Advertisement

Gangolli: ಪುಟ್ಟ ಊರಿನಲ್ಲಿ ಆರು ತಂಡಗಳಿಂದ ಪ್ರದರ್ಶನ

05:24 PM Oct 11, 2024 | Team Udayavani |

ಗಂಗೊಳ್ಳಿ,: ಗಂಗೊಳ್ಳಿ ಎಂಬ ಪುಟ್ಟ ಊರಿನಲ್ಲಿ ಗಲ್ಲಿ ಗಲ್ಲಿಯಲ್ಲೂ ಹುಲಿ ವೇಷದ ತಂಡಗಳು ಇದೆ. ಈ ಬಾರಿ ಹೊಸದಾಗಿ ಬೇಲಿಕೇರಿ ಹುಲಿ ಸೇರಿ ಆರು ತಂಡಗಳಾಗಿವೆ. ಇಲ್ಲಿನ ಹುಲಿಗಳಿಗೆ ಜಾತಿ ಧರ್ಮ ಮೀರಿ ಪ್ರೀತಿಯ ಸ್ವಾಗತ ದೊರೆಯುತ್ತಿದೆ.

Advertisement

ಗಂಗೊಳ್ಳಿಯಲ್ಲಿ ಶಾರದಾ ವಿಗ್ರಹವನ್ನು ಪ್ರಥಮ ಬಾರಿಗೆ ಎಸ್‌.ವಿ ಜೂನಿಯರ್‌ ಕಾಲೇಜ್‌ನಲ್ಲಿ ಇಡಲಾಗಿತ್ತು. ಅಲ್ಲಿಂದ ಡಾಕ್‌ ತನಕ ಮೆರವಣಿಗೆ ಹೊರಡುತ್ತಿತ್ತು. ಅಂದಿನ ಶಾರದೋತ್ಸವ ಸಮಿತಿಯ ಸದಸ್ಯ ಆಶಾ ಸೌಂಡ್‌ ಸಿಸ್ಟಮ್‌ನ ಜಿ. ನಾರಾಯಣ ಖಾರ್ವಿಯವರ ನೆನಪಿನಂತೆ, ಪೈಂಟರ್‌ ಜಗ್ಗಣ್ಣ, ಬಾಷಾ ಸಾಹೇಬರು ಹುಲಿಗೆ ಬಣ್ಣ ಬಳಿಯುತ್ತಿದ್ದರು. ಟಪ್ಪಾಲ್‌ ನಾರಾಯಣ ದೇವಾಡಿಗ, ರಾಮ ದೇವಾಡಿಗ, ಜಗನ್ನಾಥ ದೇವಾಡಿಗ, ಮುತ್ತ ದೇವಾಡಿಗ ಅವರ ಹೆಜ್ಜೆ ನೃತ್ಯ ತಾಳಕ್ಕೆ ಸರಿಯಾಗಿ ಇರುತ್ತಿತ್ತು. ಮುಸಲ್ಮಾನರ ಫೀರ್‌ ಹಬ್ಬದಲ್ಲಿ ಬಾಷಾ ಸಾಹೇಬರು ಮತ್ತು ಗಫೂರ್‌ ಸಾಹೇಬರು ಹುಲಿವೇಷ ಹಾಕಿ ಕುಣಿಯುತ್ತಿದ್ದುದನ್ನು ಪ್ರತಿಯೊಬ್ಬರೂ ಇಷ್ಟಪಡುತ್ತಿದ್ದರು.

ಹುಲಿವೇಷಧಾರಿಗಳು ಮ್ಯಾಂಗನೀಸ್‌ ರಸ್ತೆ ಮತ್ತು ವಾರ್ಫ್‌ ಹತ್ತಿರ ಅರ್ಧ ತಾಸು ಹುಲಿ ನೃತ್ಯ ಮಾಡುತ್ತಿದ್ದರು. ರೂ.1,2,5 ಕೊಟ್ಟಲ್ಲಿ ಭರ್ಜರಿಯಾಗಿ ಕುಣಿಯುತ್ತಿದ್ದರು. ಹುಲಿ ವೇಷ ನೃತ್ಯ ಆರಂಭಗೊಂಡಿದ್ದೇ ಮ್ಯಾಂಗನೀಸ್‌ ರಸ್ತೆಯಲ್ಲಿ. ಅದು ದೇವಾಡಿಗರ ಕುಟುಂಬದಲ್ಲಿ ಎನ್ನುತ್ತಾರೆ ಸ್ಥಳೀಯ ವಾಸು ದೇವಾಡಿಗರು. ಇವರ ದೊಡ್ಡಪ್ಪ ಟಪ್ಪಾಲ್‌ ನಾರಾಯಣ ದೇವಾಡಿಗ ಹಾಗೂ ಅಚ್ಯುತ್‌ ದೇವಾಡಿಗ ಅಂದಿನ ಅತ್ಯುತ್ತಮ ಹುಲಿ ನೃತ್ಯಕಾರ.

ಗಂಗೊಳ್ಳಿಯ ಈಗಿನ ಹುಲಿ ತಂಡಗಳಲ್ಲಿ 35ರಿಂದ 50 ಹುಲಿ ವೇಷಧಾರಿಗಳಿದ್ದಾರೆ. ಗಂಗೊಳ್ಳಿ ಮ್ಯಾಂಗನೀಸ್‌ ರಸ್ತೆ ಸಂಪಿಗೆ ಜಟ್ಟಿಗ ಹುಲಿತಂಡ ಕಳೆದ 35 ವರ್ಷದಿಂದ ವಿಶೇಷ ಬಣ್ಣ ವಿನ್ಯಾಸಗಳಿಂದ ಮೋಡಿ ಮಾಡಿದೆ. ತಂಡದ ನಾಯಕ ಭಾಸ್ಕರ, ಅವರ ತಂದೆ ಕುಷ್ಟಣ್ಣ ಹುಲಿವೇಷಧಾರಿಯಾಗಿ ಗಮನ ಸೆಳೆದಿದ್ದರು. ಚಂದ್ರ ಖಾರ್ವಿ ಹೆಬ್ಬುಲಿ ಎಂದೇ ಪ್ರಸಿದ್ಧರು.

ಶಾರದ ಪಂಜುರ್ಲಿ ಹುಲಿ ಬಳಗ ಬಂದರ ರಸ್ತೆ ಗಂಗೊಳ್ಳಿ ಇದು ಅತೀ ಚಿಕ್ಕ ವಯಸ್ಸಿನ ಹುಡುಗರ ತಂಡ. ಮ್ಯಾಂಗನೀಸ್‌ ರಸ್ತೆಯ ಕಳಿ ಹಿತ್ಲು ಪರಿಸರದಲ್ಲಿ ಹುಲಿತಂಡವೊಂದಿದೆ. ಈ ತಂಡದ ಜಗನ್ನಾಥ, ಬಸ್‌ ಏಜೆಂಟ್‌ ದಿ| ಬಾಬು ಪೂಜಾರಿ, ಶೀನ, ಶಿವ, ಕುಮಾರ ತಮ್ಮ ಹುಲಿವೇಷಕ್ಕೆ ನ್ಯಾಯ ಒದಗಿಸಿ ಕೊಟ್ಟಿದ್ದಾರೆ.

Advertisement

ಸುವರ್ಣ ಸಂಭ್ರಮದಲ್ಲಿ ಸಮ್ಮಾನ
ಜಿ.ಎಸ್‌.ಬಿ. ಸಮುದಾಯದ ವಾಮನ ಪೈ, ವಂಕ್ಷೆ ಶಾಂತಾರಾಂ ಶೆಣೈ, ಪ್ರಭಾಕರ ಪೈ, ಡಾ| ಎಸ್‌.ವಿ. ಪೈ ಇವರ ಸಹಕಾರ ಅಭೂತಪೂರ್ವ. 1973ರಲ್ಲಿ ಗಂಗೊಳ್ಳಿಯಲ್ಲಿ ಸೇವಾಸಂಘ ಹುಟ್ಟು ಹಾಕಿ ಸೇವೆ ನೀಡಿದರು. ಎಲ್ಲ ಜಾತಿಯವರು ಸೇರಿ ಶಾರದಾ ಮೂರ್ತಿ ಇಟ್ಟು ಶಾರದೋತ್ಸವ ಆರಂಭಿಸಲಾಯಿತು ಎನ್ನುತ್ತಾರೆ ವಾಮನ್‌ ಪೈ.

ಈ ಬಾರಿ ಸುವರ್ಣ ಮಹೋತ್ಸವ ಸಡಗರದಲ್ಲಿ ಗಂಗೊಳ್ಳಿ ನವರಾತ್ರಿ ಶಾರದಾ ಸುವರ್ಣ ಮಹೋತ್ಸವ-2024 ರಲ್ಲಿ 13ಕ್ಕೂ ಮಿಕ್ಕಿ ಹಳೆ ಮತ್ತು ನೂತನ ಹುಲಿ ವೇಷಧಾರಿಗಳಿಗೆ ಸಮ್ಮಾನ ನಡೆಯಲಿದೆ.

ಹುಲಿವೇಷಗಳ ಚಂದವೇ ಬೇರೆ
ಗಂಡು ಮಕ್ಕಳು ಮಾತ್ರ ಅಲ್ಲ ಹೆಣ್ಣು ಮಕ್ಕಳು ಕೂಡ ಮೆರವಣಿಗೆಯಲ್ಲಿ ವೇಷ ಇಲ್ಲದೇ ಹುಲಿ ನೃತ್ಯ ಮಾಡಿ ನವಿಲುಗರಿ ಮೂಡಿಸಿದ್ದಾರೆ. ಗಂಗೊಳ್ಳಿ ಕುಂದಾಪುರ ಕಡೆಯ ಹುಲಿನೃತ್ಯದ ಚೆಂದವೇ ಬೇರೆ. ಇಂದಿಗೂ ಆ ಗತ್ತು ಉಳಿಸಿಕೊಂಡಿದೆ.
-ರವಿ ಕುಮಾರ್‌ ಗಂಗೊಳ್ಳಿ, ನ್ಯಾಯವಾದಿ

ಗಂಗೊಳ್ಳಿಯ ಹುಲಿ ತಂಡಗಳು

  • ಶಾರದ-ಪಂಜುರ್ಲಿ ಹುಲಿ ಬಳಗ
  • ಸಂಪಿಗೆ ಜಟ್ಟಿಗ ಹುಲಿ ತಂಡ
  • ಬಾವಿಕಟ್ಟೆ ಮಹಾಸತಿ ಹುಲಿವೇಷ ಬಳಗ
  • ಸೀತಾಳೆ ಕಳೆಹಿತ್ಲು ಹುಲಿ ಬಳಗ
  • ಬೇಲಿಕೇರಿ ನಾಗಶಕ್ತಿ ಹುಲಿ ಬಳಗ
  • ಸ್ವಾಮಿ ಕೊರಗಜ್ಜ ಹುಲಿ ತಂಡ ಮತ್ತು ಮಕ್ಕಳ ತಂಡಗಳು.

-ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next