Advertisement

Wandse: ಬಗ್ವಾಡಿಯ ಮನೆ ಮನೆಗೂ ಶ್ರೀದೇವಿ

05:09 PM Oct 11, 2024 | Team Udayavani |

ವಂಡ್ಸೆ: ಶರನ್ನವರಾತ್ರಿಯ ಸಂದರ್ಭದಲ್ಲಿ ಬಗ್ವಾಡಿಯ ಶ್ರೀ ಮಹಿಷಾಸುರಮರ್ದಿನಿ ದೇವಸ್ಥಾನದ ಆಡಳಿತ ಮಂಡಳಿ ವಿನೂತನ ಕಾರ್ಯಕ್ರಮವೊಂದಕ್ಕೆ ಚಾಲನೆ ನೀಡಿದೆ. ಶ್ರೀ ದೇವಿ ಮಹಿಷಾಸುರಮರ್ದಿನಿ ದೇವಿ ಬಗ್ವಾಡಿ ಗ್ರಾಮದ ಪ್ರತಿ ಮನೆ ಮನೆಗೆ ಹೋಗಿ ದರ್ಶನ ನೀಡುವ ಅಪರೂಪದ ಕಾರ್ಯಕ್ರಮ ನಡೆಯುತ್ತಿದ್ದು, ಇದೀಗ ಕೊನೆಯ ಹಂತಕ್ಕೆ ತಲುಪಿದೆ. ನವರಾತ್ರಿಯ ಒಂಬತ್ತು ದಿನಗಳಲ್ಲಿ ಗ್ರಾಮದ ಎಲ್ಲ 180 ಮನೆಗಳಿಗೆ ದೇವಿಯ ಭೇಟಿ ನಡೆಯಲಿದೆ.

Advertisement

ಮಧ್ಯಾಹ್ನದ ಮಹಾ ಪೂಜೆಯ ಬಳಿಕ ದೇವಸ್ಥಾನದಲ್ಲಿ ಪೂಜಿಸಲ್ಪಟ್ಟ ದೇವಿಯ ಉತ್ಸವ ಮೂರ್ತಿಯನ್ನು ಅಲಂಕೃತ ಮಂಟಪದಲ್ಲಿರಿಸಿ ತಲೆಯ ಮೇಲೆ ಹೊತ್ತು ಕಾಲ್ನಡಿಗೆಯಲ್ಲಿ ಗ್ರಾಮದ ಮನೆಮನೆಗೆ ತೆರಳಲಾಗುತ್ತದೆ. ಇದರೊಂದಿಗೆ ಭಜನಾ ತಂಡ, ಅರ್ಚಕರು, ಪ್ರತಿನಿಧಿಗಳು ಇರುತ್ತಾರೆ.

ಮನೆಮನೆಗೆ ಆಗಮಿಸುವ ದೇವಿಯನ್ನು ಭಕ್ತಾದಿಗಳು ಭಕ್ತಿ ಗೌರವದಿಂದ ಸ್ವಾಗತಿಸಿಕೊಳ್ಳುತ್ತಾರೆ. ಮನೆಯ ಒಳಗೆ ದೇವಿಯನ್ನು ಇರಿಸಿ ಪೂಜಿಸಲಾಗುತ್ತದೆ. ಈ ಸಂದರ್ಭದಲ್ಲಿ ಭಜನಾ ತಂಡದಿಂದ ಮನೆಯಲ್ಲಿ ಭಜನೆ ನೆಡೆಯುತ್ತದೆ. ಮನೆಯಲ್ಲಿ ಪೂಜೆ ಸಲ್ಲಿಕೆಯ ಬಳಿಕ ಕ್ಷೇತ್ರದ ಗಂಧ ಪ್ರಸಾದವನ್ನು ನೀಡಿ ಮತ್ತೂಂದು ಮನೆಗೆ ತಂಡ ತೆರಳುತ್ತದೆ. ಈ ಹೀಗೆ ಒಂಭತ್ತು ದಿನಗಳ ಕಾಲ ನಡೆಯುತ್ತದೆ. ಶರನ್ನವರಾತ್ರಿಯ ಸಂದರ್ಭ ಶ್ರೀ ದೇವಿಯೇ ಮನೆಗೆ ಬರುವ ವಿನೂತನ ಕಾರ್ಯಕ್ರಮಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ.

ಮನೆ ಮನೆಯಲ್ಲಿ ಆರಾಧನೆ
ಈ ಕಾರ್ಯಕ್ರಮದ ರೂಪುರೇಷೆ, ಪರಿಕಲ್ಪನೆಯ ಬಗ್ಗೆ ಆಡಳಿತ ಮಂಡಳಿ ಅಧ್ಯಕ್ಷರಾದ ಉದಯ ಕುಮಾರ್‌ ಹಟ್ಟಿಯಂಗಡಿ ವಿವರಿಸುತ್ತಾ, ಬಗ್ವಾಡಿಯಲ್ಲಿ ಹಲವಾರು ಹೊಸ ಹೊಸ ಕಾರ್ಯಕ್ರಮಗಳು, ಪ್ರಾರಂಭಗೊಂಡು ಯಶಸ್ವಿಯಾಗಿ ಮುನ್ನಡೆಯುತ್ತಿದೆ. ನವರಾತ್ರಿಯ ಸಮಯದಲ್ಲಿ ಶಕ್ತಿಸ್ವರೂಪಿಣಿ ಮಹಿಷಾಮರ್ದಿನಿ ದೇವಿ ಬಗ್ವಾಡಿ ಗ್ರಾಮದ ಮನೆ ಮನ ಅಲಂಕರಿಸಬೇಕು ಎನ್ನುವ ಪರಿಕಲ್ಪನೆಯಲ್ಲಿ ಬಗ್ವಾಡಿ ಗ್ರಾಮದ ಪ್ರತಿಮನೆಗೆ ಭಜನೆ ತಂಡದೊಂದಿಗೆ ಪೂಜಿಸಲ್ಪಟ್ಟ ಮಹಿಷಾಸುರಮರ್ದಿನಿ ದೇವಿಯೊಂದಿಗೆ ತೆರಳಿ ಪ್ರತಿಮನೆಯಲ್ಲಿ ಆರಾಧಿ ಸುವ ಧಾರ್ಮಿಕ ಪ್ರಕ್ರಿಯೆ ಇದಾಗಿದೆ ಎಂದು ಹೇಳಿದರು.

ಇಡೀ ಬಗ್ವಾಡಿ ಗ್ರಾಮದ ಎಲ್ಲ ಮನೆಗಳನ್ನು ತಲುಪುವ ನಿಟ್ಟಿನಲ್ಲಿ ಸಭೆಗಳನ್ನು ನಡೆಸಿ ಯೋಜನೆ ಮಾಡಿದವು. 9 ತಂಡಗಳನ್ನು ರಚಿಸಲಾಗಿದೆ. ಪ್ರತಿ ತಂಡದಲ್ಲಿ ಸ್ಥಳೀಯ ಪ್ರತಿನಿ ಧಿಗಳು, ಆಡಳಿತ ಸಮಿತಿ ಪ್ರತಿನಿ ಧಿಗಳು, ಭಜನಾ ತಂಡದವರು ಇರುತ್ತಾರೆ. ಪ್ರತಿದಿನ 15-20 ಮನೆ ತಲುಪುವ ಗುರಿ ಹೊಂದಲಾಗಿದೆ ಎಂದರು.

Advertisement

ಶಕ್ತಿ ಸಂಚಯನ, ಭಕ್ತಿ ಸಂಚಯನ
ದೇವರೇ ಮನೆಗೆ ಭೇಟಿ ನೀಡುವುದರಿಂದ ಶಕ್ತಿ ಸಂಚಯವಾಗುತ್ತದೆ. ಧನಾತ್ಮಕವಾದ ಲವಲವಿಕೆ ಮೂಡುತ್ತದೆ. ಮನೆಯಲ್ಲಿ ತಾಳ, ಘಂಟೆ, ಜಾಗಟೆ ನಾದದೊಂದಿಗೆ ಭಜನೆಯಿಂದ ಋಣಾತ್ಮಕ ಶಕ್ತಿಗಳು ನಾಶವಾಗುತ್ತವೆ ಎನ್ನುವುದು ಯೋಜನೆಯ ಮೂಲ ಚಿಂತನೆ. ಕಾರ್ಯಕ್ರಮ ಆರಂಭದ ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಮುಂಬಯಿ ಇದರ ಅಧ್ಯಕ್ಷರಾದ ರಾಜು ಮೆಂಡನ್‌ ವಂಡ್ಸೆ ಮೆಚ್ಚುಗೆ ವ್ಯಕ್ತಪಡಿಸಿದರು. ಗಣೇಶ ಮೆಂಡನ್‌ ಮುಂಬಯಿ, ಎನ್‌.ಡಿ ಚಂದನ್‌, ಕೃಷ್ಣಮೂರ್ತಿ ನಾಯ್ಕ ಮುಂಬಯಿ, ರಾಘವೇಂದ್ರ ಚಂದನ್‌ ಮುಂಬಯಿ, ಎಂ.ಎಂ.ಸುವರ್ಣ, ಎಂ.ಆರ್‌ ನಾಯ್ಕ, ಸಂತೋಷ್‌ ಶೆಟ್ಟಿ ಬಗ್ವಾಡಿ, ನಿವೃತ್ತ ಮುಖ್ಯ ಶಿಕ್ಷಕ ರಾಜೀವ ಶೆಟ್ಟಿ ಬಗ್ವಾಡಿ, ಆನಂದ ಕೆ.ನಾಯ್ಕ, ನಾಗೇಶ ಪಿ.ಕಾಂಚನ್‌, ದಿನೇಶ ಕಾಂಚನ್‌, ಪ್ರಭಾಕರ ಸೇನಾಪುರ, ಶ್ಯಾಮಲ ಜಿ.ಚಂದನ್‌, ರಾಜೀವ ಸೌರಭ, ಶೋಭಾ ಪುತ್ರನ್‌, ವಾಸು ಜಿ.ನಾಯ್ಕ, ಕ್ಷೇತ್ರದ ಪ್ರಧಾನ ಅರ್ಚಕರು ಉಪಸ್ಥಿತರಿದ್ದರು. ಶ್ರೀ ಮಹಿಷಾಸುರಮರ್ದಿನಿ ಭಜನಾ ತಂಡದ ಸದಸ್ಯರು, ಶ್ರೀ ಮಾತಾ ಭಜನಾ ಮಂಡಳಿ ಹಕ್ರೆಮಠ ಕೊಡೇರಿ ಇಲ್ಲಿನ ಭಜನಾ ತಂಡದವರು ಭಾಗವಹಿಸಿದ್ದರು.

-ಡಾ| ಸುಧಾಕರ ನಂಬಿಯಾರ್

Advertisement

Udayavani is now on Telegram. Click here to join our channel and stay updated with the latest news.

Next