ದಾವಣಗೆರೆ: ಮುಂದಿನ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಮತದಾರರು ಅಗತ್ಯ ಮಾಹಿತಿ ಪಡೆಯಲು, ಪ್ರತಿಕ್ರಿಯೆ, ಸಲಹೆ ಹಾಗೂ ದೂರು ಸಲ್ಲಿಸಲು ಅನುಕೂಲ ಆಗುವಂತೆ ಮತದಾರರ ಸಹಾಯವಾಣಿ 1950ಗೆ ಶುಕ್ರವಾರ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಾ| ಬಗಾದಿ ಗೌತಮ್ ಚಾಲನೆ ನೀಡಿದರು.
ಮತದಾರರ ಸಹಾಯವಾಣಿ 1950 ಟೋಲ್‌ಫ್ರೀ ಆಗಿದ್ದು ಮತದಾರರು ಚುನಾವಣೆಗೆ ಸಂಬಂಧಿಸಿದ ಸಮಗ್ರ ಮಾಹಿತಿ ಪಡೆಯಬಹುದಾಗಿದೆ. ಸದ್ಯಕ್ಕೆ ಬೆಳಗ್ಗೆ 9 ರಿಂದ ಸಂಜೆ 6ರ ವರೆಗೆ ಕಾರ್ಯ ನಿರ್ವಹಿಸಲಿರುವ ಸಹಾಯವಾಣಿಯು ಲೋಕಸಭಾ ಚುನಾವಣೆ ಘೋಷಣೆಯ ನಂತೆ 24×7 ಕಾರ್ಯ ನಿರ್ವಹಿಸಲಿದೆ.
ಸಹಾಯವಾಣಿಗೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾಧಿಕಾರಿ ಡಾ| ಬಗಾದಿ ಗೌತಮ್, ಚುನಾವಣಾ ಆಯೋಗದ ಆದೇಶದನ್ವಯ ಉಚಿತ (ಟೋಲ್‌ಫ್ರೀ) ಸಹಾಯವಾಣಿ ತೆರೆಯಲಾಗಿದೆ. ಸಹಾಯವಾಣಿ ಸಂಖ್ಯೆ 1950 ಆಗಿರುತ್ತದೆ. ಜಿಲ್ಲೆ ಅಲ್ಲದೆ ಹೊರ ಜಿಲ್ಲೆಯ ನಾಗರಿಕರು ಸಹ ಚುನಾವಣೆಗೆ ಸಂಬಂಧಿಸಿದಂತೆ ಮಾಹಿತಿ ಪಡೆಯಬಹುದು ಎಂದು ತಿಳಿಸಿದರು.
ಮತದಾರರ ಸಹಾಯವಾಣಿ 1950 ರಲ್ಲಿ ಮತದಾರರ ಹೆಸರು ನೋಂದಣಿ, ಅರ್ಜಿಗಳ ಪರಿಶೀಲನೆ, ಮತಗಟ್ಟೆ ಮತ್ತು ಮತಗಟ್ಟೆ ಅಧಿಕಾರಿಗಳ ಬಗ್ಗೆ, ಚುನಾವಣೆ ಕುರಿತು ಮಾಹಿತಿ ಪಡೆಯುವ ಜೊತೆಗೆ ಚುನಾವಣೆಗೆ ಸಂಬಂಧಿಸಿದಂತಹ ದೂರುಗಳಿದ್ದಲ್ಲಿ ಸಲ್ಲಿಸಬಹುದು. ವಿದ್ಯುನ್ಮಾನ ಮತಯಂತ್ರದ ಬಗ್ಗೆಯೂ ತಿಳಿಯಬಹುದು ಎಂದು ತಿಳಿಸಿದರು.
ಬಿಎಸ್ಸೆನ್ನೆಲ್‌ನಿಂದ ಪಿಆರ್‌ಐ ಗೇಟ್ವೇ ದೊರೆತಿದ್ದು, ಯಾವುದೇ ಅಡಚಣೆ ಇಲ್ಲದೇ ಸಾರ್ವಜನಿಕರು ಸಹಾಯವಾಣಿಗೆ ಕರೆ ಮಾಡಬಹುದಾಗಿದೆ. ಸದ್ಯಕ್ಕೆ ನಾಲ್ಕು ಸಿಬ್ಬಂದಿಯನ್ನು ಸಹಾಯವಾಣಿ ಕೇಂದ್ರಕ್ಕೆ ನಿಯೋಜಿಸಲಾಗಿದೆ. ಚುನಾವಣೆ ಘೋಷಣೆಯಾದ ನಂತರ ಹೆಚ್ಚಿನ ಸಿಬ್ಬಂದಿಗಳ ಅವಶ್ಯಕತೆ ಇದ್ದರೆ ನಿಯೋಜಿಸಲಾಗುವುದು. ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಶಿವಾನಂದ ಕುಂಬಾರ್ ಸಹಾಯವಾಣಿಗೆ ನೋಡಲ್ ಅಧಿಕಾರಿಯಾಗಿದ್ದಾರೆ ಎಂದು ತಿಳಿಸಿದರು. ಚುನಾವಣಾ ತಹಶೀಲ್ದಾರ್ ಪ್ರಸಾದ್ ಇತರರು ಇದ್ದರು.