ಬೆಂಗಳೂರು: ಕೆಲ ದಿನಗಳ ಹಿಂದೆ ನಗರದಲ್ಲಿ ನಡೆದ “ಭಾರತ್ ಬಂದ್’ ಸಂದರ್ಭದಲ್ಲಿ ಪೊಲೀಸ್ ಇನ್‌ಸ್ಪೆಕ್ಟರ್‌ವೊಬ್ಬರ “ವಾಕಿಟಾಕಿ’ ಕಳವು ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಎಸ್.ಜೆ.ಪಾರ್ಕ್ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಎಂ.ಶಿವಕುಮಾರ್ ತಮ್ಮ ಠಾಣೆಯಲ್ಲೇ ಪ್ರಕರಣ ದಾಖಲಿಸಿದ್ದಾರೆ.
ಭಾರತ್ ಬಂದ್ ಸಂದರ್ಭದಲ್ಲಿ ಟೌನ್ ಹಾಲ್ ಮುಂಭಾಗ ವಿವಿಧ ಸಂಘಟನೆಗಳ ಸಾವಿರಾರು ಕಾರ್ಯಕರ್ತರು ಪ್ರತಿಭಟನೆ ಹಮ್ಮಿಕೊಂಡಿದ್ದು, ರಸ್ತೆ ತಡೆಗೆ ಮುಂದಾಗಿದ್ದರು. ಈ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಇನ್‌ಸ್ಪೆಕ್ಟರ್ ಶಿವಕುಮಾರ್, ರಸ್ತೆ ತಡೆಗೆ ಮುಂದಾಗಿದ್ದ ಕಾರ್ಯಕರ್ತರ ಗುಂಪು ಚದುರಿಸಲು ಮುಂದಾಗಿದ್ದಾರೆ.
ಈ ವೇಳೆ ಪ್ಯಾಂಟ್ ಬೆಲ್ಟ್ಗೆ ಸಿಲುಕಿಸಿದ್ದ ವಾಕಿಟಾಕಿ ಕೆಳಗೆ ಬಿದ್ದು, ಅದನ್ನು ಯಾರೋ ಕಳವು ಮಾಡಿದ್ದಾರೆ ಎಂದು ದೂರಿನಲ್ಲಿ ಇನ್‌ಸ್ಪೆಕ್ಟರ್ ಆರೋಪಿಸಿದ್ದಾರೆ. ಎಫ್ಐಆರ್‌ನಲ್ಲಿ ಏನಿದೆ?: ಸೆ.27 ರಂದು ವಿವಿಧ ಸಂಘಟನೆಗಳು ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ವಿರೋಧಿಸಿ ಭಾರತ್ ಬಂದ್‌ಗೆ ಕರೆ ನೀಡಿದ್ದು, ಅದರಂತೆ ನಾನು ನಮ್ಮ ಠಾಣಾ ವ್ಯಾಪ್ತಿಯ ಟೌನ್‌ಹಾಲ್ ಮುಂಭಾಗ ನಮ್ಮ ವಿಭಾಗದ ಹಾಗೂ ಬೇರೆ ವಿಭಾಗದಿಂದ ಬಂದಿದ್ದ ಅಧಿಕಾರಿ ಮತ್ತು ಸಿಬ್ಬಂದಿಗೆ ಕರ್ತವ್ಯ ನಿಯೋಜಿಸುತ್ತಿದ್ದೆ.
ಬೆಳಗ್ಗೆ 10 ಗಂಟೆಯಿಂದ ವಿವಿಧ ಸಂಘಟನೆಗಳು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಹತ್ತಾರು ಸಂಘಟನೆಗಳು ಜಮಾವಣೆಯಾದವು. ಬೆಳಗ್ಗೆ ಸುಮಾರು 11 ಗಂಟೆಯಿಂದ 12 ಗಂಟೆಯ ನಡುವೆ ಕೆಲವು ಸಂಘಟನೆಗಳ ಸದಸ್ಯರು ಟೌನ್‌ಹಾಲ್ ಮುಂಭಾಗ ರಸ್ತೆ ತಡೆಮಾಡಲು ಪ್ರಯತ್ನಿಸಿದ್ದು, ಆ ಸಮಯ ದಲ್ಲಿ ನಮ್ಮ ಸಿಬ್ಬಂದಿ ಜತೆ ಸೇರಿ ರಸ್ತೆ ತಡೆಯಲು ಮುಂದಾಗಿದ್ದ ಕಾರ್ಯಕರ್ತರ ಗುಂಪಿನ ನಡುವೆ ನುಗ್ಗಿ ಯತ್ನಿಸುತ್ತಿದ್ದೆ.
ಈ ವೇಳೆ ತನಗೆ ಅರವಿಲ್ಲದೆ, 817 ಟಿವಿಕೆ 2355 ನಂಬರಿನ ವಾಕಿಟಾಕಿ ಕೆಳಗಡೆ ಬಿದ್ದು ಹೋಗಿದ್ದು, ನಾನು ಕೂಡ ಗಮನಿಸಿರಲಿಲ್ಲ. ನಂತರ ವಾಕಿಟಾಕಿಯಿಂದ ಕಂಟ್ರೋಲ್ ರೂಮ್‌ಗೆ ಮಾಹಿತಿ ನೀಡಲು ವಾಕಿಟಾಕಿ ಯನ್ನು ನೋಡಿಕೊಂಡಾಗ ಕೆಳಗೆ ಬಿದ್ದಿರುವುದು ಗೊತ್ತಾಗಿದೆ. ನಂತರ ನಾನು ಹಾಗೂ ಸಿಬ್ಬಂದಿ ವಾಕಿಟಾಕಿಹುಡುಕಲಾಗಿದ್ದು, ಎಲ್ಲಿಯೂ ಪತ್ತೆಯಾಗಿಲ್ಲ, ಕೂಡಲೇ ಈ ಬಗ್ಗೆ ಕಂಟ್ರೋಲ್ ರೂಮ್‌ಗೆ ಮಾಹಿತಿ ನೀಡಿದ್ದೇನೆ. ಯಾರೋ ಅಪರಿಚಿತರು ಕೆಳಗೆ ಬಿದ್ದ ವಾಕಿಟಾಕಿಯನ್ನು ತೆಗೆದು ಕೊಂಡು ವಾಪಸ್ ಕೊಡದೆ, ದುರು ದ್ದೇಶದಿಂದ ಕಳವು ಮಾಡಿದ್ದಾರೆ ದೂರಿನಲ್ಲಿ ಉಲ್ಲೇಖೀಸಿದ್ದಾರೆ.