Advertisement

ವಾಡಿ ಪುರಸಭೆ: ಶೇ.56 ಮತದಾನ

03:40 PM Apr 08, 2017 | |

ವಾಡಿ: ಪಟ್ಟಣದ ಪುರಸಭೆ ಮೂರನೇ ಅವಧಿ ಚುನಾವಣೆ ಶುಕ್ರವಾರ ಪೊಲೀಸ್‌ ಬಿಗಿಭದ್ರತೆ ಮಧ್ಯೆ ಶಾಂತಿಯುತವಾಗಿ ನಡೆಯಿತು. ಮತದಾರರು ವಿದ್ಯುನ್ಮಾನದ ಮತಯಂತ್ರಗಳ ಗುಂಡಿ ಒತ್ತುವ ಮೂಲಕ ಕಣದಲ್ಲಿದ್ದ ಒಟ್ಟು 72 ಅಭ್ಯರ್ಥಿಗಳ ಹಣೆಬರಹ ಬರೆದರು. 

Advertisement

ಪುರಸಭೆ ವ್ಯಾಪ್ತಿಯ ಒಟ್ಟು 34040 ಜನ ಮತದಾರರಲ್ಲಿ 18898 ಜನ ಮತ ಚಲಾಯಿಸಿದ್ದು, ಶೇ.56.3 ಮತದಾನವಾಗಿದೆ ಎಂದು ಚುನಾವಣಾಧಿಧಿಕಾರಿ ಮಲ್ಲೇಶ ತಂಗಾ ತಿಳಿಸಿದ್ದಾರೆ. ಪಟ್ಟಣದ ಒಟ್ಟು 23 ವಾರ್ಡ್‌ಗಳಲ್ಲಿ ಸ್ಥಾಪಿಸಲಾಗಿದ್ದ ಹಲವು ಮತಗಟ್ಟೆಗಳ ಮುಂದೆ ಬೆಳಗ್ಗೆಯಿಂದಲೇ ಜನರು ಸಾಲುಗಟ್ಟಿ ನಿಂತು ಮತ ಚಲಾಯಿಸಿದರು.

ಮಧ್ಯಾಹ್ನದ ಉರಿಬಿಸಿಲು ಲೆಕ್ಕಿಸದೆ ತಾಂಡಾಗಳಲ್ಲಿ ಲಂಬಾಣಿ ಜನರು ಮತಗಟ್ಟೆಗಳತ್ತ ಬರುತ್ತಿದ್ದ ದೃಶ್ಯಗಳು ಕಂಡುಬಂದವು. ರೆಸ್ಟ್‌ಕ್ಯಾಂಪ್‌ ತಾಂಡಾದ ಎಂಪಿಎಸ್‌ ಶಾಲೆಯಲ್ಲಿನ ನಾಲ್ಕು ಮತಗಟ್ಟೆಗಳಿಗೆ ಪ್ರವೇಶಿಸಲು ಇಳಿಜಾರಿನ ರಸ್ತೆಯಲ್ಲಿ ನಡೆಯಲಾಗದೆ ವೃದ್ಧರು, ಅಂಗವಿಕಲರು ತೀವ್ರ ತೊಂದರೆ ಅನುಭವಿಸಿದರು.

ರಾಜಕೀಯ ಪಕ್ಷಗಳ ಕಾರ್ಯಕರ್ತರು ಹಾಗೂ ಪೊಲೀಸ್‌ ಸಿಬ್ಬಂದಿ ವಯೋವೃದ್ಧರಿಗೆ ಆಸರೆಯಾದರು. ಸಚಿವ ಪ್ರಿಯಾಂಕ್‌ ಖರ್ಗೆ ಹಾಗೂ ಮಾಜಿ ಶಾಸಕ ಬಿಜೆಪಿಯ ವಾಲ್ಮೀಕಿ ನಾಯಕ ವಿವಿಧ ಮತದಾನ ಕೇಂದ್ರಗಳಿಗೆ ಭೇಟಿ ನೀಡಿ ಚುನಾವಣೆ ಪ್ರಕ್ರಿಯೆ ಅರಿತುಕೊಂಡರು. 

ವ್ಯಾಪಕ ಭದ್ರತೆ: ಪಟ್ಟಣ ವ್ಯಾಪ್ತಿಯ 23 ವಾರ್ಡ್‌ಗಳ ಮತದಾರರ ಅನುಕೂಲಕ್ಕಾಗಿ ಸ್ತಾಪಿಸಲಾಗಿದ್ದ 33 ಮತದಾನ ಕೇಂದ್ರಗಳಿಗೆ ವ್ಯಾಪಕ ಪೊಲೀಸ್‌ ಭದ್ರತೆ ಒದಗಿಸಲಾಗಿತ್ತು. 

Advertisement

ಸಹಾಯಕ ಆಯುಕ್ತ ಭೀಮಾಶಂಕರ ತೆಗ್ಗಳ್ಳಿ, ಚುನಾವಣಾಧಿಕಾರಿ ತಹಶೀಲ್ದಾರ ಮಲ್ಲೇಶ ತಂಗಾ, ಮಲ್ಲಣ್ಣ ದೇಸಾಯಿ, ಲಕ್ಷಣ ಶೃಂಗೇರಿ, ಶಿವಶರಣಪ್ಪ ಬನ್ನಿಕಟ್ಟಿ ಹಾಗೂ ಡಿವೈಎಸ್‌ಪಿ ಮಹೇಶ ಮೇಘಣ್ಣವರ್‌, ಸಿಪಿಐ ಶಂಕರಗೌಡ ಪಾಟೀಲ ಮತದಾನ ಪ್ರಕ್ರಿಯೆ ಶಾಂತಿಯುತವಾಗಿ ಪೂರ್ಣಗೊಳಿಸುವಲ್ಲಿ ಯಶಸ್ವಿಯಾದರು. 

ಪ್ರತಿಭಟನೆ: ವಾರ್ಡ್‌ 23ರ ವಿಜಯನಗರ ಮತಗಟ್ಟೆ ಕೇಂದ್ರದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರಿಂದ ಬೋಗಸ್‌ ಮತದಾನ ನಡೆದಿದೆ ಎಂದು ಆರೋಪಿಸಿ ಜೆಡಿಎಸ್‌ ಅಭ್ಯರ್ಥಿ ಹಾಜಪ್ಪ ಲಾಡ್ಲಾಪುರ, ಬಿಜೆಪಿ ಅಭ್ಯರ್ಥಿ ರವಿಕುಮಾರ ಕಾಳಗಿ, ಪಕ್ಷೇತರ ಅಭ್ಯರ್ಥಿ ಬಾಲರಾಜ ಬಳಿಚಕ್ರ, ಸಾಬಣ್ಣ ಈರಣ್ಣ ಸೇರಿದಂತೆ ಬೆಂಬಲಿಗರು ಪ್ರತಿಭಟನೆ ನಡೆಸಿದರು.

ಮಾಜಿ ಪುರಸಭೆ ಸದಸ್ಯ ಕಾಂಗ್ರೆಸ್‌ನ ಚಾಂದ್‌ಮಿಯ್ನಾ ಎನ್ನುವರು ಎರಡು ಮತದಾನ ಕೇಂದ್ರಗಳಲ್ಲಿ ಪ್ರತ್ಯೇಕವಾಗಿ ಮತ ಚೆಲಾಯಿಸಿದ್ದಾರೆ. ಅವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.  

Advertisement

Udayavani is now on Telegram. Click here to join our channel and stay updated with the latest news.

Next