Advertisement

ವಾಡಿ ಪುರಸಭೆ: 19 ಕೋಟಿ ಬಜೆಟ್‌ ಮಂಡನೆ

09:50 AM Feb 25, 2022 | Team Udayavani |

ವಾಡಿ: ಪಟ್ಟಣದಲ್ಲಿ ಕಳೆದ 20 ವರ್ಷಗಳಿಂದ ಸಾರ್ವಜನಿಕ ಗ್ರಂಥಾಲಯ ಸೌಲಭ್ಯ ಮರೀಚಿಕೆ ಯಾಗಿದೆ. ಆದರೂ ಪುರಸಭೆ ಆಡಳಿತದಿಂದ ಪ್ರತಿ ವರ್ಷ ಸರ್ಕಾರಕ್ಕೆ ವಾರ್ಷಿಕ 20 ಲಕ್ಷ ರೂ. ತೆರಿಗೆ ಪಾವತಿಯಾಗುತ್ತಿರುವ ಸಂಗತಿ ಬಯಲಾಗಿದೆ.

Advertisement

ಪ್ರಸಕ್ತ 2022 ಹಾಗೂ 23ನೇ ಸಾಲಿನ ಬಜೆಟ್‌ನಲ್ಲಿ ಗ್ರಂಥಾಲಯ ತೆರಿಗೆ 20 ಲಕ್ಷ ರೂ. ಮೀಸಲಿಡಲಾಗಿದ್ದು, ಕಾಂಗ್ರೆಸ್‌ ಬಿಜೆಪಿ ಸೇರಿದಂತೆ ಯಾವೊಬ್ಬ ಪುರಸಭೆ ಸದಸ್ಯರೂ ಇದನ್ನು ಪ್ರಶ್ನಿಸಲಿಲ್ಲ. ನಗರದಲ್ಲಿ ಹಿರಿಯ ನಾಗರಿಕರು, ವಿದ್ಯಾರ್ಥಿಗಳು ಹಾಗೂ ಸಾಹಿತ್ಯಾಸಕ್ತರ ಸಂಖ್ಯೆ ಹೆಚ್ಚಿದ್ದರೂ ಗ್ರಂಥಾಲಯ ಸೌಲಭ್ಯ ಒದಗಿಸದ ಪುರಸಭೆ ಆಡಳಿತ ನಿಯಮಬದ್ಧವಾಗಿ ಪ್ರತಿ ವರ್ಷ ಲಕ್ಷಾಂತರ ರೂ. ಸರ್ಕಾರಕ್ಕೆ ಪಾವತಿಸುತ್ತಿರುವುದು ನಿಜಕ್ಕೂ ಆಶ್ಚರ್ಯಕರ ಸಂಗತಿಯಾಗಿದೆ.

ಗುರುವಾರ ಪಟ್ಟಣದ ಪುರಸಭೆಯಲ್ಲಿ ಕಾಂಗ್ರೆಸ್‌ ಆಡಳಿತ ಒಟ್ಟು 19 ಕೋಟಿ ರೂ. ವಾರ್ಷಿಕ ಆಯವ್ಯಯ ಪ್ರಕಟಿಸುವ ಮೂಲಕ 48.51 ಲಕ್ಷ ರೂ. ಉಳಿತಾಯ ಬಜೆಟ್‌ ಮಂಡಿಸಿತು. ಪಜಾ ಹಾಗೂ ಪಪಂ ಅಭಿವೃದ್ಧಿಗಾಗಿ ಶೇ.24.10 ರಲ್ಲಿ 32 ಲಕ್ಷ ರೂ. ಮೀಸಲಿಡಲಾಗಿದ್ದು, ಸರ್ಕಾರಕ್ಕೆ ಪಾವತಿಸಬೇಕಾದ ತೆರಿಗೆಗಳಲ್ಲಿ ಆರೋಗ್ಯಕ್ಕೆ 40 ಲಕ್ಷ, ಗ್ರಂಥಾಲಯಕ್ಕೆ 20 ಲಕ್ಷ, ಭಿಕ್ಷುಕರ 15 ಲಕ್ಷ, ಸಾರಿಗೆಗೆ 8 ಲಕ್ಷ ರೂ. ತೆಗೆದಿರಿಸಲಾಗಿದೆ.

ಕುಡಿಯುವ ನೀರಿಗೆ ವಿಶೇಷ ಆದ್ಯತೆ ಇರಲಿ

ಬೇಸಿಗೆ ಸಮೀಪಿಸುತ್ತಿದೆ. ಜಲ ಮೂಲಗಳು ಬತ್ತುವ ಸಾಧ್ಯತೆಯಿದೆ. ಕುಡಿಯುವ ನೀರಿನ ಹಾಹಾಕಾರ ಭುಗಿಲೇಳದಂತೆ ಎಚ್ಚರಿಕೆ ವಹಿಸಬೇಕು. ನದಿಗಳಲ್ಲಿ ನೀರು ಸಂಗ್ರಹಕ್ಕೆ ರಿಂಗ್‌ಬಂಡ್‌ ವ್ಯವಸ್ಥೆ ಮಾಡಬೇಕು. ಸಂದರ್ಭ ಎದುರಾದರೆ ಟ್ಯಾಂಕರ್‌ ಗಳ ಮೂಲಕ ಬಡಾವಣೆಗಳಿಗೆ ನೀರು ತಲುಪಿಸಲು ಸಿದ್ಧತೆಯಲ್ಲಿರಬೇಕು. ಯಾವುದೇ ಕಾರಣಕ್ಕೂ ಜನರಿಗೆ ಕುಡಿಯುವ ನೀರಿನ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು. ಇದಕ್ಕಾಗಿ ವಿಶೇಷ ಅನುದಾನ ಮೀಸಲಿಡಬೇಕು ಎಂದು ಪುರಸಭೆಯ ವಿರೋಧ ಪಕ್ಷದ ನಾಯಕ, ಬಿಜೆಪಿಯ ಭೀಮಶಾ ಜಿರೊಳ್ಳಿ ಕಾಂಗ್ರೆಸ್‌ ಆಡಳಿತದ ಗಮನ ಸೆಳೆದರು.

Advertisement

ನಾವು ಅನಪಡ್‌ ಇದ್ದೀವಿ ಜರಾ ತಿಳಿಸಿ ಹೇಳಿದೆ

ಬಜೆಟ್‌ ವಿಷಯದ ಕುರಿತು ಚರ್ಚೆ ನಡೆಯುತ್ತಿದ್ದಾಗ ಲೆಕ್ಕಾಧಿಕಾರಿ ಕೆ.ವಿರೂಪಾಕ್ಷಿ ಬಜೆಟ್‌ ಸಾರಾಂಶ ಓದುತ್ತಿದ್ದರು. ಈ ವೇಳೆ ಬಿಜೆಪಿ ನಾಯಕ ಭೀಮಶಾ ಜಿರೊಳ್ಳಿ ಆಡಳಿತದಿಂದ ಭರಿಸಲಾಗುತ್ತಿರುವ ವ್ಯರ್ಥ ಖರ್ಚುಗಳನ್ನು ಪ್ರಶ್ನಿಸಲು ಮುಂದಾದರು. ಬಜೆಟ್‌ ದಾಖಲೆಯಲ್ಲಿನ ಕೆಲವು ಪದಗಳು ಅರ್ಥವಾಗದಿದ್ದಾಗ “ನಿಂದ್ರೀ ಸ್ಪೀಡ್‌ ಹೋಗ್ಬ್ಯಾಡ್ರಿ. ನಮ್ಮ ಕಣ್ತಪ್ಪಿಸುವ ಕೆಲ್ಸಾ ಮಾಡಬ್ಯಾಡ್ರಿ.. ನಾವು ಅನಪಡ್‌ ಇದ್ದೀವಿ. ಜರಾ ಎಲ್ಲವೂ ಸ್ಪಷ್ಟವಾಗಿ ತಿಳಿಸಿ ಹೇಳಿದೆ ಎಂದು ಅಧಿಕಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಪ್ರಸಂಗ ನಡೆಯಿತು.

ಇದೇ ಸಂದರ್ಭದಲ್ಲಿ ಸದಸ್ಯರಿಗೆ ಸಭೆಯ ಭತ್ಯೆ ನೀಡುವಂತೆ ಒತ್ತಾಯಿಸಿದ ಭೀಮಶಾ ಜಿರೊಳ್ಳಿ ಮಾತಿಗೆ ಸದಸ್ಯರೆಲ್ಲರೂ ನಕ್ಕರು. ಶಾಸಕರುಗಳು ವಿಧಾನಸಭೆ ಕಲಾಪಗಳಿಗಾಗಿ ದೂರದ ಬೆಂಗಳೂರಿಗೆ ಹೋಗುವುದರಿಂದ ಪ್ರಯಾಣ, ಊಟ, ವಸತಿ ಭತ್ಯೆ ನೀಡಲಾಗುತ್ತದೆ. ಇದ್ದ ಊರಲ್ಲೇ ಸಭೆಗೆ ಬರುವ ಪುರಸಭೆ ಸದಸ್ಯರಿಗೆ ಭತ್ಯೆ ನೀಡುವ ಅವಶ್ಯಕತೆ ಬೀಳುವುದಿಲ್ಲ ಎಂದು ಮುಖ್ಯಾಧಿಕಾರಿ ಡಾ| ಚಿದಾ ನಂದ ಸ್ವಾಮಿ ತಿಳಿಸಿದರು.

ಕಾಂಗ್ರೆಸ್‌ ಆಡಳಿತ ಸದಸ್ಯರೇ ಗೈರು

ಬಜೆಟ್‌ ಸಭೆಗೆ ಪುರಸಭೆಯ ಆಡಳಿತಾರೂಢ ಕಾಂಗ್ರೆಸ್‌ ಸದಸ್ಯರೇ ಹೆಚ್ಚಿನ ಸಂಖ್ಯೆಯಲ್ಲಿ ಗೈರಾಗುವ ಮೂಲಕ ಪ್ರತಿಪಕ್ಷ ಬಿಜೆಪಿ ಸದಸ್ಯರ ಟೀಕೆಗೆ ಗುರಿಯಾದರು.

ಅಧ್ಯಕ್ಷೆ ಝರೀನಾಬೇಗಂ, ಉಪಾಧ್ಯಕ್ಷ ದೇವಿಂದ್ರ ಕರದಳ್ಳಿ, ಸದಸ್ಯರಾದ ಸುಗಂಧಾ ಜೈಗಂಗಾ, ಗಂಗಾ ರಾಠೊಡ, ಮಗರಪ್ಪ ಕಲಕುಟಗಿ, ಪೃಥ್ವಿರಾಜ ಸೂರ್ಯವಂಶಿ, ಮಲ್ಲಯ್ಯ ಗುತ್ತೇದಾರ, ಮಹ್ಮದ್‌ ಗೌಸ್‌ ಮಾತ್ರ ಪಾಲ್ಗೊಂಡಿದ್ದರು. ಹಸಿನಾಬೇಗಂ, ಮೈನಾಬಾಯಿ, ಗುಜ್ಜಾಬಾಯಿ, ಅಫÕರಾಬೇಗಂ, ಶಾರಣು ನಾಟೀಕಾರ, ವಿಶಾಲ ನಂದೂರಕರ ಸಭೆಗೆ ಹಾಜರಾಗಿರಲಿಲ್ಲ.

ಸರ್ಕಾರದಿಂದ ಪುರಸಭೆಗೆ ನಾಮನಿರ್ದೇಶನಗೊಂಡ ನಾಲ್ವರು ಸದಸ್ಯರಾದ ಬಿಜೆಪಿಯ ವೀರಣ್ಣ ಯಾರಿ, ಕಿಶನ ಜಾಧವ, ಹರಿ ಗಲಾಂಡೆ, ರವಿ ಜಾಧವ ಅವರನ್ನು ಅಧ್ಯಕ್ಷೆ ಝರೀನಾಬೇಗಂ, ಉಪಾಧ್ಯಕ್ಷ ದೇವಿಂದ್ರ ಕರದಳ್ಳಿ ಹಾಗೂ ಮುಖ್ಯಾಧಿಕಾರಿ ಡಾ| ಚಿದಾನಂದ ಸ್ವಾಮಿ ಸನ್ಮಾನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next