ವಾಡಿ: ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಮನೆಯಲ್ಲಿ ಲಾಕ್‌ಡೌನ್ ಸಂಕಟ ಅನುಭವಿಸಿದ ಗ್ರಾಮೀಣ ಜನರಿಗೆ ಉದ್ಯೋಗ ಖಾತ್ರಿ ಯೋಜನೆ ರಟ್ಟೆಗೆ ಕೆಲಸ ಕೊಟ್ಟು ಹೊಟ್ಟೆಗೆ ರೊಟ್ಟಿ ಒದಗಿಸಿದ್ದು, ಕೂಲಿ ಕಾರ್ಮಿಕರ ಬದುಕಿಗೆ ಇದು ಆಸರೆಯಾಗಿದೆ.
ಲಾಡ್ಲಾಪುರ ಗ್ರಾಪಂ ವ್ಯಾಪ್ತಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಒಟ್ಟು 800 ಜನ ಶ್ರಮಿಕರು ಕೆರೆ ಹೂಳೆತ್ತುವ ಹಾಗೂ ಹೊಲಗಳಲ್ಲಿ ಬದು ನಿರ್ಮಾಣ ಕಾಯಕದಲ್ಲಿ ತೊಡಗಿದ್ದಾರೆ. ಗ್ರಾಪಂ ಪಿಡಿಒ ಗುರುನಾಥರೆಡ್ಡಿ ಹೂವಿನಬಾವಿ ಹಾಗೂ ಗ್ರಾಪಂ ಅಧ್ಯಕ್ಷ ಸಾಬಣ್ಣ ಆನೇಮಿ ಅವರು ಕೋವಿಡ್ ಸಂಕಟದಲ್ಲಿ ಆರ್ಥಿಕ ತೊಂದರೆಯಲ್ಲಿದ್ದ ಗ್ರಾಮಸ್ಥರಿಗೆ ಜಾಬ್ ಕಾರ್ಡ್ ವಿತರಿಸುವ ಮೂಲಕ ಕೆಲಸ ಒದಗಿಸಿದ್ದಾರೆ. ಪ್ರತಿನಿತ್ಯ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಕೆರೆಯಂಗಳದಲ್ಲಿ ಕೂಲಿಕಾರರ ಸೈನ್ಯ ಗುದ್ದಲಿ ಸಲಿಕೆ ಹಿಡಿದು ಬೆವರು ಸುರಿಸುತ್ತಿದೆ. ಕೆರೆಯ ಏರಿಯ ಮೇಲೆ ಬುಟ್ಟಿ ತುಂಬ ಮಣ್ಣು ಹೊತ್ತು ಜಾನಪದ ಹಾಡುಗಳನ್ನು ಹೇಳುತ್ತಾ ಕಾಯಕ ಕ್ರಾಂತಿಗೆ ಧ್ವನಿಗೂಡಿಸುತ್ತಿದ್ದಾರೆ.
ಕೃಷಿ ಭೂಮಿಯಲ್ಲಿ ಬದು ನಿರ್ಮಾಣ: ಸಾಮಾನ್ಯವಾಗಿ ಉದ್ಯೋಗ ಖಾತ್ರಿ ಯೋಜನೆಯ ಕೆಲಸ ಎಂದರೆ ಕೆರೆ ಮತ್ತು ಹಳ್ಳದಲ್ಲಿ ಹೂಳೆತ್ತುವ ಕಾಯಕ. ಲಾಡ್ಲಾಪುರದಲ್ಲೂ ಕೋಗಿಲ ಕೆರೆ ಹೂಳೆತ್ತುವ ಕಾರ್ಯ ಭರದಿಂದ ಸಾಗಿದೆ. ಇದರ ಜತೆಗೆ ರೈತರ ಹೊಲಗಳಲ್ಲಿ ಬದು ನಿರ್ಮಾಣಕ್ಕೆ ವಿಶೇಷ ಆಸಕ್ತಿ ವಹಿಸಲಾಗಿದೆ. ಭಾರಿ ಮಳೆಯಿಂದ ಹೊಲ ಗದ್ದೆಗಳ ಮಣ್ಣು ಕೊಚ್ಚಿ ಹೋಗದಿರಲಿ, ಫಲವತ್ತಾದ ಕೃಷಿ ಮಣ್ಣು ರೈತನ ಹೊಲದಲ್ಲಿಯೇ ಉಳಿಯಬೇಕು. ಅನ್ನದಾತನ ಭೂಮಿ ರಕ್ಷಣೆಯಾಗಬೇಕು ಎಂಬ ಮಹತ್ವದ ಉದ್ದೇಶದಿಂದ ಗ್ರಾಪಂ ಅಧಿಕಾರಿಗಳು, ಕೆರೆ ಹೂಳೆತ್ತುವ ಕಾರ್ಯಕ್ಕಿಂತ ಬದು ನಿರ್ಮಿಸುವಂತೆ ಕಾರ್ಮಿಕರಿಗೆ ಸೂಚಿಸುತ್ತಿರುವುದು ರೈತಪರ ಕಾಳಜಿ ಎದ್ದು ಕಾಣುತ್ತಿದೆ. ಒಟ್ಟಾರೆ ಕೋವಿಡ್ ಸಂಕಷ್ಟದಲ್ಲಿ ಹೊಟ್ಟೆಗೆ ಗಂಜಿಯಿಲ್ಲದೆ ಚಿಂತೆಯಲ್ಲಿದ್ದ ಗುಡ್ಡದ ಊರು ಲಾಡ್ಲಾಪುರದ ಕೃಷಿ ಕೂಲಿಕಾರ್ಮಿಕರಿಗೆ ಉದ್ಯೋಗ ಖಾತ್ರಿ ಕೈ ಹಿಡಿದಿದೆ. ಗ್ರಾಮಸ್ಥರು ಸೈನಿಕರ ರೂಪದಲ್ಲಿ ಕೆಲಸಕ್ಕೆ ಹಾಜರಾಗುತ್ತಿದ್ದಾರೆ.
ಕೋವಿಡ್ ನಿಯಂತ್ರಣಕ್ಕೆ ಶ್ರಮಿಸುತ್ತಿರುವ ಈ ವೇಳೆ ದುಡಿಯುವ ಜನಗಳಿಗೆ ಉದ್ಯೋಗ ಕೊಡುವುದು ಮುಖ್ಯ ಎಂದು ಭಾವಿಸಿ ಉದ್ಯೋಗ ಖಾತ್ರಿ ಯೋಜನೆಗೆ ಚುರುಕು ಮೂಡಿಸಲಾಗಿದೆ. ಲಾಡ್ಲಾಪುರದಲ್ಲಿ ಒಟ್ಟು 800 ಜನ ಕೂಲಿಕಾರರು ಕೆಲಸ ಮಾಡುತ್ತಿದ್ದಾರೆ. 540 ಜನರು ಗ್ರಾಮದ ಕೋಗಿಲ ಕೆರೆಯಲ್ಲಿ ಹೂಳೆತ್ತಲು ಮುಂದಾಗಿದ್ದರೆ, 260 ಜನರು ತಮ್ಮ ತಮ್ಮ ಹೊಲಗಳಲ್ಲಿ ಬದು ನಿರ್ಮಾಣ ಮಾಡಿಕೊಳ್ಳುತ್ತಿದ್ದಾರೆ. ಕ್ವಾರಂಟೈನ್ ಮುಗಿಸಿ ಬಂದ ವಲಸೆ ಕಾರ್ಮಿಕರಿಗೂ ಉದ್ಯೋಗ ನೀಡಲು ಸಿದ್ಧರಿದ್ದೇವೆ. ಆದರೆ ಅವರು ನಮಗೆ ಕೆಲಸ ಬೇಕು ಎಂದು ಆಧಾರ್ ಗುರುತಿನ ಚೀಟಿ ಮತ್ತು ಪಡಿತರ ಚೀಟಿಯ ದಾಖಲಾತಿಗಳೊಂದಿಗೆ ಗ್ರಾಪಂಗೆ ಅರ್ಜಿ ಸಲ್ಲಿಸಬೇಕು.
ಗುರುನಾಥರೆಡ್ಡಿ
ಹೂವಿನಬಾವಿ, ಪಿಡಿಒ,
ಲಾಡ್ಲಾಪುರ ಗ್ರಾಪಂ.
ಮಡಿವಾಳಪ್ಪ ಹೇರೂರ