Advertisement

ಸಂಪುಟ ವಿಸ್ತರಣೆ ಬೆನ್ನಲ್ಲೇ ಅಸಮಾಧಾನ ಸ್ಫೋಟ

09:22 AM Sep 02, 2017 | |

ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಕಾಂಗ್ರೆಸ್‌ನಲ್ಲಿ ಅಸಮಾಧಾನ ಸ್ಫೋಟಗೊಂಡಿದ್ದು, ಅದು ಖುದ್ದು ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್‌ ಅವರು ಪ್ರಮಾಣ ವಚನ ಸಮಾರಂಭಕ್ಕೆ “ಗೈರು’ ಹಾಜರಾಗುವ ಮೂಲಕ ವ್ಯಕ್ತವಾಗಿದೆ. ಸಂಪುಟದಲ್ಲಿ ಖಾಲಿ ಇದ್ದ ಮೂರು ಸ್ಥಾನಗಳ ಪೈಕಿ ಲಿಂಗಾಯತರ ಕೋಟಾದಡಿ ತಿಪಟೂರು ಶಾಸಕ ಷಡಕ್ಷರಿ ಅವರು ಸಚಿವರಾಗುವ ನಿರೀಕ್ಷೆ ಇತ್ತಾದರೂ ಕೊನೇ ಹಂತದಲ್ಲಿ ಗೀತಾ ಮಹದೇವ ಪ್ರಸಾದ್‌ ಅವರನ್ನು ಸಚಿವರನ್ನಾಗಿ ಮಾಡಿದ್ದು ಅಸಮಾಧಾನಕ್ಕೆ ಕಾರಣವೆಂದು ಹೇಳಲಾಗಿದೆ.

Advertisement

ತುಮಕೂರು ಜಿಲ್ಲೆಯ ಷಡಕ್ಷರಿ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳದ ಕಾರಣ ಪರಮೇಶ್ವರ್‌ ಮುನಿಸಿಕೊಂಡಿದ್ದು, ಪ್ರಮಾಣ ವಚನ ಸಮಾರಂಭಕ್ಕೆ ಬರಲಿಲ್ಲ. ಮುಖ್ಯಮಂತ್ರಿಯವರು ತಮ್ಮ ಮಾತಿಗೆ ಬೆಲೆ ಕೊಟ್ಟಿಲ್ಲ, ತಮ್ಮ ಆಪ್ತ ಜೆ.ಸಿ. ಚಂದ್ರಶೇಖರ್‌ಗೆ ವಿಧಾನ ಪರಿಷತ್‌ ಸ್ಥಾನ ನೀಡುವ ವಿಚಾರದಲ್ಲಿ ಇದೇ ರೀತಿ ಕಡೆಗಣಿಸಲಾಗಿತ್ತು ಎಂದು ತಮ್ಮ ಆಪ್ತರ ಬಳಿ ಬೇಸರ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.  ಮುಖ್ಯಮಂತ್ರಿ ಸಿದ್ದರಾಮಯ್ಯ ಮೋಹನ್‌ ಕುಮಾರಿ ಆಯ್ಕೆಯಲ್ಲಿ ಏಕ ಪಕ್ಷೀಯ ನಿರ್ಧಾರ ತೆಗೆದುಕೊಂಡಿದ್ದಾರೆ. ಷಡಕ್ಷರಿಗೆ ಸಂಪುಟದಲ್ಲಿ ಸ್ಥಾನ ಕೊಡುವುದಾಗಿ ಹೈಕಮಾಂಡ್‌ ಎದುರು ಒಪ್ಪಿಕೊಂಡು ಬಂದು ನಂತರ ತಮ್ಮ ಆಪ್ತ ಸಿ.ಎಂ. ಇಬ್ರಾಹಿಂಗೆ ಸಚಿವ ಸ್ಥಾನ ಕೊಡಿಸಲು ಲಿಂಗಾಯತ ಸಮುದಾಯದ ಷಡಕ್ಷರಿಯನ್ನು ಕೈ ಬಿಡಲು ತೀರ್ಮಾನಿಸಿದ್ದರು.

ಇಬ್ರಾಹಿಂ ಸೇರ್ಪಡೆಗೆ ಪಕ್ಷದಲ್ಲಿ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಷಡಕ್ಷರಿ ಬದಲು ತಮ್ಮ ಆಪ್ತ ದಿವಂಗತ ಎಚ್‌.ಎಸ್‌. ಮಹದೇವ ಪ್ರಸಾದ್‌ ಅವರ ಪತ್ನಿ ಗೀತಾ ಮಹದೇವ ಪ್ರಸಾದ್‌ರನ್ನು ಸಂಪುಟಕ್ಕೆ ಸೇರಿಸಿಕೊಂಡಿದ್ದಾರೆ. ಇದು ಯಾವ ನ್ಯಾಯ ಎಂದು ಅಸ ಮಾಧಾನ ವ್ಯಕ್ತ ಪಡಿಸಿದ್ದಾರೆ ಎನ್ನಲಾಗಿದೆ. ಮುಖ್ಯಮಂತ್ರಿಯ ದಿಢೀರ್‌ ನಿರ್ಧಾರದಿಂದ ಪರಮೇಶ್ವರ್‌ ಬೇಸರಗೊಂಡಿದ್ದಾರೆ ಎನ್ನಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಎಲ್ಲ ತೀರ್ಮಾನ ಗಳನ್ನು ಏಕ ಪಕ್ಷೀಯವಾಗಿ ತೆಗೆದುಕೊಳ್ಳುತ್ತಿದ್ದು, ರಾಜ್ಯಾಧ್ಯಕ್ಷ ಸೇರಿ ಪಕ್ಷದ ಯಾವುದೇ ನಾಯಕರ ಮಾತುಗಳಿಗೂ ಮಾನ್ಯತೆ ನೀಡುತ್ತಿಲ್ಲ. ಹೀಗಾದರೆ ಅಧ್ಯಕ್ಷರಾಗಿ ನಾವೇಕೆ ಇರಬೇಕೆಂದು ಆಪ್ತರ ಬಳಿ ಪ್ರಶ್ನಿಸಿದ್ದಾರೆ ಎಂದು ಹೇಳಲಾಗಿದೆ.

ಪರಮೇಶ್ವರ್‌ ಜತೆ ಸಚಿವಾಕಾಂಕ್ಷಿಗಳಾಗಿದ್ದ ಮಳವಳ್ಳಿ ಶಾಸಕ ನರೇಂದ್ರ ಸ್ವಾಮಿ, ತಿಪಟೂರು ಶಾಸಕ ಷಡಕ್ಷರಿ, ವಿಧಾನ ಪರಿಷತ್‌ ಸದಸ್ಯೆ ಮೋಟಮ್ಮ ಕೂಡ ಅಸಮಾಧಾನಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಆದರೆ, ವಿಧಾನ ಸಭೆ ಚುನಾವಣೆ ಹತ್ತಿರ ಇರುವುದರಿಂದ ಬಹಿರಂಗವಾಗಿ ಮುಖ್ಯಮಂತ್ರಿ ವಿರುದ್ಧ ಬಂಡಾಯ ಸಾರದೆ ಮೌನ ವಹಿಸಿದ್ದಾರೆ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

ಸಚಿವ ಸ್ಥಾನ ಸಿಗದಿದ್ದಕ್ಕೆ ಬೇಸರವಾಗಿದೆ: ನರೇಂದ್ರಸ್ವಾಮಿ
ಮಂಡ್ಯ: “ಸಚಿವ ಸಂಪುಟದಲ್ಲಿ ಸ್ಥಾನ ಸಿಗದಿರುವುದಕ್ಕೆ ಬೇಸರವಾಗಿರುವುದು ಸಹಜ. ನಾನು ಪಕ್ಷ ಹಾಗೂ ನಾಯಕರ ತೀರ್ಮಾನಕ್ಕೆ ಕಟಿಬದ್ಧನಾಗಿದ್ದು, ನನ್ನ ಪಕ್ಷ ನಿಷ್ಠೆ, ಸೇವಾ ಬದ್ಧತೆಯನ್ನು ಗುರುತಿಸುವ ತನಕ ಕಾಯುತ್ತೇನೆ’ ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಸಂಪುಟ ವಿಸ್ತರಣೆಯಲ್ಲಿ ಸ್ಥಾನ ಸಿಗದಿರುವುದು ಸ್ವಲ್ಪ ಮಟ್ಟಿಗೆ ಬೇಸರ ತರಿಸಿದೆ. ಅಧಿಕಾರವನ್ನು ಯಾರೂ ಬೇಡ ಎನ್ನುವುದಿಲ್ಲ. ನನ್ನ ಸೇವೆಯನ್ನು ಪಕ್ಷ ಎಂದು ಗುರುತಿಸಿ ಸ್ಥಾನ ನೀಡುವುದೋ ಅಲ್ಲಿಯವರೆಗೂ ಕಾಯುತ್ತೇನೆ. ನನ್ನ ನಾಯಕ ಮುಖ್ಯಮಂತ್ರಿ ಸಿದ್ದರಾಮಯ್ಯನವರ ತೀರ್ಮಾನಕ್ಕೆ ನಾನು ಸದಾ ಬದ್ಧ’ ಎಂದರು.

Advertisement

ಗೈರಾದವರು ಯಾರ್ಯಾರು?
ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್‌ ಅವರಲ್ಲದೆ ಕಾರ್ಯಾ ಧ್ಯಕ್ಷ ದಿನೇಶ್‌ ಗುಂಡೂರಾವ್‌, ಹಿರಿಯ ಸಚಿ ವ ರಾದ ಕಾಗೋಡು ತಿಮ್ಮಪ್ಪ, ಎಚ್‌.ಕೆ.ಪಾಟೀಲ್‌, ಡಿ.ಕೆ. ಶಿವಕುಮಾರ್‌, ಟಿ.ಬಿ.ಜಯಚಂದ್ರ, ಆರ್‌.ವಿ.ದೇಶಪಾಂಡೆ, ಎಂ.ಬಿ.ಪಾಟೀಲ್‌ ಸೇರಿ ಹಿರಿಯ ಸಚಿವರು ಗೈರು ಹಾಜರಿ
ಎದ್ದು ಕಾಣುತ್ತಿತ್ತು. ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್‌.ಆರ್‌. ಪಾಟೀಲ್‌, ಸಚಿವ ರೋಷನ್‌ ಬೇಗ್‌ ಸೇರಿ ಕೆಲವು ನಾಯಕರು ಮಾತ್ರ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next