ಬೆಂಗಳೂರು: ನಗರದಲ್ಲಿ ಶಾಲೆಯಿಂದ ಹೊರಗುಳಿದಿರುವ ಮಕ್ಕಳ ನಿಖರ ಮಾಹಿತಿ ತಿಳಿದುಕೊಳ್ಳುವ ಉದ್ದೇಶದಿಂದ ಪಾಲಿಕೆ ವ್ಯಾಪ್ತಿಯ ಎಲ್ಲ ವಾರ್ಡ್‌ಗಳಲ್ಲಿ “ವಾರ್ಡ್ ಮಕ್ಕಳ ರಿಜಿಸ್ಟರ್’ ಸಿದ್ಧಪಡಿಸಿಕೊಂಡು ಇದರಲ್ಲಿ ಮಕ್ಕಳ ಮಾಹಿತಿ ಸಂಗ್ರಹಿಸಲು ಪಾಲಿಕೆ ಯೋಜನೆ ರೂಪಿಸಿದೆ.
ಶಾಲೆ ಬಿಟ್ಟಿರುವ ಹಾಗೂ ಶಾಲೆಗೆ ಹೋಗದೆ ಮನೆಯಲ್ಲೇ ಇರುವವರ ಮಾಹಿತಿ ತಿಳಿಯಲು ವಾರ್ಡ್ ಗಳಲ್ಲಿ “ವಾರ್ಡ್ ಮಕ್ಕಳ ರಿಜಿಸ್ಟರ್’ ಇರಿಸಿ ಇದರಲ್ಲಿ ಪ್ರತಿ ತಿಂಗಳು ಆಯಾ ವಾರ್ಡ್‌ನ ಮಕ್ಕಳ ಶಾಲಾಮಾಹಿತಿ ಸಂಗ್ರಹಿಸುವುದು ಯೋಜನೆ ಉದ್ದೇಶವಾಗಿದೆ. ಪ್ರತಿ ವರ್ಷ ಮೇ ಒಳಗಾಗಿ ಈ ಮಾಹಿತಿಬಿಡುಗಡೆ ಮಾಡಲು ನಿರ್ಧರಿಸಿದ್ದು, ಇದರಿಂದ ಆಯಾ ವರ್ಷ ಶಾಲೆಯಿಂದ ಹೊರಗುಳಿದಿರುವ ಮಕ್ಕಳ ಸಂಖ್ಯೆ ಆಧಾರದ ಮೇಲೆ ವಿಶೇಷ ಯೋಜನೆರೂಪಿಸಿಕೊಳ್ಳಲು ಸಾಧ್ಯವಾಗಲಿದೆ. ಹೀಗಾಗಿ ಹೈಕೋರ್ಟ್ ಆದೇಶದಂತೆ ಮಕ್ಕಳ ಸರ್ವೇ ಪ್ರಾರಂಭ ಮಾಡಲು ಪಾಲಿಕೆ ಮುಂದಾಗಿದೆ.
ಕೊಳಗೇರಿ, ನಗರದ ಹಿಂದುಳಿದ ಪ್ರದೇಶ ಹಾಗೂ ಬಡ ಕುಟುಂಬದ ಮಕ್ಕಳು ಶಾಲೆಯಿಂದ ಹೊರಗುಳಿದಿದ್ದರೆ ಶಾಲೆಗೆ ಸೇರಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಿಕೊಳ್ಳಲು ಪಾಲಿಕೆ ಶಿಕ್ಷಣ ವಿಭಾಗದ ಅಧಿಕಾರಿಗಳು ಚಿಂತನೆ ನಡೆಸಿದ್ದು ಮನೆ- ಮನೆ ಸರ್ವೇ ಮಾಡಲು ಹೊಸ ಆ್ಯಪ್ ಸಿದ್ಧಪಡಿಸಿಕೊಳ್ಳಲಾಗುತ್ತಿದೆ.
ಸಮೀಕ್ಷೆಗೆ ಸರ್ವೇ ತಂಡಗಳ ರಚನೆ: ಈ ಕುರಿತು”ಉದಯವಾಣಿ’ಯೊಂದಿಗೆ ಮಾತನಾಡಿದ ಬಿಬಿಎಂಪಿ ಶಿಕ್ಷಣ ವಿಭಾಗದ ಸಹಾಯಕ ಆಯುಕ್ತ ನಾಗೇಂದ್ರ ನಾಯಕ್, ಬಿಬಿಎಂಪಿ ವ್ಯಾಪ್ತಿಯ 8 ವಲಯದಲ್ಲಿ ಪ್ರತಿ ವಲಯಕ್ಕೂ ಇಬ್ಬರು ಮಾಸ್ಟರ್ ಟ್ರೈನರ್‌ಗಳನ್ನುನೇಮಕ ಮಾಡಿಕೊಳ್ಳುತ್ತೇವೆ. ಮಕ್ಕಳ ಸರ್ವೇಗೆ ಪಾಲಿಕೆಯ ಶಾಲಾ ಶಿಕ್ಷಕರನ್ನು ಬಳಸಿಕೊಳ್ಳದೆ ಇರಲು ನಿರ್ಧರಿಸಲಾಗಿದೆ ಎಂದರು. ಸರ್ವೇ ಕಾರ್ಯಕ್ಕೆ ಸ್ವಯಂ ಸೇವಾ ಸಂಸ್ಥೆಗಳ ಸಹಕಾರ ಹಾಗೂ ಸ್ವಯಂ ಸೇವಕರನ್ನು ಬಳಸಿಕೊಂಡು ಪ್ರತಿ ಮನೆ ಸರ್ವೇಗೆ 5 ರೂ. ನೀಡಲು ನಿರ್ಧರಿಸಲಾಗಿದೆ. ಉಚಿತ ಶಿಕ್ಷಣ ವ್ಯವಸ್ಥೆ ಇದೆ. ಕಡ್ಡಾಯ ಶಿಕ್ಷಣ ಮಕ್ಕಳ ಹಕ್ಕು ಎನ್ನುವ ಬಗ್ಗೆ ತಿಳಿವಳಿಕೆ ಕೊರತೆ ಇದೆ. ಈ ಬಗ್ಗೆ ಸರ್ವೇಯ ಮೂಲಕ ಜಾಗೃತಿ ಮೂಡಿಸುತ್ತೇವೆ ಎಂದರು.
ಭಿಕ್ಷೆ ಬೇಡುವ, ಬಾಲಕಾರ್ಮಿಕ ಮಕ್ಕಳಿಗೆ ಕೌಶಲ್ಯ ತರಬೇತಿ! : ನಗರದಲ್ಲಿ ಶಾಲೆಯಿಂದ ಹೊರಗುಳಿದು ಸಿಗ್ನಲ್‌ಗಳಲ್ಲಿ ಪೆನ್ನು, ಹೂ ಹಾಗೂ ಬಲೂನ್ ಸೇರಿ ವಿವಿಧ ಆಟಿಕೆಗಳನ್ನು ಮಾರಾಟ ಮಾಡುವ ಮಕ್ಕಳು ಹಾಗೂ ನಿರ್ಗತಿಕ ಮಕ್ಕಳಿಗೆ ಕೌಶಲ್ಯ ತರಬೇತಿ ನೀಡಲೂ ಪಾಲಿಕೆಯಲ್ಲಿ ಚರ್ಚೆ ನಡೆದಿದೆ. ನಗರದಲ್ಲಿನ ನಿರ್ಗತಿಕ ಮಕ್ಕಳು ಶಾಲೆಯಿಂದ ಹೊರಗುಳಿಯುವುದನ್ನು ತಪ್ಪಿಸಲು ಸ್ವಯಂ ಸೇವಾ ಸಂಸ್ಥೆಗಳ ಸಹ ಭಾಗಿತ್ವದಲ್ಲಿ ವಿಶೇಷ ಕಾರ್ಯಕ್ರಮ ರೂಪಿಸುವ ಬಗ್ಗೆ ಚರ್ಚೆ ನಡೆದಿದೆ.ಬಿಎಂಟಿಸಿ ಅಥವಾ ಕೆಎಸ್‌ಆರ್‌ಟಿಸಿಯ ಹಳೆಯ ಬಸ್‌ಗಳನ್ನು ನವೀಕರಿಸಿ ಅದನ್ನು ನಗರದಲ್ಲಿರುವ ಮೇಲ್ಸೇತುವೆಗಳ ಕೆಳಗಿನ ಖಾಲಿ ಪ್ರದೇಶದಲ್ಲಿ ನಿಲ್ಲಿಸಿ ಮಕ್ಕಳಿಗೆ ಕೌಶಲ್ಯ ತರಬೇತಿ ರೂಪಿಸಲಾಗುವುದು ಎಂದು ಎಸ್.ಜಿ.ರವೀಂದ್ರ, ಬಿಬಿಎಂಪಿ ವಿಶೇಷ (ಕಲ್ಯಾಣ ) ತಿಳಿಸಿದ್ದಾರೆ.
–ಹಿತೇಶ್ ವೈ