ವಾಡಿ: ಪಟ್ಟಣದ ಪುರಸಭೆ ಚುನಾವಣೆಗಾಗಿ ಏ.7ರಂದು ಬೆಳಗ್ಗೆ 7:00ರಿಂದ ಸಂಜೆ 5:00ರ ವರೆಗೆ ಒಟ್ಟು 23 ವಾರ್ಡ್‌ಗಳಿಗೆ ಮತದಾನ ನಡೆಯಲಿದೆ. ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಡಳಿತ, ಸಕಲ ಸಿದ್ಧತೆ ಮಾಡಿಕೊಂಡಿದೆ.
ಏ. 9ರಂದು ತಾಲೂಕು ಕೇಂದ್ರ ಚಿತ್ತಾಪುರದಲ್ಲಿ ಮತ ಏಣಿಕೆ ಕಾರ್ಯ ನಡೆಯಲಿದೆ. ಈ ಕುರಿತು ಸಿದ್ಧತೆ ಪರಿಶೀಲಿಸಲು ಗುರುವಾರ ಪಟ್ಟಣಕ್ಕೆ ಭೇಟಿ ನೀಡಿದ ಜಿಪಂ ಸಿಇಒ ಹೆಪ್ಸಿಬಾ ರಾಣಿ, ವಿವಿಧ ಬಡಾವಣೆಗಳಲ್ಲಿ ಸ್ಥಾಪಿಸಲಾಗಿದ್ದ ಒಟ್ಟು 33 ಮತದಾನ ಕೇಂದ್ರಗಳ ಸ್ಥಿತಿಗತಿ ವೀಕ್ಷಿಸಿದರು.
ಮತದಾನ ಮಾಡಲು ಬರುವ ವಯಸ್ಕರರು, ವೃದ್ಧರು, ಅಂಗವಿಕಲರು ಹಾಗೂ ಅನಾರೋಗ್ಯವಂತರಿಗೆ ತೊಂದರೆಯಗದಂತೆ ನೋಡಿಕೊಳ್ಳಬೇಕು. ಮತದಾನ ಕೇಂದ್ರಗಳಲ್ಲಿ ಯಾವುದೇ ಕೊರತೆಗಳಿರದಂತೆ ಎಚ್ಚರ ವಹಿಸುವಂತೆ ಚುನಾವಣಾಧಿಧಿಕಾರಿಗಳಿಗೆ ಆದೇಶ ನೀಡಿದರು.
ಸಾರ್ವಜನಿಕ ಸ್ಥಳದಲ್ಲಿ ಕಂಡು ಬಂದ ವಿವಿಧ ಕಾರ್ಯಕ್ರಮಗಳ ಬಿತ್ತಿಪತ್ರ ತೆರವುಗೊಳಿಸುವಂತೆ ಪುರಸಭೆ ಮುಖ್ಯಾಧಿಧಿಕಾರಿ ಶಂಕರ ಕಾಳೆ ಅವರಿಗೆ ಸೂಚಿಸಿದರು. ಸಹಾಯಕ ಆಯುಕ್ತ ಭೀಮಾಶಂಕರ ತೆಗ್ಗಳ್ಳಿ, ಚುನಾವಣಾಧಿಕಾರಿಗಳಾದ ಶಿವಶರಣಪ್ಪ ಬನ್ನಿಕಟ್ಟಿ, ಲಕ್ಷಣ ಶೃಂಗೇರಿ, ಪುರಸಭೆ ಮುಖ್ಯಾಧಿಧಿಕಾರಿ ಶಂಕರ ಡಿ. ಕಾಳೆ, ನೋಡಲ್ ಅಭಿಯಂತರ ಮನೋಜಕುಮಾರ ಹಿರೋಳಿ, ಈಶ್ವರ ಅಂಬೇಕರ ಮತಗಟ್ಟೆ ಪರಿಶೀಲನೆ ವೇಳೆ ಇದ್ದರು.
ಭರದ ಸಿದ್ಧತೆ: ಮತಗಟ್ಟೆಗಳ ವ್ಯಾಪ್ತಿಯ ಸ್ಥಳಗಳಲ್ಲಿ ಸಾರ್ವಜನಿಕ ಸಂಚಾರಕ್ಕೆ ನಿಷೇಧ ಹೇರಲಾಗಿದ್ದು, ಎಲ್ಲ ಮತಗಟ್ಟೆ ಕೇಂದ್ರಗಳಿಗೆ ಪೊಲೀಸ್ ಬಿಗಿ ಬಂದೋಬಸ್ತ್ ಒದಗಿಸಲಾಗಿದೆ. ಮತದಾನ ಪ್ರಕ್ರಿಯೆ ಸುಗಮಗೊಳ್ಳಲು ಪ್ರತಿ ಕೇಂದ್ರಕ್ಕೆ ಐವರು ಶಿಕ್ಷಕ ಸಿಬ್ಬಂದಿಗಳನ್ನು ನೇಮಿಸಲಾಗಿದೆ.
ಡಿವೈಎಸ್‌ಪಿ ಮಹೇಶ ಮೇಘಣ್ಣವರ ಹಾಗೂ ಸಿಪಿಐ ಶಂಕರಗೌಡ ಪಾಟೀಲ ಅವರ ಮಾರ್ಗದರ್ಶನದಲ್ಲಿ ಪಿಎಸ್‌ಐ ಸಂತೋಷ ರಾಥೋಡ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದಾರೆ. ಮತದಾನ ಪ್ರಕ್ರಿಯೆಗೆ ಅಡೆತಡೆಯಾಗದಂತೆ ವಿವಿಧ ಠಾಣೆಗಳ ಪಿಎಸ್‌ಐ, ಎಎಸ್‌ಐ ಹಾಗೂ ಪೊಲೀಸ್ ಸಿಬ್ಬಂದಿಗಳನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ನೀತಿಸಂಹಿತೆ ಹಿನ್ನೆಲೆಯಲ್ಲಿ ವಿವಿಧ ಪಕ್ಷಗಳ ಕಟೌಟ್ ಮತ್ತು ಬ್ಯಾನರ್‌ಗಳನ್ನು ತೆರವುಗೊಳಿಸಿ ಚುನಾವಣಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗಿದೆ.