ಹೊಸದಿಲ್ಲಿ : ತನ್ನ ಬಂಧನಕ್ಕೆ 50,000 ರೂ.ಗಳ ಇನಾಮು ಹೊಂದಿದ್ದ, ದರೋಡೆ, ಕಳವಿನ 14 ಪ್ರಕರಣಗಳಲ್ಲಿ ಶಾಮೀಲಾಗಿದ್ದ, 26ರ ಹರೆಯದ ಚಾಂದ್ ಮೊಹಮ್ಮದ್ ಎಂಬಾತನನ್ನು ಪೊಲೀಸರು ಇಂದು ಬುಧವಾರ ಈಶಾನ್ಯ ದಿಲ್ಲಿಯ ನ್ಯೂ ಫ್ರೆಂಡ್ಸ್ ಕಾಲನಿಯಲ್ಲಿ ಗುಂಡಿನ ಕಾಳಗದ ನಡುವೆ ಬಂಧಿಸುವಲ್ಲಿ ಸಫಲರಾದರು.
ಆರೋಪಿ ಚಾಂದ್ ಮೊಹಮ್ಮದ್‌ನಿಂದ ಪೊಲೀಸರು ಒಂದು ಪಿಸ್ತೂಲು ಮತ್ತು ಐದು ಸಜೀವ ಮದ್ದು ಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಯು ಇಂದು ಝಕೀರ್ ನಗರಕ್ಕೆ ತನ್ನ ಸ್ನೇಹಿತರನ್ನು ಕಾಣಲು ಬರಲಿದ್ದಾನೆ ಎಂಬ ಖಚಿತ ಮಾಹಿತಿಯನ್ನು ಪಡೆದಿದ್ದ ಪೊಲೀಸರು ಖೀಜಾರಾಬಾದ್ ‘ಟಿ’ ಪಾಯಿಂಟ್ ಬಳಿ ನಸುಕಿನ ಹೊತ್ತಿನಲ್ಲೇ ಬ್ಯಾರಿಕೇಡ್ ಇರಿಸಿ ದ್ವಿಚಕ್ರ ವಾಹನಗಳಲ್ಲಿ ಸಾಗುವವರ ಮೇಲೆ ಕಣ್ಣಿಟ್ಟಿದ್ದರು.
ಆ ಸಂದರ್ಭದಲ್ಲೇ ಬೈಕಿನಲ್ಲಿ, ತನ್ನ ಸ್ನೇಹಿತ ಝಾಹೀದ್‌ನನ್ನು ಹಿಂಬದಿ ಕೂರಿಸಿಕೊಂಡು ಬಂದಿದ್ದ ಮೊಹಮ್ಮದ್, ಬ್ಯಾರಿಕೇಡ್ ಕಂಡು ಬೈಕನ್ನು ಯೂ ಟರ್ನ್ ಮಾಡಿದ್ದ. ಆದರೆ ಆಯ ತಪ್ಪಿ ರಸ್ತೆಗೆ ಬಿದ್ದ. ಆದರೆ ಕೂಡಲೇ ಎದ್ದು ಓಡ ತೊಡಗಿದ. ಪೊಲೀಸರು ಆತನನ್ನು ಬೆನ್ನಟ್ಟಿದರು.
ಆಗ ಮೊಹಮ್ಮದ್ ಪೊಲೀಸರ ಮೇಲೆ ಗುಂಡು ಹಾರಿಸಿದ. ಪೊಲೀಸರು ಮರು ಗುಂಡು ಎಸೆದು ಆತ ಓಡದಂತೆ ತಡೆದು ಬಂಧಿಸಿದರು. ಆತನ ಸಹಚರ ಝಾಹೀದ್ ತಪ್ಪಿಸಿಕೊಂಡು ಪರಾರಿಯಾದ ಎಂದು ಡೆಪ್ಯುಟಿ ಪೊಲೀಸ್ ಕಮಿಷನರ್ (ಈಶಾನ್ಯ ದಿಲ್ಲಿ) ರೋಮಿಲ್ ಬಾನಿಯಾ ಅವರು ಕಾರ್ಯಾಚರಣೆಯ ವಿವರ ನೀಡಿದರು.