Advertisement

ಮತದಾನ 6.5%, ಸಾವು 8, ಇದು ಶ್ರೀನಗರ ಉಪಚುನಾವಣೆ ವಿದ್ಯಮಾನ

03:45 AM Apr 10, 2017 | Team Udayavani |

ಶ್ರೀನಗರ/ನವದೆಹಲಿ: ಇದೆಂಥ ವಿಪರ್ಯಾಸ ನೋಡಿ. ಭಾನುವಾರ ನಡೆದ ಶ್ರೀನಗರ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ದಾಖಲಾದ ಮತದಾನ ಕೇವಲ ಶೇ.6.5ರಷ್ಟು, ಇನ್ನು ಇಲ್ಲಿ ನಡೆದ ಹಿಂಸಾಚಾರಕ್ಕೆ ಬಲಿಯಾಗಿದ್ದು 8 ಮಂದಿ! ಕಣಿವೆ ರಾಜ್ಯದ ಶ್ರೀನಗರದಲ್ಲಿ ಹಿಂಸೆಯಿಂದಲೇ ಆರಂಭವಾದ ಮತದಾನ ಹಿಂಸೆಯಿಂದಲೇ ಕೊನೆಗೊಂಡಿದೆ. ಕ್ಷೇತ್ರದ ವಿವಿಧ ಭಾಗಗಳಲ್ಲಿ ಜನರು ನಡೆಸಿದ ಪ್ರತಿಭಟನೆಗಳು ಹಿಂಸೆಗೆ ತಿರುಗಿ, ಭದ್ರತಾ ಪಡೆಗಳು ಹಾರಿಸಿದ ಗುಂಡಿಗೆ 8 ಮಂದಿ ಅಸುನೀಗಿ, ಹಲವರು ಗಾಯಗೊಂಡಿದ್ದಾರೆ.

Advertisement

ಭಾನುವಾರ 9 ರಾಜ್ಯಗಳಲ್ಲಿ ವಿಧಾನಸಭೆ ಹಾಗೂ ಲೋಕಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆದಿದ್ದು, ಕೆಲವೆಡೆ ಶಾಂತಿಯುತ ಮತದಾನ ನಡೆದರೆ, ಜಮ್ಮು-ಕಾಶ್ಮೀರ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಹಿಂಸಾಚಾರಗಳು ನಡೆದಿವೆ. 

ಮಧ್ಯಪ್ರದೇಶದ ಎರಡು ಕಡೆ ಕಾಂಗ್ರೆಸ್‌-ಬಿಜೆಪಿ ಕಾರ್ಯಕರ್ತರು ಹೊಯ್‌ಕೈ ನಡೆಸಿದ್ದು, ಭದ್ರತಾ ಸಿಬ್ಬಂದಿಯು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಉಳಿದ ರಾಜ್ಯಗಳಲ್ಲಿ ಮತದಾನ ಬಹುತೇಕ ಶಾಂತಿಯುತವಾಗಿತ್ತು.

ಅತಿ ಕಡಿಮೆ ಮತ, ಅತಿ ಹೆಚ್ಚು ಹಿಂಸೆ: ಶ್ರೀನಗರದಲ್ಲಿ ಶೇ.6.5 ಅಂದರೆ ದಾಖಲೆಯ ಅತಿ ಕಡಿಮೆ ಮತದಾನ ನಡೆದಿದೆ. ಇದು ಕಳೆದ 30 ವರ್ಷಗಳಲ್ಲಿ ನಡೆದ ಅತಿ ಕಡಿಮೆ ಹಕ್ಕು ಚಲಾವಣೆಯ ದಾಖಲೆ. ಆದರೆ, ಹಿಂಸಾಚಾರ ಮಾತ್ರ ಎಂದಿಗಿಂತ ಹೆಚ್ಚೇ ನಡೆದಿದ್ದು, ಬದ್ಗಾಮ್‌ನಲ್ಲಂತೂ ಸುಮಾರು 200 ಹಿಂಸಾ ಘಟನೆಗಳು ವರದಿಯಾಗಿವೆ. ಒಟ್ಟಾರೆ ಭದ್ರತಾ ಪಡೆಗಳ ಗುಂಡಿಗೆ 8 ಮಂದಿ ಸಾವಿಗೀಡಾಗಿದ್ದಾರೆ. ಬದ್ಗಾಮ್‌ನ ಶೇ.70ರಷ್ಟು ಮತಗಟ್ಟೆಗಳಲ್ಲಿ ಮತಗಟ್ಟೆ ಸಿಬ್ಬಂದಿ ಬಿಟ್ಟರೆ ಬೇರ್ಯಾರೂ ಆ ಕಡೆ ಸುಳಿಯಲೇ ಇಲ್ಲ ಎನ್ನಲಾಗಿದೆ. ದಲ್ವಾನ್‌ ಗ್ರಾಮದಲ್ಲಿ ಪ್ರತಿಭಟನಾಕಾರರು
ಮತಗಟ್ಟೆಯೊಳಗೆ ನುಗ್ಗಿ, ಇವಿಎಂಗಳನ್ನು ಹಾನಿ ಮಾಡಿದ್ದಾರೆ. ಬೀರ್ವಾ ಎಂಬಲ್ಲಿ ಮತಗಟ್ಟೆಯಾಗಿ ಬಳಸಲಾಗಿದ್ದ ಸರ್ಕಾರಿ ಶಾಲೆಗೆ ಹಾಗೂ ಬಸ್‌ಗಳಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ.

ಮತದಾನ ಬಹಿಷ್ಕರಿಸುವಂತೆ ಪ್ರತ್ಯೇಕವಾದಿಗಳು ಕರೆ ನೀಡಿದ್ದ ಹಿನ್ನೆಲೆಯಲ್ಲಿ ಶ್ರೀನಗರದಾದ್ಯಂತ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಶನಿವಾರ ರಾತ್ರಿಯೇ ಇಂಟರ್ನೆಟ್‌ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು. ಆದರೂ, ಹಿಂಸಾಚಾರವನ್ನು ತಡೆಯಲು ಸಾಧ್ಯವಾಗಲಿಲ್ಲ. ಇದೇ ವೇಳೆ, ಹಿಮಪಾತದಿಂದಾಗಿ ಶ್ರೀನಗರ-ಜಮ್ಮು ಹೆದ್ದಾರಿ ಬಂದ್‌ ಆಗಿದ್ದರಿಂದ, ಸುಮಾರು 5 ಸಾವಿರ ಚುನಾವಣಾ ಸಿಬ್ಬಂದಿಗೆ ಕರ್ತವ್ಯಕ್ಕೆ ಹಾಜರಾಗಲು ಆಗಲಿಲ್ಲ. ಪಿಡಿಪಿ ನಾಯಕ
ತಾರೀಕ್‌ ಹಮೀದ್‌ ರಾಜೀನಾಮೆಯಿಂದ ತೆರವಾದ ಶ್ರೀನಗರ ಕ್ಷೇತ್ರದಲ್ಲಿ ನ್ಯಾಷನಲ್‌ ಕಾನ್ಫರೆನ್ಸ್‌ ನಾಯಕ ಡಾ. ಫಾರೂಕ್‌ ಅಬ್ದುಲ್ಲಾ ಹಾಗೂ ಪಿಡಿಪಿ ನಾಯಕ ನಜೀರ್‌ ಖಾನ್‌ ನಡುವೆ ಪ್ರಬಲ ಪೈಪೋಟಿಯಿದೆ. 

Advertisement

ಈ ನಡುವೆ, 8 ಮಂದಿ ಪ್ರತಿಭಟನಾಕಾರರು ಗುಂಡೇಟಿಗೆ ಬಲಿಯಾದ ಘಟನೆ ಖಂಡಿಸಿ 2 ದಿನಗಳ ಕಾಲ ಕಾಶ್ಮೀರ ಬಂದ್‌ಗೆ ಪ್ರತ್ಯೇಕತಾವಾದಿಗಳು ಕರೆ ನೀಡಿದ್ದಾರೆ. ಮಧ್ಯಪ್ರದೇಶದಲ್ಲಿ ಫೈರಿಂಗ್‌: ಮಧ್ಯಪ್ರದೇಶದ ಅಟೇರ್‌ ಹಾಗೂ ಬಂಧಾವ್‌ಗಢ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ವೇಳೆ ಕಾಂಗ್ರೆಸ್‌ ಮತ್ತು ಬಿಜೆಪಿ ಕಾರ್ಯಕರ್ತರ ನಡುನೆ ಘರ್ಷಣೆ ನಡೆದಿದ್ದು, ಕನಿಷ್ಠ ಎರಡು ಪ್ರದೇಶಗಳಲ್ಲಿ ಗುಂಡಿನ ದಾಳಿ ನಡೆದಿವೆ. ಘರ್ಷಣೆಯಲ್ಲಿ ನಿರತರಾಗಿದ್ದ ಕಾರ್ಯಕರ್ತರನ್ನು ಚದುರಿಸಲು ಭದ್ರತಾ ಸಿಬ್ಬಂದಿಯು ಗಾಳಿಯಲ್ಲಿ ಗುಂಡು ಹಾರಿಸಿದರು. ಈ ಪೈಕಿ ಒಂದು ಗುಂಡು
ಅಟೇರ್‌ನ ಕಾಂಗ್ರೆಸ್‌ ಅಭ್ಯರ್ಥಿ ಹೇಮಂತ್‌ ಕಟಾರೆ ಅವರಿಗೆ ತಗುಲಿದೆ ಎಂದು ಪಕ್ಷ ಆರೋಪಿಸಿದೆ. ಇದೇ ವೇಳೆ, ಎರಡೂ ಕಡೆ ಮತಗಟ್ಟೆ ಆಕ್ರಮಣ ನಡೆದಿದೆ ಎಂದು ಕೆಲವರು ಆರೋಪಿಸಿದ್ದು, ಚುನಾವಣಾ ಅಧಿಕಾರಿಗಳು ಇದನ್ನು ಅಲ್ಲಗಳೆದಿದ್ದಾರೆ. 13ರಂದು ಫ‌ಲಿತಾಂಶ ಪ್ರಕಟವಾಗಲಿದೆ.

ರಜೌರಿಯಲ್ಲಿ ನೀರಸ ಮತದಾನ: ದೆಹಲಿಯ ರಜೌರಿ ಗಾರ್ಡನ್‌ ವಿಧಾನಸಭಾ ಕ್ಷೇತ್ರದ ಉಪಚುನಾಣೆ ಶಾಂತಿಯುತವಾಗಿ ನಡೆಯಿತಾದರೂ, ಅತ್ಯಂತ ಕಡಿಮೆ ಅಂದರೆ ಶೇ.35ರಷ್ಟು ಮತದಾನ ದಾಖಲಾಗಿದೆ. 

ಈ ಬಾರಿ ಎಲ್ಲ 166 ಮತಗಟ್ಟೆಗಳಲ್ಲೂ ವಿವಿಪ್ಯಾಟ್‌ (ಮತ ದೃಢೀಕರಣ ಯಂತ್ರ) ಅಳವಡಿಸಲಾಗಿತ್ತು. 30 ಕಡೆಗಳಲ್ಲಿ ಅದನ್ನು ಬದಲಿಸಬೇಕಾದ ಪರಿಸ್ಥಿತಿ ಎದುರಾಯಿತು ಎಂದು ಮುಖ್ಯ ಚುನಾವಣಾ ಅಧಿಕಾರಿ ಚಂದ್ರಭೂಷಣ್‌ ಕುಮಾರ್‌ ತಿಳಿಸಿದ್ದಾರೆ. ಈ ಉಪಚುನಾವಣೆಯು ಸಿಎಂ ಅರವಿಂದ ಕೇಜ್ರಿವಾಲ್‌ರ 2 ವರ್ಷದ ಆಡಳಿತದ ಜನಾಭಿಪ್ರಾಯ ಎಂದೇ ಪರಿಗಣಿಸಲಾಗಿದೆ.

ಲಿಟ್ಟಿಪಾರಾದಲ್ಲಿ ಶೇ.68 ಮತದಾನ: ಇದೇ ವೇಳೆ, ಜಾರ್ಖಂಜ್‌ನ ಲಿಟ್ಟಿಪಾರಾ ಅಸೆಂಬ್ಲಿ ಕ್ಷೇತ್ರದ ಉಪಚುನಾವಣೆಯಲ್ಲಿ ಶೇ.68ರಷ್ಟು ಮತದಾನ ದಾಖಲಾಗಿದೆ. ಜ.17ರಂದು ಜೆಎಂಎಂ ಶಾಸಕ ಅನಿಲ್‌ ಮುರ್ಮು ಅವರ ನಿಧನದಿಂದ ಈ ಕ್ಷೇತ್ರ ತೆರವಾಗಿತ್ತು. ಇನ್ನು ಅಸ್ಸಾಂನ ಧೇಮಾಜಿ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ 2 ಲಕ್ಷದಷ್ಟು ಮತದಾರರು ಹಕ್ಕು ಚಲಾಯಿಸಿದ್ದು, ಶೇ.56.35 ಮತದಾನ ದಾಖಲಾಗಿದೆ. ಏತನ್ಮಧ್ಯೆ, ಪಶ್ಚಿಮ ಬಂಗಾಳದ ಕಾಂತಿ ದಕ್ಷಿಣ್‌ ಕ್ಷೇತ್ರದ ಉಪಚುನಾವಣೆಯಲ್ಲಿ ಶೇ.79.7 ಮತದಾನವಾಗಿದೆ. ರಾಜಸ್ಥಾನದ ಧೋಲ್‌ಪುರ ಲೋಕಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಶೇ.69ರಷ್ಟು ಹಕ್ಕು ಚಲಾವಣೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next