Advertisement

ಯುವಜನ ಆಯೋಗ ರಚಿಸಿದವರಿಗೆ ಓಟು!

12:37 AM Apr 04, 2019 | Team Udayavani |

ಬೆಂಗಳೂರು: ಯುವಕರ ಸಮಸ್ಯೆಗಳಿಗೆ ಸ್ಪಂದಿಸುವ ಮತ್ತು ಅವರ ಆಶೋತ್ತರಗಳ ಪರ ಕೆಲಸ ಮಾಡುವ “ಯುವ ಆಯೋಗ’ ರಚನೆಗಾಗಿ ಯುವಕರು ಹಲವು ತಿಂಗಳಿಂದ ಸಮ್ಮೇಳನ ನಡೆಸುವ ಮೂಲಕ ಸಕ್ರಿಯರಾಗಿದ್ದಾರೆ.

Advertisement

ಬೆಂಗಳೂರಿನ 20ಕ್ಕೂ ಹೆಚ್ಚು ಕಾಲೇಜುಗಳು ಈ ಅಭಿಯಾನಕ್ಕೆ ಕೈಜೋಡಿಸಿವೆ. ರಾಜ್ಯದ ವಿವಿಧ ಜಿಲ್ಲೆಗಳ ವಿದ್ಯಾರ್ಥಿಗಳೂ “ಯುವಜನ ಆಯೋಗ’ ರಚನೆ ಬೇಡಿಕೆಗೆ ಕೈಜೋಡಿಸಿದ್ದಾರೆ. ಯುವಜನ ಕ್ರೀಡಾ ಸಬಲೀಕರಣ ಇಲಾಖೆ, ಕ್ರೀಡಾ ಚಟುವಟಿಕೆಗಳಿಗೆ ಮಾತ್ರ ಪ್ರೇರೇಪಿಸುತ್ತಿದೆ.

ಯುವಕರಲ್ಲಿ ಕಾಣಿಸಿಕೊಳ್ಳುವ ಮಾನಸಿಕ ಖನ್ನತೆ, ವಯೋಸಹಜ ಸಮಸ್ಯೆಗಳನ್ನು ಹೇಗೆ ಎದುರಿಸಬೇಕು ಹಾಗೂ ಅವರ ಅಗತ್ಯಗಳೇನು ಎಂದು ತಿಳಿದುಕೊಳ್ಳಲು ಆಯೋಗ ಬೇಕು ಎನ್ನುವುದು ಈ ಆಂದೋಲನದಲ್ಲಿ ತೊಡಗಿಸಿಕೊಂಡಿರುವ ಯುವಕರ ಅನಿಸಿಕೆ.

ಆಯೋಗದ ಅವಶ್ಯಕತೆ ಏನು?: ಕರ್ನಾಟಕದಲ್ಲಿ ಯುವಜನರ ಪರವಾಗಿ, ಅವರ ಸಮಸ್ಯೆಗಳನ್ನು ಪರಿಹರಿಸಲು ಯಾವುದೇ ಸರ್ಕಾರಿ ಸಂಸ್ಥೆಗಳಿಲ್ಲ. ಈಗಿರುವ ಇಲಾಖೆ ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಮಾತ್ರ ಉತ್ತೇಜನ ನೀಡುತ್ತಿದೆ. ಯುವಜನರಗೆ ಮಾರ್ಗದರ್ಶನ ನೀಡುವ, ಯುವಜನರಿಂದಲೇ ಕೂಡಿರುವ ಆಯೋಗವಿದ್ದರೆ, ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ.

ಒತ್ತಡದ ಜೀವನ ಕ್ರಮದಿಂದ ಯುವಕರು ಆತ್ಮಹತ್ಯೆ ಹಾದಿ ತುಳಿಯುತ್ತಿದ್ದಾರೆ. 15ರಿಂದ 29 ವರ್ಷದೊಳಗೆ ಸಂಭವಿಸುವ ಸಾವಿನಲ್ಲಿ ಬಹುಪಾಲು ಆತ್ಮಹತ್ಯೆ, ಎಚ್‌ಐವಿ, ಮದ್ಯಸೇವನೆಗೆ ಸಂಬಂಧಿಸಿದ ಕಾಯಿಲೆ, ಅಪಘಾತ, ಅಪೌಷ್ಟಿಕತೆ, ಕ್ಷಯದಿಂದ ಸಂಭವಿಸುತ್ತಿವೆ. ಹಾಗೇ ನೀರಿನಲ್ಲಿ ಮುಳುಗಿ, ಹೆರಿಗೆ ವೇಳೆ ಸಾವಿಗೀಡಾಗುವ ಪ್ರಕರಣಗಳೂ ಹೆಚ್ಚಾಗಿವೆ.

Advertisement

ಯುವತಿಯರಿಗೆ ಋತುಸ್ರಾವದ ಬಗ್ಗೆ ತಿಳಿವಳಿಕೆ ನೀಡುವ ಕೇಂದ್ರಗಳು ಸಹ ರಾಜ್ಯದಲ್ಲಿ ಇಲ್ಲ. ವಯೋಸಹಜವಾಗಿ ಆಗುವ ಬದಲಾವಣೆಗಳ ಬಗ್ಗೆ ಮುಕ್ತವಾಗಿ ಮಾತನಾಡಲೂ ಸಾಧ್ಯವಿಲ್ಲ. ಶಿಕ್ಷಣ ಮತ್ತು ಉದ್ಯೋಗಕ್ಕೆ ಸಂಬಂಧಿಸಿದಂತೆ ಹಲವು ಯುವಕರಲ್ಲಿ ಗೊಂದಲಗಳಿವೆ.

ಕೌಶಲ್ಯಾಭಿವೃದ್ಧಿ ಕೇಂದ್ರ ಬೇಕಾಗಿದೆ. ಈ ವಿಷಯಗಳಲ್ಲಿ ಯುವಕರಿಗೆ ನೆರವಾಗುವ ಮತ್ತು ಕಾರ್ಯಾಗಾರಗಳನ್ನು ಆಯೋಜಿಸಿ, ಅವರಿಗೆ ಮಾರ್ಗದರ್ಶನ ನೀಡಲು ಸರ್ಕಾರದ ಯಾವುದೇ ಸಂಸ್ಥೆ ಕಾರ್ಯನಿರ್ವಹಿಸುತ್ತಿಲ್ಲ. ಹೀಗಾಗಿ ಯುವಕರಲ್ಲಿ ಗೊಂದಲ ಮುಂದುವರಿದಿದೆ.

ಯುವಜನ ಅಭಿವೃದ್ಧಿ ಸೂಚ್ಯಂಕವನ್ನು ಆರೋಗ್ಯ, ಶಿಕ್ಷಣ, ಕೆಲಸ, ಮೂಲ ಸೌಕರ್ಯ, ಯುವಜನರ ಸೌಕರ್ಯಗಳು ಮತ್ತು ಅವರ ಭಾಗವಹಿಸುವಿಕೆ ಎಂಬ ಮಾನದಂಡಗಳ ಮೇಲೆ ನಿರ್ಧರಿಸಲಾಗುತ್ತಿದೆ. ಇದರ ಯುವಕರಿಗೆ ಅರಿವು ಮೂಡಿಸಲು ಆಯೋಗದ ಅವಶ್ಯಕತೆ ಇದೆ ಎನ್ನುವುದು ಯುವ ಸಮುದಾಯದ ಅಭಿಮತ.

ನಮ್ಮನ್ನು ಕೇವಲ ಮತ ಬ್ಯಾಂಕ್‌ ಆಗಿ ಬಳಸಿಕೊಳ್ಳಲಾಗುತ್ತಿದೆ. ಯಾವ ಪಕ್ಷ ಯುವಜನ ಆಯೋಗ ರಚಿಸಿಕೊಡುವ ಆಶ್ವಾಸನೆ ನೀಡುತ್ತದೆಯೊ ಅವರಿಗೆ ನಾವು ಓಟ್‌ ಮಾಡುತ್ತೇವೆ. ಇಲ್ಲವಾದರೆ ನೋಟಾ ಚಲಾಯಿಸುತ್ತೇವೆ.
-ರಶ್ಮಿ, ವಿದ್ಯಾರ್ಥಿನಿ

ಯುವಜನತೆ ತಮ್ಮ ಸಮಸ್ಯೆಗಳನ್ನು ಯಾರ ಬಳಿ ಹೇಳಿಕೊಳ್ಳಬೇಕು? ನಮ್ಮದೇ ಆದ ಸೌಲಭ್ಯ, ಅವಕಾಶಗಳಿವೆ. ಅದನ್ನು ತಿಳಿದುಕೊಳ್ಳಲು ಮತ್ತು ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು “ಯುವಜನ ಆಯೋಗ’ ಬೇಕು. ಅದು ಯುವಕರಿಂದಲೇ ಕೂಡಿರಬೇಕು
-ರಾಕೇಶ್‌, ಇಂಜಿನಿಯರಿಂಗ್‌ ವಿದ್ಯಾರ್ಥಿ

ಸಣ್ಣ ಕುಟುಂಬ ಸುಖೀ ಕುಟುಂಬ’ದ ಪರಿಕಲ್ಪನೆ ಮುಸ್ಲಿಮರಿಗೆ ಇಲ್ಲ. ನಾನು ಸ್ಲಂಗಳಲ್ಲಿ ಕೆಲಸ ಮಾಡುವಾಗ ಇದನ್ನು ನೋಡಿದ್ದೇನೆ. ಯುವತಿಯರಿಗೆ ಸಹಾಯ ಮತ್ತು ಅರಿವು ಮೂಡಿಸುವ ನಿಟ್ಟಿನಲ್ಲಿ ಯುವಜನ ಆಯೋಗದ ಅವಶ್ಯಕತೆ ಇದೆ.
-ನಜ್ಮಾ, ವೈದ್ಯಕೀಯ ವಿದ್ಯಾರ್ಥಿನಿ

* ಹಿತೇಶ್‌ ವೈ

Advertisement

Udayavani is now on Telegram. Click here to join our channel and stay updated with the latest news.

Next