತ್ತಿ ಆಗದಂತೆ ಫಾಗಿಂಗ್‌ ಮಾಡಲಾಗುತ್ತದೆ. ಆದರೆ ಪುರಸಭೆ ಹೊಗೆ ಬಿಡುವ ಕೆಲಸ ಮಾಡಿಲ್ಲ ಎನ್ನುತ್ತಾರೆ ಊರವರು. ಈ ಪರಿಸರದಲ್ಲಿ ಚರಂಡಿಯ ವಾಸನೆ ಅಂಗಡಿಯವರಿಗೆ ಅಸಹ್ಯ ವಾತಾವರಣ ತಂದರೆ ರಸ್ತೆ ಹೊಂಡದ ನೀರು ಗ್ರಾಹಕರಿಗೆ ಕಿರಿಕಿರಿ ಉಂಟು ಮಾಡಿದೆ.


ಚರಂಡಿ ಆಗಿದೆ

ಭಗವಾನ್‌ ಬಿಲ್ಡಿಂಗ್‌ ಹತ್ತಿರ ಕೆಲ ಮನೆಗಳಿಗೆ ಮಳೆಗಾಲದಲ್ಲಿ  ನೀರು ಒಳಬರುತ್ತಿತ್ತು. ಸದ್ಯ ಮೂರು ವರ್ಷಗಳಿಂದ ಸಮಸ್ಯೆ ಇಲ್ಲ. ಚರಂಡಿ ಕಾಮಗಾರಿ ಆಗಿದೆ. ಗುರುನಾರಾಯಣ ಹಾಲ್‌, ದುರ್ಗಾಂಬಾ ಗ್ಯಾರೇಜ್‌ ನವರು ತಮ್ಮದೇ ಆದ ಒಳಚರಂಡಿ ವ್ಯವಸ್ಥೆ ಮಾಡಿಕೊಂಡ ಕಾರಣ ಸಾರ್ವಜನಿಕರಿಗೆ ಸಮಸ್ಯೆ ಇಲ್ಲ. ಸಾರ್ವಜನಿಕ ಬಾವಿಯೊಂದಿದ್ದರೂ ಕಳೆಗಿಡ ತುಂಬಿ ಉಪಯೋಗವಿಲ್ಲದಾಗಿದೆ. ಇದನ್ನು ಸ್ವಚ್ಛಗೊಳಿಸಿದರೆ ಸ್ಥಳೀಯ ನೀರು ಪೂರೈಕೆಗೆ ಸಹಾಯವಾಗಲಿದೆ. ಏಕೆಂದರೆ ಕಳೆದ ಮೂರು ದಿನಗಳಿಂದ ವಿದ್ಯುತ್‌ ಸಮಸ್ಯೆಯಿಂದಾಗಿ ಕುಡಿಯುವ ನೀರಿನ ಸರಬರಾಜಿಗೆ ಅಡಚಣೆಯಾಗಿದೆ. 

ಸಮಸ್ಯೆಯಿಲ್ಲ
ಮನೆಗೆ ನೀರು ಬರುತ್ತಿತು. ಈಗ ಚರಂಡಿ ಆದ ಕಾರಣ ಸಮಸ್ಯೆಯಿಲ್ಲ. ಆದರೆ ಚರಂಡಿಯಲ್ಲಿ ಹೂಳು ತುಂಬಿದೆ.
– ಶ್ರೀಮತಿ, ಭಗವಾನ್‌ ಬಿಲ್ಡಿಂಗ್‌ ಬಳಿ ನಿವಾಸಿ

Advertisement

ಚರಂಡಿ ಆಗಿದ್ದರಿಂದ ಉಪಕಾರ
ಸೂರ್ನಳ್ಳಿ ರಸ್ತೆಯಲ್ಲಿ ಚರಂಡಿಯಾದ ಕಾರಣ ಮೊದಲಿನಂತೆ ಸಮಸ್ಯೆ ಇಲ್ಲ.
– ಶ್ರೀನಿವಾಸ ಶೆಣೈ, ಆಕಾಶ್‌ ಫ್ಲೋರ್‌ಮಿಲ್‌

ರಸ್ತೆ ಹಾಳಾಗಿದೆ
ಒಳಚರಂಡಿ ಕಾಮಗಾರಿ ಕಾಂಕ್ರೀಟ್‌ ರಸ್ತೆಯಾದ ಅನಂತರ ಮಾಡಿದ ಕಾರಣ ರಸ್ತೆ ಹಾಳಾಗಿದೆ. 
– ಕೆ. ಗೋವಿಂದರಾಯ ಪೈ, ಶ್ರೀ ಕಾಮಾಕ್ಷಿ ನಿಲಯ 

ಫಾಗಿಂಗ್‌ ಮಾಡಬೇಕಾದ ಅಗತ್ಯ
ರಸ್ತೆ ಹೊಂಡದಿಂದಾಗಿ ನೀರೆಲ್ಲ ಮೈಮೇಲೆ ಅಭಿಷೇಕವಾಗುತ್ತದೆ. ಚರಂಡಿ ಇರುವಲ್ಲಿ ಎಲ್ಲ ಕಡೆ ಫಾಗಿಂಗ್‌ ಮಾಡಬೇಕಾದ ಅಗತ್ಯವಿದೆ. 
– ಅಕ್ಷಯ ಶೆಣೈ, ಶೆಣೈ ಎಲೆಕ್ಟ್ರಿಕಲ್ಸ್‌, ಮುಖ್ಯರಸ್ತೆ

ಕನಿಷ್ಠ ಸಮಸ್ಯೆಗಳಿರುವ ವಾರ್ಡ್‌
ಸಮಸ್ಯೆ ಗಮನಕ್ಕೆ ಬಂದ ಕೂಡಲೇ ಸ್ಪಂದಿಸುತ್ತೇವೆ. ಎಲ್ಲ ರಸ್ತೆಗಳೂ ಕಾಂಕ್ರಿಟ್‌ ಆಗಿವೆ. ಅತ್ಯಂತ ಕನಿಷ್ಠ ಸಮಸ್ಯೆಗಳಿರುವ ವಾರ್ಡ್‌ ಆಗಿ ಬದಲಾಗಿದೆ. 
– ಮೋಹನದಾಸ ಶೆಣೈ, ಪುರಸಭಾ ಸದಸ್ಯರು

— ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next