ಬೆಂಗಳೂರು: ಭಾರತ ಪುರುಷರ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ರಾಹುಲ್ ದ್ರಾವಿಡ್ ಅವರು ನೇಮಕವಾಗುವುದು ಬಹುತೇಕ ಖಚಿತವಾಗಿದೆ. ಹೀಗಾಗಿ ಬಿಸಿಸಿಐ ಸದ್ಯ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್ ಸಿಎ) ಮುಖ್ಯಸ್ಥ ಸ್ಥಾನಕ್ಕೆ ಸೂಕ್ತ ವ್ಯಕ್ತಿಯ ಹುಡುಕಾಟದಲ್ಲಿದೆ.
ರಾಹುಲ್ ದ್ರಾವಿಡ್ ಅವರು ಸದ್ಯ ಎನ್ ಸಿಎ ಮುಖ್ಯಸ್ಥರಾಗಿದ್ದಾರೆ. ಐಸಿಸಿ ಟಿ20 ವಿಶ್ವಕಪ್ ಬಳಿಕ ರಾಹುಲ್ ದ್ರಾವಿಡ್ ಅವರು ಭಾರತ ತಂಡದ ಕೋಚ್ ಆಗುವ ಕಾರಣ ಅವರು ಎನ್ ಸಿಎ ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗುತ್ತದೆ.
ಮಾಜಿ ಆಟಗಾರ ವಿವಿಎಸ್ ಲಕ್ಷ್ಮಣ್ ಅವರನ್ನು ಎನ್ ಸಿಎ ಮುಖ್ಯಸ್ಥ ಹುದ್ದೆಗಾಗಿ ಬಿಸಿಸಿಐ ಸಂಪರ್ಕಿಸಿದೆ. ಆದರೆ ಈ ಜವಾಬ್ದಾರಿಯನ್ನು ಲಕ್ಷ್ಮಣ್ ನಿರಾಕರಿಸಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ:ಯುವರಾಜ್ ಸಿಂಗ್ ಬಂಧನಕ್ಕೆ ಕಾರಣವಾಯ್ತು ಯುಜಿ ಚಾಹಲ್ ಟಿಕ್ ಟಾಕ್ ವಿಡಿಯೋ!
ಶ್ರೇಷ್ಠ ಟೆಸ್ಟ್ ಬ್ಯಾಟ್ಸಮನ್ ಆಗಿರುವ ವಿವಿಎಸ್ ಲಕ್ಷ್ಮಣ್ ಸದ್ಯ ಬೆಂಗಾಳ ರಾಜ್ಯ ಕ್ರಿಕೆಟ್ ತಂಡದ ಬ್ಯಾಟಿಂಗ್ ಕೋಚ್ ಮತ್ತು ಐಪಿಎಲ್ ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ಮೆಂಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಲಕ್ಷ್ಮಣ್ ನಿರಾಕರಣೆಯ ನಂತರ ಬಿಸಿಸಿಐ ಎನ್ ಸಿಎ ಮುಖ್ಯಸ್ಥ ಸ್ಥಾನಕ್ಕಾಗಿ ಸೂಕ್ತ ವ್ಯಕ್ತಿಯ ಹುಡುಕಾಟದಲ್ಲಿದೆ ಎಂದು ಸ್ಪೋರ್ಟ್ಸ್ ತಕ್ ವರದಿ ಮಾಡಿದೆ.