ಚಿಕ್ಕಬಳ್ಳಾಪುರ: ಕೋಟ್ಯಂತರ ರೂ. ಬೆಲೆ ಮೌಲ್ಯದ ವಕ್ಫ್ ಮಂಡಳಿಗೆ ಸೇರಿದ ಆಸ್ತಿಗಳನ್ನು ಅಕ್ರಮವಾಗಿ ಕಬಳಿಕೆ ಮಾಡಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಜಿಲ್ಲಾ ವಕ್ಫ್ ಮಂಡಳಿ ಅಧ್ಯಕ್ಷ ಬಿ.ಎಸ್.ರಫೀವುಲ್ಲಾ ಹಾಗೂ ಸಮಿತಿ ಸದಸ್ಯರು, ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಫಕೀರ್ ಹೊಸಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಶಿಡ್ಲಘಟ್ಟ ತಾಲೂಕಿನ ಫಕೀರ್‌ಹೊಸಹಳ್ಳಿ ಗ್ರಾಮದ ಸೈಯದ್ ಬಾಹರ್ ಷಾವಲಿ ದೀವಾನ್ ದರ್ಗಾಗೆ ಸಂಬಂಧಿಸಿದಂತೆ ಸರ್ಕಾರಿ ಗೆಜೆಟ್ ನಂ. 357 ರ ಪೈಕಿ ಸರ್ವೆ ನಂಬರ್ 9/2 ರಲ್ಲಿ ಸರಿ ಸುಮಾರು 100 ಎಕರೆ 23 ಗುಂಟೆ ಜಮೀನು ಕಬಳಿಸಿರುವ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಜಿಲ್ಲಾಧ್ಯಕ್ಷ ಬಿ.ಎಸ್.ರಫಿವುಲ್ಲಾ ವಕ್ಫ್ ಮಂಡಳಿ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಫಕೀರ್ ಹೊಸಹಳ್ಳಿ ಗ್ರಾಮದಲ್ಲಿ ಕಬಳಿಸಿದ್ದಾರೆ ಎನ್ನುವ ಮಂಡಳಿ ಜಾಗ ಪರಿಶೀಲಿಸಿದರು.
35 ಕೋಟಿ ಆಸ್ತಿಯ ಅಂದಾಜು: ಪರಿಶೀಲನೆ ವೇಳೆ ಸುಮಾರು 30 ರಿಂದ 35 ಕೋಟಿ ರೂ. ಮೊತ್ತದ ಆಸ್ತಿ ಎಂದು ಅಂದಾಜಿಸಿದ್ದು, ಶೀಘ್ರದಲ್ಲಿಯೇ ಆಸ್ತಿ ಲಪಟಾಯಿಸಿರುವ ಬಗ್ಗೆ ವಿವರಗಳು ಬಯಲಿಗೆ ಬರಲಿದೆ. ದಾಖಲೆಗಳನ್ನು ಕಲೆ ಹಾಕಿ ಭೂ ಕಬಳಿಸಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ರಾಜ್ಯ ವಕ್ಫ್ ಮಂಡಳಿಗೆ ಶಿಫಾರಸು ಮಾಡುವುದಾಗಿ ಬಿ.ಎಸ್.ರಫೀವುಲ್ಲಾ ಸುದ್ದಿಗಾರರಿಗೆ ತಿಳಿಸಿದರು. ಕಳೆದ 6 ವರ್ಷಗಳಿಂದ ಜಿಲ್ಲೆಯ ಅನೇಕ ಕಡೆಗಳಲ್ಲಿ ಅನಧಿಕೃತವಾಗಿ ವಕ್ಫ್ ಆಸ್ತಿಗಳನ್ನು ಆಕ್ರಮಿಸಿಕೊಂಡಿರುವವರ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲು ರಾಜ್ಯ ವಕ್ಫ್ ಮಂಡಳಿಗೆ ಶಿಫಾರಸು ಮಾಡಲಾಗಿದೆ ಎಂದು ಅವರು ತಿಳಿಸಿದರು.
ಪೆಟ್ಟಿಗೆ ಅಂಗಡಿಗಳ ತೆರವು: ಜಿಲ್ಲೆಯ ಚಿಂತಾಮಣಿ ತಾಲೂಕಿನ ಪ್ರಮುಖ ಧಾರ್ಮಿಕ ಯಾತ್ರಾ ಸ್ಥಳವಾದ ಮುರುಗಮಲ್ಲ ದರ್ಗಾದ ಸುತ್ತಲೂ ಸುಮಾರು ಐವತ್ತು ವರ್ಷಗಳಿಂದ ಅನಧಿಕೃತವಾಗಿ ಆಕ್ರಮಿಸಿಕೊಂಡಿದ್ದ ಪೆಟ್ಟಿಗೆ ಅಂಗಡಿಗಳನ್ನು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಈಗಾಗಲೇ ತೆರವುಗೊಳಿಸಿದ್ದು, ಅಲ್ಲಿ ಅನೇಕ ರೀತಿಯ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು ಬರುವ ಯಾತ್ರಾರ್ಥಿಗಳಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ವಕ್ಫ್ ಬೋರ್ಡ್ ಶ್ರಮಿಸುತ್ತಿದೆ ಎಂದರು.
ಚಿಂತಾಮಣಿ ತಾಲೂಕಿನ ನಿಮ್ಮಕಾಯಲಪಲ್ಲಿ ಗ್ರಾಮದಲ್ಲಿನ ದರ್ಗಾ ಸುತ್ತಮುತ್ತ ಅನಧಿಕೃತ ಮನೆಗಳು, ಪೆಟ್ಟಿಗೆ ಅಂಗಡಿಗಳನ್ನು ಕೆಲ ಬಲಾಡ್ಯರ ಸಹಕಾರದಿಂದ ನಿರ್ಮಿಸಿಕೊಂಡಿದ್ದು, ಅವುಗಳ ತೆರವುಗೊಳಿಸಿ ಅಲ್ಲಿ ಸ್ವತ್ಛತೆ ಕಾಪಾಡಲು ಒತ್ತು ನೀಡಲಾಗುತ್ತದೆ ಎಂದರು. ಜಿಲ್ಲಾ ವಕ್ಫ್ ಬೋರ್ಡ್ ಸದಸ್ಯರಾದ ತಮೀಮ್‌ಪಾಷ, ಮೊಹ್ಮದ್ ಜಿಲಾನ್, ಮೊಹ್ಮದ್ ಆಕೀಬ್ ಮಹ್ಮದ್‌ಉಜೇರ್, ವಕ್ಫ್ ಮಂಡಳಿಯ ಜಿಲ್ಲಾ ಅಧಿಕಾರಿ ನಹೀದ್‌ಪಾಷ ಸೇರಿದಂತೆ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.
ಜಿಲ್ಲೆಗೆ 5 ಕೋಟಿ ಅನುದಾನ: ಜಿಲ್ಲೆಯ ವಕ್ಫ್ ಸಂಸ್ಥೆಗಳಿಗೆ ಸೇರಿದ ಕೋಟ್ಯಂತರ ರೂ. ಬೆಲೆ ಬಾಳುವ ಆಸ್ತಿಗಳ ಸಂರಕ್ಷಣೆ ಜೊತೆಗೆ ಜಿಲ್ಲೆಗೆ ಸುಮಾರು 5 ಕೋಟಿಗೂ ಅಧಿಕ ಅನುದಾನವನ್ನು ತಂದು ಜಿಲ್ಲೆಯ ವಕ್ಫ್ ಮಂಡಳಿ ವ್ಯಾಪ್ತಿಯಲ್ಲಿರುವ ಆಸ್ತಿಗಳನ್ನು ಹಾಗೂ ಯಾತ್ರ ಸ್ಥಳಗಳಿಗೆ ಮೂಲ ಸೌಕರ್ಯಗಳನ್ನು ಕಲ್ಪಿಸಿ ಅಭಿವೃದ್ಧಿ ಮಾಡಲಾಗುತ್ತಿದೆ. ಇಡೀ ರಾಜ್ಯದಲ್ಲಿಯೆ ಅತಿ ಹೆಚ್ಚು ವಕ್ಫ್ ಮಂಡಳಿ ಆಸ್ತಿಪಾಸ್ತಿಗಳನ್ನು ಒತ್ತುವರಿದಾರರಿಂದ ಬಿಡಿಸಿ ಸಂರಕ್ಷಿಸಲಾಗಿದೆ ಎಂದು ಬಿ.ಎಸ್.ರಫೀವುಲ್ಲಾ ತಿಳಿಸಿದರು.