ಸುಬ್ರಹ್ಮಣ್ಯ: ದೇವಿ ಕ್ಷೇತ್ರಗಳಲ್ಲಿ ಪ್ರಧಾನವಾದ ಕಡಬ ತಾಲೂಕಿನ ಕೇರ್ಪಡ ಮಹಿಷಮರ್ದಿನಿ ದೇವಳದ ವತಿಯಿಂದ ಪ್ರತಿವರ್ಷ ನವರಾತ್ರಿಯಂದು ಹುಲಿ ವೇಷ ಧರಿಸಿ ಮನೆಮನೆಗೆ ತೆರಳುವ ಸಂಪ್ರದಾಯ ಕಳೆದ ಹಲವಾರು ವರ್ಷಗಳಿಂದ ನಡೆಯುತ್ತಿದೆ. ಶ್ರೀ ದೇವಿಯೇ ಹುಲಿಯ ರೂಪದಲ್ಲಿ ಮನೆಗೆ ಬಂದಿದ್ದಾಳೆಂದು ದೇವಳದ ಹುಲಿ ವೇಷಕ್ಕೆ ಪೂಜನೀಯವಾಗಿ ಮನೆಯವರು ಕಾಣಿಕೆ ಅರ್ಪಿಸಿ ಆಶೀರ್ವಾದ ಪಡೆಯುವ ಸಂಪ್ರದಾಯವಿದೆ.
ನಿಂತಿಕಲ್ಲು ಸಮೀಪದ ಕೇರ್ಪಡದ ನೂಜಾಡಿಯ ಕಿಟ್ಟು ಎಂಬವರು ಕಳೆದ ಹಲವಾರು ವರುಷಗಳಿಂದ ನವರಾತ್ರಿ ದಿನಗಳಲ್ಲಿ ಸಾಂಪ್ರದಾಯಿಕವಾಗಿ ಹುಲಿ ವೇಷ ಧರಿಸಿ ಪಿಲಿ ಕಿಟ್ಟು ಎಂಬ ಅನ್ವರ್ಥ ನಾಮಧೇಯದೊಂದಿಗೆ ದೇವಿ ಸೇವೆಯನ್ನು ಮಾಡುತ್ತಾ ಬರುತ್ತಿದ್ದಾರೆ.
ಕಿಟ್ಟು ಅವರು ವೇಷ ಧರಿಸಿ ದೇವಳದಲ್ಲಿ ಪೂಜೆ ಸಲ್ಲಿಸಿದ ಬಳಿಕ ಮನೆಮನೆಗೆ ತೆರಳುತ್ತಾರೆ. ತಂಡದ ನಿರ್ವಹಣೆಗೆ ದೇವಳದಿಂದ ನಿರ್ವಾಹಕರನ್ನು ನೇಮಿಸಲಾಗುತ್ತದೆ. ಮನೆಯವರು ವೇಷಧಾರಿಗೆ ಕಾಣಿಕೆಯೊಂದಿಗೆ ಅಕ್ಕಿ, ತೆಂಗಿನ ಕಾಯಿ, ಧವಸ ಧಾನ್ಯ ನೀಡುತ್ತಾರೆ. ಅಲ್ಲದೆ ಪುಟ್ಟ ಮಕ್ಕಳಿಗೆ ಹುಲಿಯಿಂದ ಆಶೀರ್ವಾದ ಮಾಡಿಸುವುದೂ ಉಂಟು.
ಯಾವುದೇ ಕಾಣಿಕೆಯು ಕೂಡಾ ಹುಲಿವೇಷ ಧಾರಣೆ ಮಾಡಿದವರಿಗೆ ದೊರಕುವುದಿಲ್ಲ ಬದಲಾಗಿ ಇದು ದೇವಳಕ್ಕೆ ಸಲ್ಲುವ ಕಾಣಿಕೆಯಾಗಿರುತ್ತದೆ. ಈ ಪರಿಸರದ ಕೇರ್ಪಡ, ಅಲೆಕ್ಕಾಡಿ, ನಿಂತಿಕಲ್, ಎಣ್ಮೂರು, ಬಾಳಿಲ, ಮುರುಳ್ಯ ಪ್ರದೇಶದಲ್ಲಿ ತಿರುಗಾಟವಿರುತ್ತದೆ.
-ದಯಾನಂದ ಕಲ್ನಾರು