ಬೆಂಗಳೂರು: “ನಮ್ಮ ಮೆಟ್ರೋ’ ಯೋಜನೆಗೆ ಇರುವ ಅಡತಡೆಗಳ ನಿವಾರಣೆ ಹಾಗೂ ತ್ವರಿತಗತಿಯಲ್ಲಿ ಮಾರ್ಗದ ಕಾಮಗಾರಿ ಕೈಗೆತ್ತಿಕೊಳ್ಳಲು ಮುಂಬೈ ಮಾದರಿಯಲ್ಲಿ “ವಾರ್ ರೂಂ’ ರಚಿಸುವಂತೆ ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥ್ ನಾರಾಯಣ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್) ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಬಿಎಂಆರ್‌ಸಿಎಲ್ ಕಚೇರಿಯಲ್ಲಿ ಶುಕ್ರವಾರ ಯೋಜನೆಯ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿ, ಮೆಟ್ರೋ ಮಾರ್ಗ ಮತ್ತು ನಿಲ್ದಾಣಗಳ ನಿರ್ಮಾಣಕ್ಕಾಗಿ ವಿವಿಧ ಸ್ಥಳೀಯ ಸಂಸ್ಥೆಗಳಿಂದ ಹಲವು ರೀತಿಯ ಅನುಮತಿ ಪಡೆಯಬೇಕಾಗುತ್ತದೆ. ಇದಕ್ಕಾಗಿ ಕೆಲವು ಸಲ ಸಾಕಷ್ಟು ಸಮಯ ವ್ಯಯ ಆಗುತ್ತದೆ. ಈ ಹಿನ್ನೆಲೆಯಲ್ಲಿ ಮುಂಬೈ ಮಾದರಿಯಲ್ಲಿ “ವಾರ್ ರೂಂ’ ಜಾರಿಗೊಳಿಸುವ ಅವಶ್ಯಕತೆ ಇದೆ ಎಂದು ಪ್ರತಿಪಾದಿಸಿದರು.
ಅಲ್ಲದೆ, ಉಪಮುಖ್ಯಮಂತ್ರಿ ಸೂಚನೆ ಮೇರೆಗೆ ಈ ಸಂಬಂಧದ ಅಧ್ಯಯನಕ್ಕಾಗಿ ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಮಣರೆಡ್ಡಿ ನೇತೃತ್ವದಲ್ಲಿ ನಿಯೋಗ ಮುಂಬೈಗೆ ತೆರಳಲು ಸಭೆಯಲ್ಲಿ ನಿರ್ಧರಿಸಲಾಯಿತು. ಸಾಮಾನ್ಯವಾಗಿ ಮಾರ್ಗ ಮತ್ತು ನಿಲ್ದಾಣ ನಿರ್ಮಾಣ ಮಾಡುವಾಗ ವಿದ್ಯುತ್ ಕೇಬಲ್, ನೀರಿನ ಕೊಳವೆ ಮಾರ್ಗಗಳು ಸೇರಿದಂತೆ ವಿವಿಧ ಸ್ಥಳೀಯ ಸಂಸ್ಥೆಗಳೊಂದಿಗೆ ಸಮನ್ವಯ ಅತ್ಯಗತ್ಯ.
ಹಲವು ಬಾರಿ ಈ ಸಮನ್ವಯದ ಕೊರತೆಯಿಂದ ತಿಂಗಳುಗಟ್ಟಲೇ ಕಾಮಗಾರಿ ವಿಳಂಬವಾಗಿದೆ. ಈ ಹಿನ್ನೆಲೆಯಲ್ಲಿ ವಿವಿಧ ಸಂಸ್ಥೆಗಳನ್ನು ಒಂದೇ ಸೂರಿನಡಿ ತಂದು, ತ್ವರಿತವಾಗಿ ಅನುಮತಿ ನೀಡುವುದು ಈ ವಾರ್ ರೂಂ ಉದ್ದೇಶವಾಗಿರಲಿದೆ. ಮುಂಬೈನಲ್ಲಿ ಈ ಪ್ರಯೋಗ ಯಶಸ್ವಿಯಾಗಿದೆ ಎನ್ನಲಾಗಿದೆ. ಈ ಬಗ್ಗೆ ಅಧ್ಯಯನಕ್ಕಾಗಿ ಸೂಚಿಸಲಾಗಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಯೊಬ್ಬರು ತಿಳಿಸಿದರು.
ಕಳೆದ ಹತ್ತು ವರ್ಷಗಳಿಂದ ಕೇವಲ 42 ಕಿ.ಮೀ. ಮೆಟ್ರೋ ರಸ್ತೆ ನಿರ್ಮಾಣವಾಗಿದ್ದು, ದೆಹಲಿ ಮೆಟ್ರೋದಲ್ಲಿ ಕಳೆದ ಏಳು ವರ್ಷಗಳಲ್ಲಿ 210 ಕಿ.ಮೀ. ಮೆಟ್ರೋ ಮಾರ್ಗ ನಿರ್ಮಾಣವಾಗಿದೆ ಎಂದು ಅಧಿಕಾರಿಗಳು ಸಭೆ ಗಮನಕ್ಕೆ ತಂದರು. 2ನೇ ಹಂತದ ಯೋಜನೆ ಸ್ಥಿತಿಗತಿ ಕುರಿತು ಉಪ ಮುಖ್ಯಮಂತ್ರಿಗಳಿಗೆ ಮಾಹಿತಿ ನೀಡಿದರು. ಹೆಬ್ಟಾಳ, ಕೆ.ಆರ್.ಪುರ, ಸಿಲ್ಕ್ಬೋರ್ಡ್ ಜಂಕ್ಷನ್ ನಗರದ ಪ್ರಮುಖ ಸಂಚಾರ ದಟ್ಟಣೆ ಮಾರ್ಗಗಳಾಗಿವೆ.
ಇಲ್ಲಿ ಆದ್ಯತೆ ಮೇರೆಗೆ ಮೆಟ್ರೋ ಯೋಜನೆ ಕೈಗೆತ್ತಿಕೊಳ್ಳಬೇಕು. ಇದಕ್ಕೆ ಇರುವ ಅಡತಡೆಗಳನ್ನು ನಿವಾರಿಸಿಕೊಂಡು, ಪೂರ್ವಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಡಾ.ಅಶ್ವತ್ಥ್ ನಾರಾಯಣ ಹೇಳಿದರು. ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಮಣ ರೆಡ್ಡಿ, ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಜಯ್ ಸೇಠ್ ಮತ್ತು ಪ್ರಧಾನ ವ್ಯವಸ್ಥಾಪಕ (ಭೂಸ್ವಾಧೀನ ಘಟಕ) ಎಂ.ಎಸ್. ಚನ್ನಪ್ಪಗೌಡ ಭಾಗವಹಿಸಿದ್ದರು.