ಹುಣಸೂರು: ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಎಲ್ಲಾ ಮತದಾರರು ಪಾಲ್ಗೊಳ್ಳುವಂತೆ ಮಾಡಿ ಶೇಕಡವಾರು ಮತದಾನ ಹೆಚ್ಚಿಸುವ ಸಲುವಾಗಿ ವ್ಯವಸ್ಥಿತವಾದ ಮತದಾರರ ಶಿಕ್ಷಣ ಮತ್ತು ಚುನಾವಣಾ ಪಾಲ್ಗೊಳ್ಳುವಿಕೆ (ಸ್ವೀಪ್)ವತಿಯಿಂದ ನಗರದಲ್ಲಿ ಅಧಿಕಾರಿ ಮತ್ತು ಚುನಾವಣಾ ಸಿಬ್ಬಂದಿ ಜಾಗೃತಿ ಜಾಥಾ ನಡೆಸಿದರು.
ನಗರದ ಅಂಬೇಡ್ಕರ್ ಭವನ ಬಳಿಯಿಂದ ಹೊರಟ ಜಾಥಾಕ್ಕೆ ಸ್ವೀಪ್ ಸಮಿತಿ ಅಧ್ಯಕ್ಷರಾದ ತಾಪಂ ಇಒ ಕೃಷ್ಣಕುಮಾರ್ ಚಾಲನೆ ನೀಡಿದರು. ಜಾಥಾದಲ್ಲಿ ವಿವಿಧ ಘೋಷಣೆಗಳನ್ನು ಕೂಗಲಾಯಿತು. ತಾಲೂಕು ಮಟ್ಟದ ಮತಗಟ್ಟೆ ಅಧಿಕಾರಿಗಳನ್ನು ಒಳಗೊಂಡ ಜಾಥಾವು ಬಜಾರ್-ಜೆಎಲ್‌ಬಿ ರಸ್ತೆ ಸೇರಿದಂತೆ ನಗರದ ಪ್ರಮುಖ ಬೀದಿಗಳಲ್ಲಿ ಸಾಗಿ ಬಂದು ಘೋಷಣೆ ಕೂಗಿದರು.
ಮತದಾನ ಹೆಚ್ಚಿಸಲು ಕ್ರಮ: ಇದಕ್ಕೂ ಮುನ್ನ ಅಂಬೇಡ್ಕರ್ ಭವನದಲ್ಲಿ ನಡೆದ ಸಭೆಯಲ್ಲಿ ಇಒ ಕೃಷ್ಣಕುಮಾರ್ ಮಾತನಾಡಿ, ಕಳೆದ ಬಾರಿ ತಾಲೂಕಿನಲ್ಲಿ ಶೇ.76 ಮತದಾನವಾಗಿದ್ದು, ಇದನ್ನು ಕನಿಷ್ಠ ಶೇ.85ಕ್ಕೆ ಹೆಚ್ಚಿಸುವ ಹಾಗೂ ಮತಗಟ್ಟೆಗೆ ಬಂದು ಮತಚಲಾಯಿಸುವಂತೆ ಪ್ರೇರೇಪಿಸಲು ಚುನಾವಣಾ ಆಯೋಗದ ನಿರ್ದೇಶನದಂತೆ ಬೀದಿ ನಾಟಕ, ಸೈಕಲ್-ಬೈಕ್, ಶಾಲಾ ಮಕ್ಕಳ ಮೂಲಕ ಕಾಲ್ನಡಿಗೆ ಜಾಥಾ ನಡೆಸಲಾಗುವುದು.
ಇನ್ನು ಮುಂದೆ ನಿರಂತರ ಕಾರ್ಯಕ್ರಮವಾಗಲಿದ್ದು, ಎಲ್ಲ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಇದೊಂದು ಪ್ರಜಾಪ್ರಭುತ್ವದ ಹಬ್ಬವೆಂಬಂತೆ ಆಚರಿಸಬೇಕೆಂದು ಆಶಿಸಿದರು. ಕಚೇರಿಗಳಲ್ಲಿ ಕಾರ್ಯ ನಿರ್ವಹಿಸುವ ಸರಕಾರಿ ನೌಕರರಿಗೆ ಟೀಶರ್ಟ್ ಮತ್ತು ಬ್ಯಾಡ್ಜನ್ನು ಸ್ವೀಪ್ ವತಿಯಿಂದ ವಿತರಿಸಲಾಗುವುದು. ಅಂಗನವಾಡಿ, ಆಶಾ, ಆರೋಗ್ಯ ಕಾರ್ಯಕರ್ತರು ಸಹ ಪ್ರತ್ಯೇಕವಾಗಿ ಜಾಥಾ ನಡೆಸಬೇಕು. ಶಾಲಾ ಮಕ್ಕಳನ್ನು ಮ್ಯಾರಥಾನ್ ಹಾಗೂ ಹಿರಿಯ ನಾಗರಿಕರಿಗೆ ವಾಕ್‌ಥಾನ್ ಮೂಲಕವು ಮತದಾನದ ಅರಿವು ಮೂಡಿಸಲಾಗುವುದು ಎಂದರು.
ಮತದಾನ ಕಡಿಮೆ: ಬಿಇಒ ರೇವಣ್ಣ ಮಾತನಾಡಿ, ಶಿಕ್ಷಣದಲ್ಲಿ ಎಷ್ಟೇ ಪ್ರಗತಿ ಸಾಧಿಸಿದರೂ ಶೇಕಡಾವಾರು ಮತದಾನ ಕಡಿಮೆಯಾಗುತ್ತಿದೆ. ಈ ಬಾರಿ ವ್ಯವಸ್ಥಿತವಾಗಿ ಕಾರ್ಯಕ್ರಮ ರೂಪಿಸಲಾಗಿದೆ. ಎಲ್ಲರೂ ಒಟ್ಟಾಗಿ ಸೇರಿ ಮತದಾನ ಹೆಚ್ಚಿಸುವ ಕಾರ್ಯಕ್ರಮವನ್ನು ಯಶಸ್ವಿಯಾಗಿಸೋಣ ಎಂದರು.
ಅಕ್ಷರ ದಾಸೋಹ ನಿರ್ದೇಶಕ ಸಂತೋಷಕುಮಾರ್ ಮಾತನಾಡಿ, ತಾಲೂಕಿನಲ್ಲಿ 261 ಮತಗಟ್ಟೆಗಳಿದ್ದು, ಎಲ್ಲೆಡೆ ಜಾಗೃತಿ ಕಾರ್ಯಕ್ರಮ ಆಯೋಜಿಸಬೇಕಿದೆ. ಚುನಾವಣಾ ಆಯೋಗದ ನಿರ್ದೇಶನದಂತೆ ಯೋಜನಾಬದ್ಧ ಪ್ರಚಾರ ಮಾಡೋಣ ಎಂದರು. ಸಭೆಯಲ್ಲಿ ಪೌರಾಯುಕ್ತ ಶಿವಪ್ಪ ನಾಯ್ಕ, ಸಿಡಿಪಿಒ ನವೀನ್‌ಕುಮಾರ್, ಚುನಾವಣಾ ಶಿರಸ್ತೇದಾರ್ ತಿಮ್ಮಯ್ಯ ಸೇರಿದಂತೆ ಎಲ್ಲಾ ಮತಗಟ್ಟೆ ಅಧಿಕಾರಿಗಳು, ಅಂಗನವಾಡಿ ಕಾರ್ಯಕರ್ತೆಯರು, ಶಿಕ್ಷಕರು ಭಾಗವಹಿಸಿದ್ದರು.