Advertisement

ಮತದಾನ ಜಾಗೃತಿ ಜಾಥಾಕ್ಕೆ ಚಾಲನೆ

06:46 AM Mar 03, 2019 | Team Udayavani |

ಬೆಂಗಳೂರು: 18 ವರ್ಷ ಪೂರೈಸಿದವರು ಮತದಾನ ಮಾಡದೇ ಕೇವಲ ಹಕ್ಕುಗಳನ್ನು ಕೇಳುವುದು, ಸೌಲಭ್ಯಗಳನ್ನು ಪಡೆಯುವುದು ಸರಿಯಲ್ಲ ಎಂದು ರಾಜ್ಯ ಮುಖ್ಯಚುನಾವಣಾಧಿಕಾರಿ ಸಂಜೀವ್‌ ಕುಮಾರ್‌ ಹೇಳಿದರು.

Advertisement

ಲೋಕಸಭಾ ಚುನಾವಣೆ ಹಿನ್ನೆಲೆ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಹಾಗೂ ಮತದಾನದ ಮಹತ್ವ ಕುರಿತು ಕೇಂದ್ರ ಚುನಾವಣಾ ಆಯೋಗದ ಸಂಯುಕ್ತ ಆಶ್ರಯದಲ್ಲಿ ಶನಿವಾರ ನಗರದ ಡಾ.ಬಿ.ಆರ್‌.ಅಂಬೇಡ್ಕರ್‌ ಬೀದಿಯಲ್ಲಿರುವ ಸರ್ಕಾರಿ ಕಲಾ ಕಾಲೇಜು ಬಳಿ ನಡೆದ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.

ಮತದಾನವು ಭಾರತದ ಸಂವಿಧಾನ ಪ್ರತಿಯೊಬ್ಬರಿಗೂ ನೀಡಿರುವ ಹಕ್ಕಾಗಿದ್ದು, ಆ ಹಕ್ಕನ್ನು ಚಲಾಯಿಸುವುದು ಪ್ರತಿಯೊಬ್ಬರ ಕರ್ತವ್ಯ. ಇದನ್ನು ನಿಭಾಯಿಸದೇ ಇತರೆ ಹಕ್ಕು ಹಾಗೂ ಸೌಲಭ್ಯಗಳನ್ನು ಕೇಳುವುದು ಸರಿಯಲ್ಲ.

ಹೀಗಾಗಿ, ಪ್ರತಿಯೊಬ್ಬರು ವಿವೇಚನಾಶೀಲರಾಗಿ ರಾಷ್ಟ್ರದ ಅಭಿವೃದ್ಧಿಗೆ ಪೂರಕವಾಗುವಂತೆ ಮತ ಚಲಾಯಿಸಬೇಕು. ಅಲ್ಲದೇ ಯಾವುದೇ ಆಮೀಷಗಳಿಗೆ ಬಲಿಯಾಗದೇ ಸೂಕ್ತ ಅಭ್ಯರ್ಥಿಗೆ ಮತ ಹಾಕುವುದು ಎಲ್ಲರ ಜವಾಬ್ದಾರಿಯಾಗಿದ್ದು, ಈ ಮೂಲಕ ದೇಶದ ಭವಿಷ್ಯವನ್ನು ಉತ್ತಮವಾಗಿ ನಾವೇ ರೂಪಿಸಬೇಕು ಎಂದರು.

ಮತದಾನದಲ್ಲಿ ಯುವ ಸಮುದಾಯದ ಪಾತ್ರ ಹೆಚ್ಚಿದೆ. ಭವಿಷ್ಯಕ್ಕೆ ಅಗತ್ಯವಿರುವ ನಾಯಕರ ಆಯ್ಕೆಯನ್ನು ಈ ಮೂಲಕ ಮಾಡಿಕೊಳ್ಳಬೇಕು. ಇದಕ್ಕೂ ಮೊದಲು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ನೋಂದಣಿಯಾಗಿದೆಯೋ ಇಲ್ಲವೇ? ಎಂಬುದನ್ನು ತಿಳಿದುಕೊಳ್ಳಬೇಕು. ಒಂದು ವೇಳೆ ಪಟ್ಟಿಯಲ್ಲಿ ಹೆಸರು ಬಿಟ್ಟು ಹೋಗಿದ್ದರೆ ಕೂಡಲೇ ಸೇರ್ಪಡೆ ಮಾಡಿಸಬೇಕು.

Advertisement

ಇದರ ಜತೆಗೆ ತಮ್ಮ ಸುತ್ತಮುತ್ತಲಿನ ಜನ ತಮ್ಮ ಪವಿತ್ರ ಮತವನ್ನು ಮಾರಿಕೊಳ್ಳದೇ ಪ್ರಜ್ಞಾವಂತಿಕೆಯಿಂದ ಕಡ್ಡಾಯವಾಗಿ ಚಲಾಯಿಸಲು ಪ್ರೇರೇಪಣೆ ಮಾಡಬೇಕು ಎಂದರು. ಈ ವೇಳೆ ಕಾಲೇಜು ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಆನಂತರ ನಡೆದ ಜಾಗೃತಿ ಜಾಥಾ ಕೆ.ಆರ್‌.ವೃತ್ತ ಮೂಲಕ ವಿಧಾನಸೌಧದ ಬಳಿ ಮುಕ್ತಾಯವಾಯಿತು.

ಬಿಬಿಎಂಪಿ ಪೂರ್ವ ವಲಯದ ಜಂಟಿ ಆಯುಕ್ತ ರವೀಂದ್ರ, ಕಾಲೇಜು ಶಿಕ್ಷಣ ಇಲಾಖೆ ಆಯುಕ್ತೆ ಡಾ.ಎನ್‌.ಮಂಜುಳಾ, ಸರ್ಕಾರಿ ವಿಜ್ಞಾನ ಕಾಲೇಜು ಪ್ರಾಂಶುಪಾಲೆ ಜೆ.ಎಸ್‌.ವೀಣಾ, ಸರ್ಕಾರಿ ಕಲಾ ಕಾಲೇಜು ಪ್ರಾಂಶುಪಾಲ ಪ್ರೊ. ಎಸ್‌.ಜಿ.ಮೂರ್ತಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next