ನೆಲಮಂಗಲ: ಪಟ್ಟಣದ ಪುರಸಭೆ ಚುನಾವಣೆಗೆ ಕ್ಷಣಗಣನೆ ಪ್ರಾರಂಭವಾಗಿದ್ದು, ಜೂನ್ 1ರಂದು ಪಟ್ಟಣಿಗರು ಮತದಾನಕ್ಕೆ ಸಜ್ಜಾಗಿದ್ದಾರೆ. ಈ ನಡುವೆ ಮತದಾರರನ್ನು ಓಲೈಸುವಲ್ಲಿ ಉಮೇದುವಾರರು ಇನ್ನಿಲ್ಲದ ಕಸರತ್ತುಗಳನ್ನು ನಡೆಸುತ್ತಿರುವುದು ಕುತೂಹಲ ಕೆರಳಿಸಿದೆ.
31ಮತಗಟ್ಟೆ ಸ್ಥಾಪನೆ: 23ವಾರ್ಡ್ ಮತಕ್ಷೇತ್ರಗಳನ್ನು ಹೊಂದಿರುವ ಪುರಸಭೆ ವ್ಯಾಪ್ತಿಯಲ್ಲಿ ಮತದಾನ ಪ್ರಕ್ರಿಯೆ ನಡೆಸಲು 23ವಾರ್ಡ್‌ಗಳಲ್ಲಿ 31ಮತಗಟ್ಟೆಗಳ ಮೂಲಕ ಮತದಾನಕ್ಕೆ ಅವಕಾಶ ಕಲ್ಪಿಸಿಕೊಡಲಾಗಿದೆ.
6ಅತೀ ಸೂಕ್ಷ್ಮ ಮತಗಟ್ಟೆ: ಪುರಸಭೆ ವ್ಯಾಪ್ತಿಯಲ್ಲಿ ಒಟ್ಟಾರೆ 11ಸೂಕ್ಷ್ಮ ಮತಗಟ್ಟೆಗಳಿದ್ದು, ಆ ಪೈಕಿ 6ಅತೀ ಸೂಕ್ಷ್ಮ ಮತಗಟ್ಟೆಗಳು ಹಾಗೂ 6 ಸಾಮಾನ್ಯ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಮತದಾನದ ವೇಳೆ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಎಚ್ಚರಿಕೆಯನ್ನು ವಹಿಸಲಾಗಿದ್ದು, ಸೂಕ್ತ ರೀತಿಯಲ್ಲಿ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ತಹಶೀಲ್ದಾರ್ ಕೆ.ಎನ್.ರಾಜಶೇಖರ್ ತಿಳಿಸಿದ್ದಾರೆ.
28,904 ಮತದಾರರು: 23ವಾರ್ಡ್‌ಗಳನ್ನು ಹೊಂದಿರುವ ಪುರಸಭೆ ವ್ಯಾಪ್ತಿಯಲ್ಲಿ 2011ರ ಜನಗಣತಿಯಂತೆ 37,232 ಜನಸಂಖ್ಯೆಯಿದ್ದು, 14,427ಮಂದಿ ಮಹಿಳಾ ಮತದಾರರು ಹಾಗೂ 14,477 ಪುರುಷ ಮತದಾರರು ಸೇರಿ ಒಟ್ಟು 28,904 ಮತದಾರರು ತಮ್ಮ ಮತದಾನದ ಹಕ್ಕನ್ನು ಚಲಾಯಿಸಲಿದ್ದಾರೆ.
ಅಭ್ಯರ್ಥಿಗಳು: ಪುರಸಭೆ 23 ವಾರ್ಡ್‌ಗಳಲ್ಲಿ 22 ಮಂದಿ ಕಾಂಗ್ರೆಸ್ ಅಭ್ಯರ್ಥಿಗಳು, 21ವಾರ್ಡ್‌ಗಳಲ್ಲಿ ಬಿಜೆಪಿ, 22ವಾರ್ಡ್‌ಗಳಲ್ಲಿ ಜೆಡಿಎಸ್ , 1 ಬಿಎಸ್‌ಪಿ, 21ಪಕ್ಷೇತರರು ಕಂಣದಲ್ಲಿದ್ದು, ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ವಾರ್ಡ್ 2ರಲ್ಲಿ ಜೆಡಿಎಸ್ ಅಭ್ಯರ್ಥಿ ರಾಜಮ್ಮ ಪಿಳ್ಳಪ್ಪ ಹೊರತುಪಡಿಸಿ ರಾಷ್ಟ್ರೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗದಂತಹ ಪರಿಸ್ಥಿತಿಗೆ ತಲುಪಿದ್ದ ಕಾರಣಕ್ಕೆ ಜೆಡಿಎಸ್ ಈಗಾಗಲೆ ಅವಿರೋಧವಾಗಿ ತಮ್ಮ ಖಾತೆಯನ್ನು ತೆರೆದಿದೆ.
ಈಗಾಗಲೇ, ಜೆಡಿಎಸ್ ಪುರಸಭೆಯನ್ನು ಮತ್ತೂಮ್ಮೆ ತನ್ನ ವಶಕ್ಕೆ ಪಡೆದುಕೊಳ್ಳುವ ಕಾತುರದಲ್ಲಿದೆ ಎಂಬ ಮಾತುಗಳು ಜನನಿಬಿಡ ಪ್ರದೇಶದಲ್ಲಿ ಕೇಳಿಬರುತ್ತಿವೆ. ಆದರೂ, ಅನ್ಯ ಪಕ್ಷಗಳ ಅಭ್ಯರ್ಥಿಗಳು ಮತ್ತು ಪಕ್ಷೇತರರು ತಾವು ಯಾರಿಗೂ ಕಮ್ಮಿಯಿಲ್ಲ ಎಂಬಂತೆ ಭರದ ಸಿದ್ಧತೆಯಲ್ಲಿ ತೊಡಗಿದ್ದಾರೆ.
ಸಿಬ್ಬಂದಿ: ಮತದಾನ ಪ್ರಕ್ರಿಯೆಯಲ್ಲಿ 34ಮಂದಿ ಅಧ್ಯಕ್ಷಾಧಿಕಾರಿಗಳು, 34 ಮಂದಿ ಮೊದಲನೇ ಮತಗಟ್ಟೆ ಅಧಿಕಾರಿಗಳು, 68 ಮಂದಿ ಎರಡನೇ ಮತಗಟ್ಟೆ ಅಧಿಕಾರಿಗಳು ಸೇರಿ ಒಟ್ಟಾರೆ 136 ಮಂದಿ ಚುನಾವಣಾ ಕರ್ತವ್ಯ ನಿರ್ವಹಿಸಲಿದ್ದಾರೆ.
ಬಿಗಿ ಭದ್ರತೆ: ಚುನಾವಣೆ ವೇಳೆ ಯಾವುದೇ ರೀತಿಯ ಅಹಿತಕರ ಘಟನೆಗಳು ಸಂಭವಿಸದಂತೆ ಎಚ್ಚರಿಕೆ ವಹಿಸುವ ಸಲುವಾಗಿ ಒಬ್ಬ ಡಿವೈಎಸ್‌ಪಿ, ಒಬ್ಬ ವೃತ್ತ ನಿರೀಕ್ಷಕರು, 5 ಮಂದಿ ಸಬ್ ಇನ್ಸ್‌ಪೆಕ್ಟರ್‌ಗಳು ಸೇರಿ ಸುಮಾರು 50ಕ್ಕೂ ಹೆಚ್ಚು ಮಂದಿ ಪೊಲೀಸ್ ಸಿಬ್ಬಂದಿ ಚುನಾವಣೆಯ ರಕ್ಷಣಾ ಹೊಣೆಗಾರಿಕೆಯನ್ನು ಹೊತ್ತಿದ್ದಾರೆ.