Advertisement

ದೇಶದ ಅಭಿವೃದ್ಧಿ ದೃಷ್ಟಿಯಿಂದ ಮತ ಹಾಕಿ

05:10 PM Apr 24, 2018 | |

ಧಾರವಾಡ: ಕೇವಲ ಊರು, ವೈಯಕ್ತಿಕ ಬೆಳವಣಿಗೆ ನೋಡದೇ ದೇಶದ ಅಭಿವೃದ್ಧಿ ದೃಷ್ಟಿಯಿಂದ ಪ್ರತಿಯೊಬ್ಬರೂ ಮತ ಚಲಾಯಿಸಬೇಕು ಎಂದು ಯುವಾ ಬ್ರಿಗೇಡ್‌ ಮಾರ್ಗದರ್ಶಕ, ಅಂಕಣಕಾರ ಚಕ್ರವರ್ತಿ ಸೂಲಿಬೆಲೆ ಹೇಳಿದರು. ನಗರದ ಕಲಾಭವನದಲ್ಲಿ ಯುವಾ ಬ್ರಿಗೇಡ್‌ ವತಿಯಿಂದ ಸೋಮವಾರ ಸಂಜೆ ಹಮ್ಮಿಕೊಂಡಿದ್ದ ‘ಮತದಾನ ನಮ್ಮ ಹಕ್ಕು, ಸಮರ್ಥ ಆಯ್ಕೆ ನಮ್ಮ ಕರ್ತವ್ಯ’ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ಅವರು, ದೇಶವು ಜಾಗತಿಕ ಮಟ್ಟದಲ್ಲಿ ಉತ್ತಮ ಬೆಳವಣಿಗೆ ಹೊಂದುತ್ತಿದೆ. ಆ ನಿಟ್ಟಿನಲ್ಲಿ ಕರ್ನಾಟಕದ ಬೆಳವಣಿಗೆಗೆ ಶ್ರಮಿಸುವ ಪಕ್ಷಕ್ಕೆ ಮತ ಚಲಾಯಿಸಬೇಕು ಎಂದು ಸಲಹೆ ನೀಡಿದರು.

Advertisement

ಪ್ರಣಾಳಿಕೆ ಒಂದು ಪಕ್ಷದ ಗುರಿ, ಉದ್ದೇಶ ತಿಳಿಸುತ್ತದೆ. ಆದರೆ ಚುನಾವಣೆಯ ಕಣ ರಂಗೇರಿರುವ ಈ ಸಮಯದಲ್ಲಿ ಅಭ್ಯರ್ಥಿಗಳ ಆಯ್ಕೆಯಲ್ಲಿ ತೊಡಗಿರುವ ರಾಜಕೀಯ ಪಕ್ಷಗಳು ಪ್ರಣಾಳಿಕೆ ಬಿಡುಗಡೆ ಬಗ್ಗೆ ಚಿಂತಿಸುತ್ತಿಲ್ಲ. ಪ್ರಣಾಳಿಕೆ ಬಗ್ಗೆ ಹೇಳದ ರಾಜಕೀಯ ಪಕ್ಷಗಳು ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ತಲ್ಲೀನರಾಗಿರುವುದು ನಿಜಕ್ಕೂ ವಿಷಾದನೀಯ ಸಂಗತಿಯೇ ಸರಿ ಎಂದರು.

ಮತ ಚಲಾಯಿಸಿದಾಗ ಪ್ರಶ್ನಿಸುವ ಅಧಿಕಾರ ಬರುತ್ತದೆ. ಹೀಗಾಗಿ ಇಂತಹ ಅಮೂಲ್ಯ ಮತ ಚಲಾವಣೆಯನ್ನು ಮಾರಿಕೊಳ್ಳಬೇಡಿ. ಯಾವುದೇ ಆಮಿಷಗಳಿಗೆ ಬಲಿಯಾಗದೇ ಅರ್ಹ ಅಭ್ಯರ್ಥಿಗಳಿಗೆ ಮತ ಚಲಾಯಿಸುವ ಮೂಲಕ ಅಭಿವೃದ್ಧಿಗೆ ಕೈ ಜೋಡಿಸಬೇಕು. ಈಗಂತೂ ಮತ ಕೇಳಲು ಬಂದ ಜನಪ್ರತಿನಿಧಿಗಳಿಗೆ ಕೆಲವೆಡೆ ತೀವ್ರ ತರಾಟೆ ತೆಗೆದುಕೊಳ್ಳುವ ಪ್ರಸಂಗಗಳು ಜರುಗುತ್ತಿದ್ದು, ಇದೊಂದು ಉತ್ತಮ ಬೆಳವಣಿಗೆ ಎಂದರು. 

ಚುನಾವಣೆ ಸಮಯದಲ್ಲಿ ಸಾಲ ಮನ್ನಾ ಹಾಗೂ ರೈತರ ಆತ್ಮಹತ್ಯೆ ಬಗ್ಗೆ ಪಕ್ಷಗಳು ತಂಬಾ ಗಮನ ಹರಿಸುತ್ತವೆ. ಆದರೆ ಅರ್ಹ ಫ‌ಲಾನುಭವಿಗಳಿಗೆ ಸರ್ಕಾರದ ಸೌಲಭ್ಯಗಳು ದೊರಕುವುದಿಲ್ಲ. ಹೀಗಾಗಿ ಮತಕ್ಕೆ ದುಡ್ಡಿನ ಮೌಲ್ಯ ಕಟ್ಟುವ ಪಕ್ಷ, ವ್ಯಕ್ತಿಗೆ ಬುದ್ಧಿ ಕಲಿಸಲೇ ಬೇಕು. ಇಲ್ಲವಾದರೆ ಅಂತಹವರಿಂದ ಸಮಾಜ ಹಾಳಾಗುವುದರಲ್ಲಿ ಎರಡು ಮಾತಿಲ್ಲ ಎಂದು ಎಚ್ಚರಿಸಿದರು. ಪಿ.ವಿ. ಹಿರೇಮಠ, ವರ್ಧಮಾನ್‌ ಸೇರಿದಂತೆ ಹಲವರಿದ್ದರು.

ಕಳೆದ ಎರಡು ವರ್ಷಗಳಿಂದ ಮಹದಾಯಿ ಹೋರಾಟ ನಡೆಯುತ್ತಿದ್ದರೂ ಯಾವುದೇ ಪಕ್ಷದ ಬೆಂಬಲ ದೊರಕಿಲ್ಲ. ಇನ್ನು 7 ವರ್ಷ ಕಳೆದರೆ ಅಲ್ಲಿನ ಒಂದು ಹನಿ ನೀರು ಕರ್ನಾಟಕಕ್ಕೆ ಲಭಿಸದು. ಹೀಗಾಗಿ ಆ ಬಗ್ಗೆ ಎಚ್ಚೆತ್ತುಕೊಂಡು ಮತ ಚಲಾಯಿಸುವುದು ಅಗತ್ಯವಿದೆ.
ಚಕ್ರವರ್ತಿ ಸೂಲಿಬೆಲೆ, ಅಂಕಣಕಾರ 

Advertisement
Advertisement

Udayavani is now on Telegram. Click here to join our channel and stay updated with the latest news.

Next