Advertisement

ಗಾಳಿಪಟ ಉತ್ಸವದ ಮೂಲಕ ಮತದಾನ ಜಾಗೃತಿ

09:52 PM Apr 16, 2019 | Lakshmi GovindaRaju |

ಚಿಕ್ಕಬಳ್ಳಾಪುರ: ಜಿಲ್ಲಾ ಕೇಂದ್ರದ ಸರ್‌ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ಜಿಲ್ಲಾ ಸ್ವೀಪ್‌ ಸಮಿತಿ ವತಿಯಿಂದ ಲೋಕಸಭಾ ಚುನಾವಣೆ ಪ್ರಯುಕ್ತ ಮತದಾನ ಜಾಗೃತಿಗಾಗಿ ಆಯೋಜಿಸಿದ್ದ ಗಾಳಿಪಟ ಉತ್ಸವ ಎಲ್ಲರ ಗಮನ ಸೆಳೆಯಿತು.

Advertisement

ಮಹಿಳೆಯರಿಗೆ ರಂಗೋಲಿ, ಯುವಕರಿಗೆ ಮ್ಯಾರಥಾನ್‌, ಕ್ರೀಡಾಪಟುಗಳಿಗೆ ವಾಲಿಬಾಲ್‌, ಹಾಸ್ಟಲ್‌ ವಿದ್ಯಾರ್ಥಿಗಳಿಂದ ಪೋಷಕರಿಗೆ ಅಂಚೆ ಪತ್ರ ಅಭಿಯಾನ, ಮಾನವ ಸರಪಳಿ, ಮೇಣದ ಬತ್ತಿ ಮೆರವಣಿಗೆಗಳ ಮೂಲಕ ಯುವ ಮತದಾರರ ಗಮನ ಸೆಳೆದಿದ್ದ ಜಿಲ್ಲಾ ಸ್ಪೀಪ್‌ ಸಮಿತಿ ಸರ್‌ಎಂವಿ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಗಾಳಿಪಟ ಉತ್ಸವಕ್ಕೂ ನಿರೀಕ್ಷೆಗೂ ಮೀರಿ ಸ್ಪಂದನೆ ಸಿಕ್ಕಿತ್ತು.

ಸಿಇಒ ಚಾಲನೆ: ಸರ್‌ಎಂವಿ ಕ್ರೀಡಾಂಗಣದಲ್ಲಿ ಮದ್ಯಾಹ್ನ ಆಯೋಜಿಸಿದ್ದ ಗಾಳಿಪಟ ಉತ್ಸವಕ್ಕೆ ಖುದ್ದು ಜಿಲ್ಲಾ ಸ್ಪೀಪ್‌ ಸಮಿತಿ ಅಧ್ಯಕ್ಷರಾದ ಜಿಪಂ ಸಿಇಒ ಗುರುದತ್ತ ಹೆಗಡೆ ಚಾಲನೆ ನೀಡಿದರು. ನಗರದ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಗಾಳಿಪಟವನ್ನು ಹಾರಿ ಬಿಡುವ ಮೂಲಕ ಎತ್ತರಕ್ಕೆ ಹಾರಿಸಲು ಪೈಪೋಟಿ ನಡೆಸಿದರು.

ಬಣ್ಣ ಬಣ್ಣದ ಗಾಳಿಪಟಗಳು ಗಾಳಿಯಲ್ಲಿ ತೇಲಾಡಿ ಹಾರಾಡಿದವು. ಕ್ರೀಡಾಂಗಣದಲ್ಲಿ ನೆರದಿದ್ದ ಗಾಳಿಪಟ ಪ್ರೇಮಿಗಳು ಆಗಸದಲ್ಲಿ ಹಾರಡುತ್ತಿದ್ದ ಗಾಳಿಪಟಗಳನ್ನು ನೋಡಿ ಕಣ್ತುಂಬಿಸಿಕೊಂಡರು. ನಗರ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕುಗಳಿಂದ ಯುವಕರು, ಕಾಲೇಜು ವಿದ್ಯಾರ್ಥಿಗಳು ಗಾಳಿಪಟ ಉತ್ಸವದಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದರು.

ಪ್ರತಿಜ್ಞಾ ವಿಧಿ ಬೋಧನೆ: ನೈತಿಕ ಹಾಗೂ ಕಡ್ಡಾಯ ಮತದಾನ ಮಾಡುವಂತೆ ಪ್ರತಿಜ್ಞಾ ವಿಧಿ ಬೋಧಿಸಿದ ಜಿಪಂ ಸಿಇಒ ಗುರುದತ್‌ ಹೆಗಡೆ, ಮತದಾರರು ಯಾವುದೇ ಆಸೆ ಆಮಿಷಗಳಿಗೆ ಒಳಗಾಗದೇ ನೈಜ್ಯವಾಗಿ ಮತದಾನ ಮಾಡಬೇಕು ಎಂದರು.

Advertisement

ತಾಪಂ ಕಾರ್ಯನಿರ್ವಹಣಾಧಿಕಾರಿ ಸಂಜೀವಪ್ಪ, ಜಿಲ್ಲಾ ಸ್ವೀಪ್‌ ಸಮಿತಿ ಸದಸ್ಯರಾದ ರವಿಕುಮಾರ್‌. ಮುನಿರಾಜು, ಸತೀಶ್‌ ಕುಮಾರ್‌, ಜಿಲ್ಲಾ ಯುವಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರುದ್ರಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಗಮನ ಸೆಳೆದ ಮುಖವೀಣೆ ನೀನಾದ: ಜಿಲ್ಲಾ ಸ್ಪೀಪ್‌ ಸಮಿತರಿ ಮತದಾನ ಜಾಗೃತಿಗಾಗಿ ಆಯೋಜಿಸಿದ್ದ ಗಾಳಿಪಟ ಉತ್ಸವ ನೋಡಲು ಒಂದಡೆ ರೋಮಾಂಚನವಾದರೆ ಮತ್ತೂಂದಡೆ ಸಂಗೀತ ಪ್ರಿಯರಿಗೆ ಜಿಲ್ಲೆಯ ಗುಡಿಬಂಡೆ ತಾಲೂಕಿನ ಖ್ಯಾತ ಮುಖವೀಣೆ ಗಾಯಕ ಆಂಜಿನಪ್ಪ ತನ್ನ ವೈಶಿಷ್ಟವಾದ ತನ್ನ ಮುಖವೀಣೆಯನ್ನು ನುಡಿಸುವ ಮೂಲಕ ಎಲ್ಲರು ತಲೆದೂಗುವಂತೆ ಮಾಡಿದರು. ಚುನಾವಣೆಯ ನೆಪದಲ್ಲಿ ಆದರೂ ಜಿಲ್ಲಾಡಳಿತ ಬಡ ಕಲಾವಿದನನ್ನು ಗುರುತಿಸಿದ್ದು ಮಾತ್ರ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು.

Advertisement

Udayavani is now on Telegram. Click here to join our channel and stay updated with the latest news.

Next