ಬೆಂಗಳೂರು: “ಬಿಗುಮಾನ ಬಿಡಿ; ಸ್ವಾಭಿಮಾನ ಪಡಿ’, “ಸಂಕೋಚ ಬಿಟ್ಟು; ಸಂಭ್ರಮ ಪಡಿ’, ಅಭಿಮಾನದಿಂದ ಮತಗಟ್ಟೆಗೆ ಬಂದು ಹಕ್ಕು ಚಲಾಯಿಸಿ, ಇದು ಲೈಂಗಿಕ ಅಲ್ಪಸಂಖ್ಯಾತರು ರಾಜ್ಯದ ವಿವಿಧೆಡೆ ಸುತ್ತಾಡಿ ತಮ್ಮ ಸಮುದಾಯಕ್ಕೆ ನೀಡುತ್ತಿರುವ ಮತ ಸಂದೇಶ.
ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಲೈಂಗಿಕ ಅಲ್ಪಸಂಖ್ಯಾತ ಸಮುದಾಯ (ತೃತೀಯ ಲಿಂಗಿ ಗಳು) ತಮ್ಮವರಲ್ಲದೇ ಬೇರೆ ಜನರಲ್ಲೂ ಓಟಿನ ಮಹತ್ವ ಮತ್ತು ಮೌಲ್ಯದ ಬಗ್ಗೆ ಜಾಗೃತಿ ಮೂಡಿಸುತ್ತಿದೆ. ಇದಕ್ಕಾಗಿ ರಾಜ್ಯದ ವಿವಿಧೆಡೆ ಸಕ್ರಿಯವಾಗಿರುವ ಲೈಂಗಿಕ ಅಲ್ಪಸಂಖ್ಯಾತರ ಸಂಘ-ಸಂಸ್ಥೆಗಳು ತಂಡಗಳನ್ನು ಕಟ್ಟಿಕೊಂಡು ಮತದಾರ ಜಾಗೃತಿ ಪ್ರವಾಸ ಕೈಗೊಳ್ಳುತ್ತಿವೆ. “ಒಂದೆಡೆ’ ಎಂಬ ಹೆಸರಿನ ಸಂಸ್ಥೆ ಈ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಿದೆ.
ಇದಕ್ಕೆ ಪೂರಕ ಎಂಬಂತೆ ಈ ಬಾರಿ ಚುನಾವಣಾ ಆಯೋಗ ಸಹ ಚುನಾವಣಾ ಪ್ರಕ್ರಿಯೆ ಮತ್ತು ಮತದಾನದಲ್ಲಿ ತೃತೀಯ ಲಿಂಗಿಗಳ ಸಕ್ರಿಯ ಪಾಲ್ಗೊಳ್ಳುವಿಕೆಗೆ ವಿಶೇಷ ಒತ್ತು ನೀಡಿದ್ದು, ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿ ಸೇರಿದಂತೆ ಚುನಾವಣಾ ಪ್ರಕ್ರಿಯೆಯ ಎಲ್ಲ ಹಂತಗಳಲ್ಲೂ ಈ ವರ್ಗದ ಬಗ್ಗೆ ಹೆಚ್ಚಿನ ಗಮನ ಕೊಟ್ಟಿದೆ. ಮತದಾರರ ಜಾಗೃತಿಗೆ ಬೇರೆ ಬೇರೆ ಕ್ಷೇತ್ರಗಳ ಸಾಧಕರನ್ನು ರಾಯಭಾರಿಯನ್ನಾಗಿನೇಮಿಸಿಕೊಂಡಿರುವ ಆಯೋಗ, ಲೈಂಗಿಕ ಅಲ್ಪಸಂಖ್ಯಾತರ ಮೂಲಕವೂ ಮತದಾರರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. ಇದಕ್ಕೆ ಲೈಂಗಿಕ ಅಲ್ಪಸಂಖ್ಯಾತರ ಸಂಘ-ಸಂಸ್ಥೆಗಳು ಕೈ ಜೋಡಿಸಿವೆ.
ಲೈಂಗಿಕ ಅಲ್ಪಸಂಖ್ಯಾತರು ಪ್ರತಿ ಹಂತದಲ್ಲಿ ನಿಂದನೆ ಅನುಭವಿಸುತ್ತಾರೆ. ಓಟು ಹಾಕಲು ಈ ಸಮುದಾಯ ಹಿಂದೇಟು ಹಾಕುತ್ತದೆ.
ಮತದಾನದ ದಿನ ಸಾಲಿನಲ್ಲಿ ನಾವು ನಿಂತರೆ, ಬೇರೆಯವರಿಗೆ ಕಸಿವಿಸಿ, ಆಗ ನಮ್ಮವರಿಗೂ ಮುಜುಗರ. ಆದರೆ, ಈ ಬಾರಿ ಹಾಗಾಗಲು ಬಿಡಲ್ಲ. ಎಲ್ಲ ಮತದಾರರನ್ನು ಮತಗಟ್ಟೆಗಳ ಸರತಿ ಸಾಲಿನಲ್ಲಿ ನಿಲ್ಲಿಸುತ್ತೇವೆ. ಆ ಮೂಲಕ ನಾವೂ ಸಮಾನ ಪ್ರಜೆಗಳು, ನಮಗೂ ಸಮಾನ ಹಕ್ಕುಗಳಿವೆ ಎಂಬ ಸಂದೇಶ ಸಾರುತ್ತೇವೆಂದು “ಒಂದೆಡೆ ಸಂಸ್ಥೆ’ಯ ಸಂಸ್ಥಾಪಕಿ ಅಕ್ಕೆ„ ಪದ್ಮಶಾಲಿ ಹೇಳುತ್ತಾರೆ.
4 ಸಾವಿರ ತೃತೀಯ ಲಿಂಗಿ ಮತದಾರರು: 2018ರ ಫೆಬ್ರವರಿಯಲ್ಲಿ ಪ್ರಕಟಗೊಂಡ ಅಂತಿಮ ಮತದಾರರ ಪಟ್ಟಿ ಪ್ರಕಾರ ರಾಜ್ಯದಲ್ಲಿ 4,552 ತೃತೀಯ ಲಿಂಗಿ ಮತದಾರರಿದ್ದಾರೆ. ಈ ಪೈಕಿ ಬೆಂಗಳೂರಿನ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ 149, ವಿಜಯನಗರದಲ್ಲಿ 136, ಕೆ.ಆರ್.ಪುರದಲ್ಲಿ 114, ಬೆಂಗಳೂರು ದಕ್ಷಿಣದಲ್ಲಿ 103, ಸಿ.ವಿ.ರಾಮನ್ ನಗರದಲ್ಲಿ 98, ದಾಸರಹಳ್ಳಿ 86, ಕಲಬುರಗಿ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ 98, ರಾಯಚೂರು ಕ್ಷೇತ್ರದಲ್ಲಿ 96ರಂತೆ ಅತಿ ಹೆಚ್ಚು ತೃತೀಯ ಲಿಂಗಿ ಮತದಾರರು ಇದ್ದಾರೆ. ಬೆಳಗಾವಿ ದಕ್ಷಿಣ, ವಿಜಯಪುರ ನಗರ, ಕಲಬುರಗಿ ದಕ್ಷಿಣ, ರಾಯಚೂರು ಗ್ರಾಮಾಂತರ, ಮಾನ್ವಿ, ರಾಜರಾಜೇಶ್ವರಿ ನಗರ, ಮಹಾಲಕ್ಷ್ಮಿ ಲೇಔಟ್, ಗೋವಿಂದರಾಜನಗರ, ಆನೇಕಲ್ ಕ್ಷೇತ್ರಗಳಲ್ಲಿ 50ರಿಂದ 80 ಮತದಾರರಿದ್ದಾರೆ. ಸವದತ್ತಿ, ಗಂಗಾವತಿ, ಕುಮಟಾ, ಭಟ್ಕಳ, ಶಿರಸಿ, ಹಾನಗಲ್, ಹರಿಹರ, ಕಾಪು, ಕಾರ್ಕಳ, ಗೌರಿಬಿದನೂರು, ಬೆಳ್ತಂಗಡಿ, ಪುತ್ತೂರು, ಹುಣಸೂರು ಕ್ಷೇತ್ರಗಳಲ್ಲಿ ತಲಾ ಒಬ್ಬರು ತೃತೀಯ ಲಿಂಗಿ ಮತದಾರರಿದ್ದಾರೆ.
ಕಳೆದ ಬಾರಿಯ ಓಟಿನ ಪ್ರಮಾಣ ಶೇಕಡಾ 2
2013ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಒಟ್ಟು ತೃತೀಯ ಲಿಂಗಿ ಮತದಾರರ ಸಂಖ್ಯೆ 2,100 ಇತ್ತು. ಅದರಲ್ಲಿ ಓಟು ಹಾಕಿದವರು 49 ಮಂದಿ ಮಾತ್ರ. ಅಂದರೆ, ಮತದಾನ ಪ್ರಮಾಣ ಶೇ.2ರಷ್ಟು ಆಗಿತ್ತು. ಕಳೆದ ಚುನಾವಣೆಯಲ್ಲಿ ಇಡೀ ರಾಜ್ಯದಲ್ಲಿ ಒಬ್ಬರು ಲೈಂಗಿಕ ಅಲ್ಪಸಂಖ್ಯಾತ ಅಭ್ಯರ್ಥಿ ಸ್ಪರ್ಧಿಸಿ ಠೇವಣಿ ಕಳೆದುಕೊಂಡಿದ್ದರು. ಈ ಬಾರಿ ಮತದಾರರ ಸಂಖ್ಯೆ ದುಪ್ಪಟ್ಟಾಗಿದೆ. ಅದಕ್ಕೆ ತಕ್ಕಂತೆ ಮತದಾನ ಪ್ರಮಾಣವೂ ಹೆಚ್ಚಾಗಬೇಕು ಅನ್ನುವುದು ಲೈಂಗಿಕ ಅಲ್ಪಸಂಖ್ಯಾತರ ಸಂಘ-ಸಂಸ್ಥೆಗಳ ಉದ್ದೇಶವಾಗಿದೆ.
ನಮ್ಮ ಈ ಜಾಗೃತಿ ಯಾವುದೇ ಪಕ್ಷ, ವ್ಯಕ್ತಿಯ ಪರವಲ್ಲ. ಲೈಂಗಿಕ ಅಲ್ಪಸಂಖ್ಯಾತರಲ್ಲಿ ಮತದಾನ ಜಾಗೃತಿ ಮೂಡಿಸಲು ಚುನಾವಣಾ ಆಯೋಗ ಎ.21ರಂದು ಬೆಂಗಳೂರಿನಲ್ಲಿ ರಾಜ್ಯಮಟ್ಟದ ಕಾರ್ಯಕ್ರಮ ಹಮ್ಮಿಕೊಂಡಿರುವುದು ಸ್ವಾಗತಾರ್ಹ.
– ಅಕ್ಕೈ ಪದ್ಮಶಾಲಿ
– ರಫೀಕ್ ಅಹ್ಮದ್