Advertisement

Bantwal: ಈ ಮನೆಯಲ್ಲಿವೆ ಸಾವಿರಾರು ಗೊಂಬೆಗಳು!

12:49 PM Oct 09, 2024 | Team Udayavani |

ಬಂಟ್ವಾಳ: ಈ ಮನೆಯ ಹಾಲ್‌ನಲ್ಲಿ ಸಾವಿರಾರು ಗೊಂಬೆಗಳು ಕುಳಿತು ಕಥೆ ಹೇಳುತ್ತಿವೆ. ಒಂದಷ್ಟು ಗೊಂಬೆಗಳು ದಸರಾ ಮೆರವಣಿಗೆಯ ವೈಭವ ಸಾರಿದರೆ, ಇನ್ನೊಂದಷ್ಟು ದೇವರ ಪೂಜೆಯನ್ನು ವಿವರಿಸುತ್ತವೆ. ಇನ್ನು ಕೆಲವು ಹೆಣ್ಣಿನ ಜೀವನದ ಚಿತ್ರಣ ನೀಡುತ್ತಿವೆ. ಪ್ರತಿಯೊಂದು ಗೊಂಬೆಯ ಹಿಂದೆಯೂ ಒಂದೊಂದು ಕತೆ ಇದ್ದು ಕೇಳಲೂ ರೋಮಾಂಚಕವಾಗಿದೆ.

Advertisement

ಹೀಗೆ ನವರಾತ್ರಿ ಹೊತ್ತಿನಲ್ಲಿ ಮೂರು ಥೀಮ್‌ನ ಕಥೆಗಳನ್ನು ಹೇಳುವ ಗೊಂಬೆಗಳು ಕಂಡುಬಂದಿದ್ದು ಬಿ.ಸಿ.ರೋಡಿನ ಬಸ್‌ ನಿಲ್ದಾಣದ ಹಿಂಭಾಗದ ಅಪಾರ್ಟ್‌ಮೆಂಟ್‌ನಲ್ಲಿ ವಾಸ್ತವ್ಯವಿರುವ ಮೈಸೂರು ಮೂಲದ ಕುಟುಂಬವೊಂದರ ಮನೆಯಲ್ಲಿ. ಮೈಸೂರು, ಹಾಸನ, ಬೆಂಗಳೂರು ಭಾಗದಲ್ಲಿ ಸಾಮಾನ್ಯವಾಗಿರುವ ಗೊಂಬೆಗಳ ಪೂಜೆ ಇತ್ತೀಚೆಗೆ ಕರಾವಳಿಯಲ್ಲೂ ಅಲ್ಲಲ್ಲಿ ಕಂಡುಬರುತ್ತಿದೆ.

ರಾ. ಹೆದ್ದಾರಿ ಕಾಮಗಾರಿ ನಡೆಸುತ್ತಿರುವ ಕನ್‌ಸ್ಟ್ರಕ್ಷನ್‌ ಕಂಪನಿಯೊಂದರಲ್ಲಿ ಪಿಆರ್‌ಒ ಆಗಿರುವ ನಂದಕುಮಾರ್‌, ಅವರ ಪತ್ನಿ ಪುಷ್ಪಾ ನಂದಕುಮಾರ್‌ ಮತ್ತು ಪುತ್ರಿ ಈ ಗೊಂಬೆಗಳನ್ನು ಇಟ್ಟಿದ್ದಾರೆ.

ತವರು ಮನೆಯ ಪಟ್ಟದ ಬೊಂಬೆ
ಅವರು ಹೇಳುವ ಪ್ರಕಾರ ಆ ಭಾಗದಲ್ಲಿ ಹೆಣ್ಣು ಮದುವೆಯಾಗಿ ಗಂಡನ ಮನೆಗೆ ಹೋಗುವಾಗ ತವರು ಮನೆಯಿಂದ ಮರದಿಂದ ತಯಾರಿಸಿದ ಪಟ್ಟದ ಗೊಂಬೆ ನೀಡುತ್ತಾರೆ. ಪಟ್ಟದ ಗೊಂಬೆಗಳಿರುವ ಪ್ರತಿ ಮನೆಯಲ್ಲೂ ನವರಾತ್ರಿ ಸಂದರ್ಭ ನಿತ್ಯ ಪೂಜೆ ಮಾಡಲೇಬೇಕು. ಹೆಚ್ಚಿನ ಗೊಂಬೆಗಳಿಲ್ಲದಿದ್ದರೂ ಪಟ್ಟದ ಗೊಂಬೆಗಾದರೂ ಪೂಜೆ ನಡೆಸಲೇಬೇಕು.

ಪ್ರಸ್ತುತ ನಾವು ಕರಾವಳಿ ಭಾಗದಲ್ಲಿರುವ ಕಾರಣದಿಂದ ಇಲ್ಲಿನ ಸಂಸ್ಕೃತಿಯನ್ನು ಪರಿಚಯಿಸುವ ಗೊಂಬೆಗಳನ್ನು ಖರೀದಿಸಿ ಜೋಡಿಸಬೇಕು ಎಂಬ ಆಸೆ ಇತ್ತು. ಹುಲಿವೇಷ, ಯಕ್ಷಗಾನವನ್ನು ಸಾರುವ ಗೊಂಬೆಗಳು ಸಿಕ್ಕರೆ ಖರೀದಿಸಿ ಮುಂದೆ ನಾವು ಬೇರೆ ಊರುಗಳಿಗೆ ಹೋದಾಗ ಅದನ್ನು ಪರಿಚಯಿಸಬೇಕು ಎಂದು ಸಾಕಷ್ಟು ಹುಡುಕಾಟ ನಡೆಸಿದ್ದು, ಆದರೆ ನಮಗೆ ಎಲ್ಲಿಯೂ ಸಿಕ್ಕಿಲ್ಲ ಎನ್ನುತ್ತದೆ ನಂದಕುಮಾರ್‌ ಕುಟುಂಬ.

Advertisement

ಸಂಪ್ರದಾಯ ಪರಿಚಯಿಸುವ ಕಾರ್ಯ
ಪಟ್ಟದ ಗೊಂಬೆಗಳಿರುವ ಪ್ರತಿ ಮನೆಯಲ್ಲೂ ಪೂಜೆ ಕಡ್ಡಾಯ. ದೂರದ ಪ್ರದೇಶಗಳಿಗೆ ಹೋದಾಗ ಅಲ್ಲಿನ ಗೊಂಬೆಗಳನ್ನು ಖರೀದಿಸುತ್ತೇವೆ. ತಮಿಳುನಾಡಿಗೆ ಹೋದಾಗ ಅಲ್ಲಿನ ಕೃಷ್ಣಗಿರಿಯಲ್ಲಿ ಒಂದಷ್ಟು ಗೊಂಬೆಗಳು ಸಿಕ್ಕಿದವು. ನಮ್ಮ ಸಂಪ್ರದಾಯವನ್ನು ಕರಾವಳಿ ಭಾಗಕ್ಕೂ ಪರಿಚಯಿಸುವ ಪ್ರಯತ್ನ ಮಾಡಿದ್ದೇವೆ.
-ಪುಷ್ಪಾ ನಂದಕುಮಾರ್‌

ಬೊಂಬೆಗಳ ಜೋಡಣೆಯೊಂದಿಗೆ ನಂದಕುಮಾರ್‌ ಕುಟುಂಬ.

ಮೂರು ಥೀಮ್‌ಗಳು ಏನು?
ದೇವರ ಪೂಜೆಯ ಚಿತ್ರಣ: ಪಟ್ಟದ ಗೊಂಬೆ, ಕಲಶ ಪೂಜೆಯ ಜತೆಗೆ ಒಟ್ಟು ದೇವರ ಪೂಜಾ ಸಂಪ್ರದಾಯ ವಿವರಿಸುವ ರೀತಿಯಲ್ಲಿ ಗೊಂಬೆಗಳನ್ನು ಜೋಡಿಸಲಾಗಿದೆ. ರಾಧಾಕೃಷ್ಣ, ಗಣಪತಿ, ನವದುರ್ಗೆಯರು, ರಾಮ, ಸೀತೆ, ಲಕ್ಷ್ಮಣ, ಆಂಜನೇಯ, ಕೃಷ್ಣ ಭೋಜನ, ಗೋಪಿಕಾ ಸ್ತ್ರೀಯರು, ದಶಾವತಾರ, ಅಷ್ಟ ಲಕ್ಷ್ಮೀಯರು, ಸಪ್ತ ಮಾತೃಕೆಯರು, ನೃತ್ಯ, ಸಂಗೀತ ಸಾರುವ ಚಿತ್ರಣವಿದೆ. ವಿಶೇಷವಾಗಿ ತಮಿಳುನಾಡಿನ ನವನಾಚಿಯಾರ್‌ ಬೊಂಬೆಗಳ ಆರಾಧನೆಯೂ ಇದೆ.

ಮೈಸೂರು ದಸರಾ ಮೆರವಣಿಗೆ: ಪ್ರತ್ಯೇಕ ಅಂಬಾರಿಯಲ್ಲಿ ಚಾಮುಂಡಿ ತಾಯಿ ಹಾಗೂ ಮಹಾರಾಜರು ಕುಳಿತಿರುವುದು, ಸಾಲಾಗಿ ಸಾಗುವ ಸಿಪಾಯಿಗಳು, ಮಾವುತರು, ಆನೆ, ಕುದುರೆ, ಒಂಟೆ ಸಾಲು ಇಲ್ಲಿದೆ.

ಹೆಣ್ಣಿನ ಜೀವನ ಚಕ್ರ: ಹೆಣ್ಣು ಮಗುವಿನ ಜೀವನ ಚಕ್ರ ಬೊಂಬೆಗಳ ಮೂಲಕ ತೆರೆದುಕೊಂಡಿದೆ. ಮದುವೆ ನಿಶ್ಚಿತಾರ್ಥ, ಬಳೆ ತೊಡಿಸುವ ಸಂಪ್ರದಾಯ, ಮೆಹಂದಿ-ಅರಶಿನ ಶಾಸ್ತ್ರ, ಮದುವೆ-ಸಪ್ತಪದಿ, ಔತಣ ಕೂಟ, ಹೆಣ್ಣಿನ ಬೀಳ್ಕೊಡುಗೆ, ಸೀಮಂತ, ಮಗುವಿನ ನಾಮಕರಣ, ಮದುವೆ ಊಟ, ಸೀಮಂತದ ತಿಂಡಿಗಳು ಗೊಂಬೆಗಳ ಮೂಲಕ ತೆರೆದುಕೊಂಡಿದೆ.

-ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next