Advertisement

ಸಿಆರ್‌ಝಡ್‌ ನಕ್ಷೆಗಾಗಿ ಕಾಯುತ್ತಿದೆ ಬೀಚ್‌ ಪ್ರವಾಸೋದ್ಯಮ

01:22 AM May 09, 2022 | Team Udayavani |

ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಬೀಚ್‌ ಪ್ರವಾಸೋದ್ಯಮವು ಬಹುನಿರೀಕ್ಷೆಯ “ಕರಾವಳಿ ನಿಯಂತ್ರಣ ವಲಯ (ಸಿಆರ್‌ಝಡ್‌) ಅಧಿಸೂಚನೆ-2019’ರ ನೂತನ ನಕ್ಷೆಯನ್ನು ಎದುರು ನೋಡುತ್ತಿದೆ.

Advertisement

ಕರ್ನಾಟಕ ರಾಜ್ಯ ಕರಾವಳಿ ವಲಯ ನಿರ್ವಹಣ ಪ್ರಾಧಿಕಾರ (ಕೆಎಸ್‌ಸಿಝಡ್‌ಎಂಎ)ವು ಕರಾವಳಿ ನಿಯಂತ್ರಣ ವಲಯ (ಸಿಆರ್‌ಝಡ್‌) ಅಧಿಸೂಚನೆ 2019ರಂತೆ ತಯಾರಿಸಿರುವ ಕರ್ನಾಟಕ ರಾಜ್ಯ ಕರಾವಳಿ ವಲಯ ನಿರ್ವಹಣ ಯೋಜನೆಯ ನಕ್ಷೆಯನ್ನು ಚೆನ್ನೈಯ ನ್ಯಾಷನಲ್‌ ಸೆಂಟರ್‌ ಫಾರ್‌ ಸಸ್ಟೆನೇಬಲ್‌ ಕೋಸ್ಟಲ್‌ ಮ್ಯಾನೇಜ್‌ಮೆಂಟ್‌ (ಎನ್‌ಸಿಎಸ್‌ಸಿಎಂ)ಗೆ ಅನುಮೋದನೆಗಾಗಿ ಕಳುಹಿಸಿದೆ. ಈಗ ಎಲ್ಲ ಪ್ರಕ್ರಿಯೆಗಳನ್ನು ಪೂರೈಸಿ ಅಂತಿಮ ಅನುಮೋದನೆಗಾಗಿ ರಾಷ್ಟ್ರೀಯ ಕರಾವಳಿ ವಲಯ ನಿರ್ವಹಣೆ ಪ್ರಾಧಿಕಾರ (ಎನ್‌ಸಿಝಡ್‌ಎಂ)ದಲ್ಲಿ ಇದೆ.

ದಕ್ಷಿಣ ಕನ್ನಡದ ಸಸಿಹಿತ್ಲು, ಸುರತ್ಕಲ್‌, ಚಿತ್ರಾಪುರ, ಇಡ್ಯಾ, ಹೊಸಬೆಟ್ಟು, ಪಣಂಬೂರು, ಬೆಂಗ್ರೆ, ತಣ್ಣೀರುಬಾವಿ, ತಣ್ಣೀರುಬಾವಿ ಬ್ಲೂಫ್ಲ್ಯಾಗ್‌ ಬೀಚ್‌, ಉಳ್ಳಾಲ, ಸೋಮೇಶ್ವರ, ಸೋಮೇಶ್ವರ ಬಟ್ಟಪ್ಪಾಡಿ ಬೀಚ್‌ಗಳು, ಪಲ್ಗುಣಿ ನದಿಯಲ್ಲಿ ಬಂಗ್ರ ಕೂಳೂರು, ತಣ್ಣೀರುಬಾವಿ ಬೆಂಗ್ರೆ, ಕೂಳೂರು ಸೇತುವೆಯ ಉತ್ತರ ಭಾಗ ಎನ್‌ಸಿಝಡ್‌ಎಂಗೆ ಸಲ್ಲಿಸಿದ ವಿವರಗಳಲ್ಲಿ ಒಳಗೊಂಡಿದೆ. ನಾಲ್ಕು ಕುದ್ರುಗಳನ್ನು ಇದರಲ್ಲಿ ಉಲ್ಲೇಖಿಸಲಾಗಿದೆ.

ಉಡುಪಿ ಜಿಲ್ಲೆಯಲ್ಲಿ ಪಡುವರಿ ಸೋಮೇಶ್ವರ, ಕಿರಿಮಂಜೇಶ್ವರ, ಮರವಂತೆ, ತ್ರಾಸಿ, ಕೋಡಿ ಕುಂದಾಪುರ, ಕೋಟೇಶ್ವರ, ಕೋಡಿ, ಬೀಜಾಡಿ, ಕೋಟ ಪಡುಕರೆ, ಕೋಡಿ ಕನ್ಯಾನ, ಕೋಡಿ ಬೆಂಗ್ರೆ, ಕದಿಕೆ, ತೊಟ್ಟಂ, ಮಲ್ಪೆ, ಮಲ್ಪೆ ಸೀವಾಕ್‌, ಪಡುಕರೆ, ಮಟ್ಟು, ಕಾಪು, ಪಡುಬಿದ್ರೆ ಮುಖ್ಯ ಬೀಚ್‌, ಪಡುಬಿದ್ರೆ ಎಂಡ್‌ಪಾಯಿಂಟ್‌, ಹೆಜಮಾಡಿ ಬೀಚ್‌ಗಳು, ಮಾಬುಕಳ ಸೀತಾನದಿ, ಕೆಮ್ಮಣ್ಣು ಹೂಡೆ ನದಿ ಒಳಗೊಂಡಿದೆ. 9 ಕುದ್ರುಗಳನ್ನು ಉಲ್ಲೇಖಿಸಲಾಗಿದೆ.

ಮೀನುಗಾರರ ಮನೆ ನಿರ್ಮಾಣಕ್ಕಾಗಿ ಸದ್ಯ 100 ಮೀ. ದೂರದ ವರೆಗೆ ಸಿಆರ್‌ಝಡ್‌ ನಿರ್ಬಂಧವಿದ್ದರೆ ಹೊಸ ಅಧಿಸೂಚನೆಯ ಪ್ರಕಾರ 50 ಮೀ.ವರೆಗೆ ಮಾತ್ರ ಇರಲಿದೆ. ಇಂತಹ ಹಲವು ಅವಕಾಶಗಳು ಹೊಸ ನಕ್ಷೆಯ ಮೂಲಕ ದೊರೆಯಲಿವೆ.

Advertisement

ಕರಾವಳಿಯಲ್ಲಿ ಸಾಗರ ಪ್ರವಾಸೋದ್ಯಮ ಅಭಿವೃದ್ಧಿ ಬಗ್ಗೆ ಮಂಗಳೂರಿನ ಮೀನುಗಾರಿಕೆ ಕಾಲೇಜು ಈಗಾಗಲೇ ವಿಸ್ತೃತ ವರದಿಯೊಂದನ್ನು ಸಿದ್ಧಪಡಿಸಿ ಪ್ರವಾಸಸೋದ್ಯಮ ಇಲಾಖೆಗೆ ಸಲ್ಲಿಸಿದೆ. ಇದರಲ್ಲಿ ಬೀಚ್‌ಗಳಲ್ಲಿ ಮೂಲ ಸೌಲಭ್ಯಗಳ ಅಭಿವೃದ್ಧಿ, ಪ್ರವಾಸೋದ್ಯಮ ಚಟುವಟಿಕೆಗಳಿಗೆ ಅವಕಾಶ, ಪೂರಕ ಕ್ರಮಗಳ ಬಗ್ಗೆ ಉಲ್ಲೇಖಿಸಲಾಗಿದೆ.

ಹೊಸ ನಕ್ಷೆಯಿಂದ ಅನುಕೂಲ
ಹೊಸ ನಕ್ಷೆ ಅನುಮೋದನೆಗೊಂಡು ಅನುಷ್ಠಾನಕ್ಕೆ ಬಂದರೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಸುಮಾರು 34 ಬೀಚ್‌ಗಳು ಹಾಗೂ 6 ಹಿನ್ನೀರು ತಾಣಗಳಿಗೆ ಅನುಕೂಲವಾಗಲಿದೆ. ಸಿಆರ್‌ಝಡ್‌ ಅಧಿಸೂಚನೆ 2019ರಂತೆ ಬೀಚ್‌ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಈಗಾಗಲೇ ರಾಷ್ಟ್ರೀಯ ಕರಾವಳಿ ವಲಯ ನಿರ್ವಹಣೆ ಪ್ರಾಧಿಕಾರಕ್ಕೆ ಇವುಗಳ ಪಟ್ಟಿ ಸಲ್ಲಿಕೆಯಾಗಿದೆ.

ಹೊಸ ನಕ್ಷೆಯ ಪ್ರಕಾರ ಸಿಆರ್‌ಝಡ್‌ ವಲಯದಲ್ಲಿ ಭರತ ರೇಖೆಯಿಂದ 10 ಮೀ. ಬಳಿಕ ತಾತ್ಕಾಲಿಕ ಕಟ್ಟಡ, ಸ್ಟ್ರಕ್ಚರ್‌ಗಳನ್ನು ನಿರ್ಮಿಸಿ ಪ್ರವಾಸೋದ್ಯಮ ಚಟುವಟಿಕೆಗಳನ್ನು ನಡೆಸಲು ಅವಕಾಶ ಕಲ್ಪಿಸಲಾಗುತ್ತದೆ. ಪ್ರಸಕ್ತ ಕಡಲ ತೀರದಲ್ಲಿ ಯಾವುದೇ ಹೊಸ ನಿರ್ಮಾಣ ಚಟುವಟಿಕೆಗಳಿಗೆ ಅವಕಾಶವಿಲ್ಲ. ಹಳೆಯ ಕಟ್ಟಡಗಳನ್ನು ಮಾತ್ರ ದುರಸ್ತಿ ಮಾಡಬಹುದಾಗಿದೆ.

ಬೀಚ್‌ಗಳು, ಹಿನ್ನೀರು ತಾಣಗಳು ಹಾಗೂ ಕುದ್ರುಗಳ ಪಟ್ಟಿಯನ್ನು ಪ್ರವಾಸೋದ್ಯಮ ಇಲಾಖೆಯಿಂದ ಕೆಎಸ್‌ಸಿಝಡ್‌ಎಂಎಗೆ ನೀಡಿದ್ದೇವೆ. ಸಿಆರ್‌ಝಡ್‌ ಅಧಿಸೂಚನೆ 2019ರಂತೆ ಹೊಸ ನಕ್ಷೆ ಅನುಷ್ಠಾನಕ್ಕೆ ಬಂದ ಬಳಿಕ ಪ್ರವಾಸೋದ್ಯಮ, ಬೀಚ್‌ ಪ್ರವಾಸೋದ್ಯಮಕ್ಕೆ ಹೆಚ್ಚಿನ ಅನುಕೂಲವಾಗಲಿದೆ.
– ಮಾಣಿಕ್ಯ, ಪ್ರವಾಸೋದ್ಯಮ ಉಪನಿರ್ದೇಶಕರು, ದ.ಕ.
– ಕ್ಲಿಫರ್ಡ್‌ ಲೋಬೋ, ಪ್ರವಾಸೋದ್ಯಮ ಉಪನಿರ್ದೇಶಕರು ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next