Advertisement

ತಪ್ಪದೇ ಮತದಾನ ಮಾಡಿ; ಪ್ರಜಾಪ್ರಭುತ್ವ ಹಬ್ಬವನ್ನು ಸಂಭ್ರಮಿಸಿ

10:10 PM May 09, 2023 | Team Udayavani |

ಅಂತೂ ಇಡೀ ರಾಜ್ಯವೇ ಕಾಯುತ್ತಿದ್ದ ಪ್ರಜಾಪ್ರಭುತ್ವ ಹಬ್ಬ, “ಮತದಾನ ದಿನ’ ಬಂದೇ ಬಿಟ್ಟಿದೆ. ಇದು ನಿಮ್ಮ ಕ್ಷೇತ್ರದ ಪ್ರತಿನಿಧಿ, ನಿಮ್ಮ ಸರಕಾರವನ್ನು ಆರಿಸುವ ದಿನ. ಒಂದಿಲ್ಲೊಂದು ಕಾರಣ ಹೇಳಿ ಮತದಾನವನ್ನು ತಪ್ಪಿಸಿಕೊಳ್ಳಬೇಡಿ. ಮತಗಟ್ಟೆಗೆ ಹೋಗಿ, ಮತಹಾಕಿ ಬನ್ನಿ. ಈ ಮೂಲಕ ಪ್ರಜಾಪ್ರಭುತ್ವ ಹಬ್ಬವನ್ನು ಸಂಭ್ರಮಿಸಿ…

Advertisement

ಬೆಂಗಳೂರು: ಪ್ರಜಾಪ್ರಭುತ್ವದ ಬಹುದೊಡ್ಡ ಸಂಭ್ರಮ “ಮತದಾನ’ಕ್ಕೆ ಕ್ಷಣಗಣನೆ ಆರಂಭವಾಗಿದೆ. ರಾಜ್ಯದ 224 ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆಗಾಗಿ ಬುಧವಾರ ರಾಜ್ಯದ ಐದೂವರೆ ಕೋಟಿ ಮತದಾರರು ತಮ್ಮ ಹಕ್ಕನ್ನು ಚಲಾಯಿಸಲಿದ್ದಾರೆ. ಈ ಮೂಲಕ 16ನೇ ವಿಧಾನಸಭೆ ಅಸ್ತಿತ್ವಕ್ಕೆ ಬರಲು ತಮ್ಮ ಮುದ್ರೆ ಒತ್ತಲಿದ್ದಾರೆ.

ಮತದಾನ ಬೆಳಗ್ಗೆ 7 ಗಂಟೆಗೆ ಆರಂಭವಾಗಿ ಸಂಜೆ 6ರ ವರೆಗೆ ನಡೆಯಲಿದೆ. ಕೇಂದ್ರ ಚುನಾವಣ ಆಯೋಗ ರಾಜ್ಯಾದ್ಯಂತ ಎಲ್ಲ ಸಿದ್ಧತೆ ಪೂರ್ಣಗೊಳಿಸಿದೆ. ಇನ್ನೇನಿದ್ದರೂ ಮತದಾರರಾದ ನಾವು ಮತಗಟ್ಟೆಗೆ ಹೋಗಿ ಮತಚಲಾಯಿಸುವುದು ಅಷ್ಟೇ ಉಳಿದಿರುವ ಕೆಲಸ.

ಮತದಾರನ ಮನ ಗೆಲ್ಲಲು ಕಳೆದ ಒಂದೂವರೆ ತಿಂಗಳಿನಿಂದ ರಾಜಕೀಯ ಪಕ್ಷಗಳು ನಡೆಸಿದ ಕಸರತ್ತುಗಳಿಗೆ ಬುಧವಾರದ ಮತದಾನದ ಮೂಲಕ ತೆರೆ ಬೀಳಲಿದ್ದು, ಎಲ್ಲರ ಚಿತ್ತ ಮತ ಎಣಿಕೆ ದಿನವಾದ ಮೇ 13ರತ್ತ ನೆಡಲಿದೆ.

ಘಟಾನುಘಟಿಗಳ ಪ್ರಚಾರ
ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಕಾಂಗ್ರೆಸ್‌ ನಾಯಕರಾದ ರಾಹುಲ್‌ ಗಾಂಧಿ, ಪ್ರಿಯಾಂಕಾ ವಾದ್ರಾ ವಾರಗಟ್ಟಲೆ ರಾಜ್ಯದಲ್ಲಿ ಠಿಕಾಣಿ ಹೂಡಿ ಮತ ಶಿಕಾರಿ ನಡೆಸಿದರು. ಇದರ ಜತೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ, ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ, ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಕಾಲಿಗೆ ಚಕ್ರ ಕಟ್ಟಿಕೊಂಡು ತಮ್ಮ ಪಕ್ಷದ ಅಭ್ಯರ್ಥಿಗಳ ಪರ ರಾಜ್ಯವ್ಯಾಪಿ ಪ್ರಚಾರ ನಡೆಸಿದ್ದರು. ಇವರ ಪ್ರಯತ್ನಗಳು ಮತ್ತು ಅಭ್ಯರ್ಥಿಗಳ ಭವಿಷ್ಯ ಬರೆಯುವ ಸರತಿ ಈಗ ಮತದಾರನ ಪಾಲಿಗೆ ಬಂದಿದೆ.

Advertisement

ಕರ್ನಾಟಕದ 2023ರ ವಿಧಾನಸಭೆ ಚುನಾವಣೆಗೆ ಮಾ. 29ರಂದು ದಿನಾಂಕ ಘೋಷಣೆ ಆಗಿ, ಎ. 13ರಂದು ಅಧಿಸೂಚನೆ ಹೊರಬಿದ್ದಿತ್ತು. ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮುಗಿದು ಎ. 25 ಕಣ ಚಿತ್ರಣ ಸ್ಪಷ್ಟಗೊಂಡಿತು. ಅದರಂತೆ 2,615 ಅಭ್ಯರ್ಥಿ ಅಖಾಡದಲ್ಲಿದ್ದು, 5.31 ಕೋಟಿ ಮತದಾರರು ಇವರ ಭವಿಷ್ಯ ಬರೆಯಲಿದ್ದಾರೆ. ರಾಜ್ಯದ 58,545 ಮತಗಟ್ಟೆಗಳಲ್ಲಿ ಬುಧವಾರ (ಎ. 10) ಮತದಾನ ನಡೆಯಲಿದೆ. ಈ ಬಾರಿ ಮತದಾರರ ಎಡಗೈ ತೋರು ಬೆರಳಿಗೆ ಶಾಯಿ ಹಚ್ಚಲಾಗುತ್ತದೆ.

ಅತೀ ಹೆಚ್ಚು ಪಕ್ಷಾಂತರ ಮತ್ತು ಬಂಡಾಯ ಕೂಡ ಈ ಬಾರಿ ನಡೆದಿದ್ದು, ಪಕ್ಷಗಳು ಬಂಡುಕೋರರ ವಿರುದ್ಧ ಯಾವ ಪಕ್ಷವೂ ಕ್ರಮ ಕೈಗೊಳ್ಳದೆ “ರಕ್ಷಣಾತ್ಮಕ’ ನಡೆ ಅನುಸರಿಸಿವೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪರ್ಧಿಸಿರುವ ಶಿಗ್ಗಾವಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪರ್ಧಿಸಿರುವ ವರುಣಾ, ಡಿ.ಕೆ. ಶಿವಕುಮಾರ್‌ ಸ್ಪರ್ಧಿಸಿರುವ ಕನಕಪುರ, ಮಾಜಿ ಮುಖ್ಯಮಂತ್ರಿ ಜಗದೀಶ್‌ ಸ್ಪರ್ಧಿಸಿರುವ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್‌, ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಸ್ಪರ್ಧಿಸಿರುವ ಚನ್ನಪಟ್ಟಣ, ಮಾಜಿ ಡಿಸಿಎಂ ಲಕ್ಷ್ಮಣ ಸವದಿಯ ಅಥಣಿ, ಆಯನೂರು ಮಂಜುನಾಥ ಸ್ಪರ್ಧಿಸಿರುವ ಶಿವಮೊಗ್ಗ ಕ್ಷೇತ್ರ ರಾಜ್ಯದ ಗಮನ ಸೆಳೆದಿವೆ.

ಮತದಾನಕ್ಕೆ ಪರ್ಯಾಯ ದಾಖಲೆಗಳು
ಮತದಾರರ ಬಳಿ ಎಪಿಕ್‌ ಕಾರ್ಡ್‌ (ಮತದಾರರ ಗುರುತಿನ ಚೀಟಿ) ಇಲ್ಲದಿದ್ದರೆ, ಚುನಾವಣ ಆಯೋಗ ನಿಗದಿಪಡಿಸಿರುವ 12 ಪರ್ಯಾಯ ದಾಖಲೆಗಳಾದ ಆಧಾರ್‌ ಕಾರ್ಡ್‌, ನರೇಗಾ ಜಾಬ್‌ ಕಾರ್ಡ್‌, ಬ್ಯಾಂಕ್‌-ಪೋಸ್ಟ್‌ ಆಫೀಸ್‌ ಪಾಸ್‌ ಬುಕ್‌, ಕಾರ್ಮಿಕ ಇಲಾಖೆಯ ಆರೋಗ್ಯ ವಿಮಾ ಕಾರ್ಡ್‌, ಡ್ರೈವಿಂಗ್‌ ಲೈಸನ್ಸ್‌, ಪ್ಯಾನ್‌ ಕಾರ್ಡ್‌, ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಸ್ಮಾರ್ಟ್‌ ಕಾರ್ಡ್‌, ಇಂಡಿಯನ್‌ ಪಾಸ್‌ಪೋರ್ಟ್‌, ಪಿಂಚಣಿ ದಾಖಲೆ, ಸರಕಾರಿ ನೌಕರರ ಗುರುತಿನ ಚೀಟಿ, ಶಾಸಕರು, ಸಂಸದರಿಗೆ ಒದಗಿಸಲಾಗುವ ಗುರುತಿನ ಚೀಟಿ ಇತ್ಯಾದಿ ಹಾಜರುಪಡಿಸಿ ಮತ ಹಾಕಬಹುದು. ಆದರೆ ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೆ ಇದು ಅನ್ವಯ ಆಗುವುದಿಲ್ಲ.

ಒಟ್ಟು ಮತಗಟ್ಟೆಗಳು: 58,454

ಚುನಾವಣ ಸಿಬಂದಿ: 4 ಲಕ್ಷ

ಸೂಕ್ಷ್ಮ ಮತಗಟ್ಟೆಗಳು: 11 ಸಾವಿರ +

ಸಖಿ ಮತಗಟ್ಟೆ-996

ದಿವ್ಯಾಂಗ ಮತಗಟ್ಟೆ: 239

ಬುಡುಕಟ್ಟು ಮತಗಟ್ಟೆಗಳು:40

ಯುವಕರು ನಿರ್ವಹಿಸುವ ಮತಗಟ್ಟೆ: 286

ಇವಿಎಂ ಬಳಕೆ

ಬ್ಯಾಲೆಟ್‌ ಯೂನಿಟ್‌-75,603

ಕಂಟ್ರೋಲ್‌ ಯೂನಿಟ್‌-70,300

ವಿವಿಪ್ಯಾಟ್‌-76,202

ಮತ ಎಣಿಕೆ ಕೇಂದ್ರಗಳು: 38

ಒಟ್ಟು  ಇವಿಎಂ

ಬ್ಯಾಲೆಟ್‌ ಯೂನಿಟ್‌-94,841

ಕಂಟ್ರೋಲ್‌ ಯೂನಿಟ್‌-82,580

ವಿವಿಪ್ಯಾಟ್‌-84,145

ಭದ್ರತ ಸಿಬಂದಿ: 1.43 ಲಕ್ಷ

Advertisement

Udayavani is now on Telegram. Click here to join our channel and stay updated with the latest news.

Next