ಉಡುಪಿ: ವಿವಿ ಪ್ಯಾಟ್ ಬಳಕೆಯಿಂದ ಮತದಾರನಿಗೆ ತನ್ನ ಆಯ್ಕೆಯ ಅಭ್ಯರ್ಥಿಗೆ ಮತ ಚಲಾವಣೆ ಆಗಿರುವುದನ್ನು ಖಾತರಿಪಡಿಸಿಕೊಳ್ಳಲು ಸಾಧ್ಯವಾಗಲಿದೆ. ವಿದ್ಯುನ್ಮಾನ ಮತಯಂತ್ರ (ಇವಿಎಂ)ಗಳ ಕಾರ್ಯದಕ್ಷತೆಯ ಬಗ್ಗೆ ಯಾವುದೇ ಸಂದೇಹ ಬೇಡ ಎಂದು ಉಡುಪಿ ಜಿಲ್ಲಾ ಚುನಾವಣಾಧಿಕಾರಿ, ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಹೇಳಿದರು.
ಮಾ. 31ರಂದು ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಬೆಂಗಳೂರಿನ ಬಿಇಎಲ್ ಸಂಸ್ಥೆಯ ತಂತ್ರಜ್ಞರು, ಸಂಪನ್ಮೂಲ ವ್ಯಕ್ತಿಗಳು ಮತ್ತು ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಮಾಧ್ಯಮಗಳಿಗೆ ವಿದ್ಯುನ್ಮಾನ ಮತಯಂತ್ರ ಮತ್ತು ವಿವಿಪ್ಯಾಟ್‌ಗಳ ಪ್ರಾತ್ಯಕ್ಷಿಕೆ ಏರ್ಪಡಿಸಿದ ಸಂದರ್ಭದಲ್ಲಿ ಅವರು ಪತ್ರಕರ್ತರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದರು.
ಬ್ಯಾಲೆಟ್ ಯುನಿಟ್, ವಿವಿ ಪ್ಯಾಟ್ ಮತ್ತು ಕಂಟ್ರೋಲ್ ಯುನಿಟ್ ಇವು ಮೂರು ಸಾಧನಗಳು ಮತದಾನ ಪ್ರಕ್ರಿಯೆಯಲ್ಲಿ ಪ್ರಮುಖವಾಗಿ ಬಳಕೆಯಾಗುತ್ತವೆ. ಬ್ಯಾಲೆಟ್ ಯುನಿಟ್ (ಮತಯಂತ್ರ)ದಲ್ಲಿ ಮತ ಚಲಾಯಿಸಿದ ಕೂಡಲೇ ಯಾವ ಅಭ್ಯರ್ಥಿಗೆ/ ಪಕ್ಷಕ್ಕೆ ಮತ ಚಲಾವಣೆಯಾಗಿದೆ ಎಂಬುದು ವಿವಿಪ್ಯಾಟ್‌ನಲ್ಲಿ 7 ಸೆಕೆಂಡುಗಳ ಕಾಲ ಡಿಸ್‌ಪ್ಲೇ ಆಗುತ್ತದೆ. ಅನಂತರ ಸ್ಲಿಪ್ (ಮುದ್ರಿತ ಚೀಟಿ) ವಿವಿ ಪ್ಯಾಟ್‌ನೊಳಗೆ ಸಂಗ್ರಹಗೊಳ್ಳುತ್ತದೆ. ಮತ ಎಣಿಕೆ ಸಂದರ್ಭದಲ್ಲಿ ಜಿಲ್ಲೆಯ ಎಲ್ಲ ಕ್ಷೇತ್ರಗಳ ತಲಾ ಒಂದೊಂದು ವಿವಿ ಪ್ಯಾಟ್‌ಗಳ ಸ್ಲಿಪ್‌ಗ್ಳನ್ನು ಪರಿಶೀಲಿಸಿ ಖಚಿತಪಡಿಸಿಕೊಳ್ಳಲಾಗುತ್ತದೆ. ಬೇಡಿಕೆಗಳು ಬಂದರೆ ಎಲ್ಲ ವಿವಿ ಪ್ಯಾಟ್‌ಗಳ ಸ್ಲಿಪ್‌ಗ್ಳನ್ನು ಕೂಡ ಎಣಿಕೆ ಮಾಡಲಾಗುತ್ತದೆ. ಸ್ಲಿಪ್‌ಗ್ಳನ್ನು ಮತದಾರರ ಕೈಗೆ ನೀಡುವುದಿಲ್ಲ ಎಂದು ಪ್ರಿಯಾಂಕಾ ತಿಳಿಸಿದರು.
ಸ್ಥಳೀಯಾಡಳಿತಗಳಿಗೆ ಅನುಮತಿ ಅಧಿಕಾರವಿಲ್ಲ: ರಾಜಕೀಯ, ಖಾಸಗಿ ಸೇರಿದಂತೆ ಯಾವುದೇ ಕಾರ್ಯಕ್ರಮಗಳಿಗೆ ಅನುಮತಿ ಪಡೆದುಕೊಳ್ಳುವುದು ಕಡ್ಡಾಯ ಎಂದು ಸ್ಪಷ್ಟಪಡಿಸಿದ ಪ್ರಿಯಾಂಕಾ ಅವರು, ಈ ಅನುಮತಿ ಪತ್ರವನ್ನು ನೀಡುವ ಅಧಿಕಾರ ಗ್ರಾ.ಪಂ.ಗಳು ಸಹಿತ ಯಾವುದೇ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಇಲ್ಲ. ಅದನ್ನು ಚುನಾವಣಾಧಿಕಾರಿಗಳ ಕಚೇರಿಯಿಂದಲೇ ಪಡೆದುಕೊಳ್ಳಬೇಕು ಎಂದು ತಿಳಿಸಿದರು. ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಜಾತ್ರೆ, ಮದುವೆ, ಗೃಹಪ್ರವೇಶ, ಹುಟ್ಟಿದ ಹಬ್ಬ ಆಚರಣೆ ಮೊದಲಾದ ಕಾರ್ಯಕ್ರಮಗಳಲ್ಲಿ ಭೋಜನ ವ್ಯವಸ್ಥೆ ಇರುತ್ತದೆ. ಅಲ್ಲಿ ರಾಜಕೀಯ ವ್ಯಕ್ತಿಗಳು ಪಾಲ್ಗೊಳ್ಳುವ ಸಾಧ್ಯತೆಗಳು ಕೂಡ ಇರುತ್ತವೆ. ಅವುಗಳ ಮಾಹಿತಿ ನಮಗೆ ಅವಶ್ಯ ಇದೆ. ಹಾಗಾಗಿ ಇಂತಹ ಕಾರ್ಯಕ್ರಮಗಳಿಗೆ ಅನುಮತಿ ಪತ್ರ ಪಡೆಯುವುದು ಕಡ್ಡಾಯ. ಮಾದರಿ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿ ಜಿಲ್ಲೆಯಲ್ಲಿ ಒಟ್ಟು 7 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಅನುರಾಧಾ, ಜಿ.ಪಂ. ಸಿಇಒ ಶಿವಾನಂದ ಕಾಪಶಿ, ಸಂಪನ್ಮೂಲ ವ್ಯಕ್ತಿ ಒ.ಆರ್.ಪ್ರಕಾಶ್, ಬಿಇಎಲ್ ತಂತ್ರಜ್ಞರಾದ ಫರ್ಹಾಜ್ ತಸಿಕ್, ಅಶೋಕ್ ಕುಮಾರ್ ಉಪಸ್ಥಿತರಿದ್ದರು.