Advertisement

Volakadu: ಡ್ರೈನೇಜ್‌ ಸಮಸ್ಯೆಗೆ ಸಿಗದ ಪರಿಹಾರ

06:56 PM Oct 24, 2024 | Team Udayavani |

ಉಡುಪಿ: ನಗರದಲ್ಲಿ ಈಗಾಗಲೇ ಒಳಚರಂಡಿ ಸಮಸ್ಯೆ ಹೆಚ್ಚಳವಾಗುತ್ತಿದ್ದು, ಅಲ್ಲಲ್ಲಿ ಡ್ರೈನೇಜ್‌ ಬ್ಲಾಕ್‌ ಆಗುವುದು ಕೊಳಚೆ ನೀರು ನಿಂತು ಪರಿಸರವೆಲ್ಲ ಗಬ್ಬುನಾರುವುದು ಸಾಮಾನ್ಯ ಎನಿಸಿಬಿಟ್ಟಿದೆ. ಇದೀಗ ಕಳೆದ ಹಲವು ದಿನಗಳಿಂದ ವಳಕಾಡು ವಾರ್ಡ್‌ ನಿವಾಸಿಗಳು ಇದೇ ಸಮಸ್ಯೆ ಎದುರಿಸುತ್ತಿದ್ದಾರೆ.

Advertisement

ವಳಕಾಡು ಪ್ರೌಢಶಾಲೆ ಸಮೀಪವೇ ಡ್ರೈನೇಜ್‌ ಚೇಂಬರ್‌ ದುರಸ್ತಿಪಡಿಸುವ ನಿಟ್ಟಿನಲ್ಲಿ ಗುಂಡಿಯನ್ನು ತೋಡಲಾಗಿದ್ದು, ಹಲವು ದಿನಗಳಿಂದ ಕಾಮಗಾರಿ ಮುಂದಕ್ಕೆ ಸಾಗದೇ ತಟಸ್ಥವಾಗಿದೆ. ಈಗಾಗಲೇ 15 ದಿನ ಕಳೆದು ಹೋಗಿದ್ದು, ವ್ಯವಸ್ಥಿತ ಕಾಮಗಾರಿ ನಡೆಯದೇ ಜನರು ತೊಂದರೆ ಅನುಭವಿಸುವಂತಾಗಿದೆ.

ತೋಡಿಟ್ಟ ಗುಂಡಿಯಲ್ಲಿ ತ್ಯಾಜ್ಯ ನೀರು ತುಂಬಿಕೊಂಡಿದ್ದು, ಪರಿಸರದಲ್ಲಿ ಗಬ್ಬುವಾಸನೆ ಹರಡಿಕೊಂಡಿದೆ. ಸಮೀಪದಲ್ಲಿಯೇ ಸರಕಾರಿ ಮಾದರಿ ಪ್ರೌಢಶಾಲೆ ಇದ್ದು, ಶಾಲೆಯ ವಿದ್ಯಾರ್ಥಿಗಳು ಆಚೀಚೆ ಓಡಾಡುತ್ತಾರೆ. ಸಮೀಪದ ನೂರಾರು ವಸತಿ ಸಂಕೀರ್ಣಗಳು ಇದ್ದು, ಜನರು ರೋಗಭೀತಿಯಲ್ಲಿ ದಿನ ಕಳೆಯುವಂತಾಗಿದೆ.

ಬಾಯ್ದೆರೆದ ಹೊಂಡದಲ್ಲಿ ಕೊಳಚೆ ನೀರು ಶೇಖರಣೆಯು ಸೊಳ್ಳೆ ಉತ್ಪತ್ತಿ ತಾಣವಾಗಿ ಪರಿಸರದಲ್ಲಿ ಸೊಳ್ಳೆ ಕಾಟ ಹೆಚ್ಚಳವಾಗಲು ಕಾರಣವಾಗಿದೆ. ಈ ಅವ್ಯವಸ್ಥೆಯಿಂದ ಮಲೇರಿಯಾ, ಡೆಂಗ್ಯೂ ಮೊದಲಾದ ಸಾಂಕ್ರಾಮಿಕ ರೋಗಗಳು ಹೆಚ್ಚುವ ಭೀತಿಯನ್ನು ಸ್ಥಳೀಯರು ಹೊಂದಿದ್ದಾರೆ.

ಡ್ರೈನೇಜ್‌ ಚೇಂಬರ್‌ ಅವ್ಯವಸ್ಥೆ ಹಿನ್ನೆಲೆ ಯಲ್ಲಿ ಸುಗಮ ಸಂಚಾರಕ್ಕೆ ಅಡ್ಡಿಯಾಗು ತ್ತಿದ್ದು, ಕೊಂಚ ನಿಯಂತ್ರಣ ತಪ್ಪಿದರೂ ಅಪಘಾತ ಸಂಭವಿಸುವ ಸಾಧ್ಯತೆ ಇರುತ್ತದೆ. ರಾತ್ರಿ ವೇಳೆ ಓಡಾಡುವವರು ಈ ಬಗ್ಗೆ ಎಚ್ಚರವಹಿಸಬೇಕಾಗಿದೆ ಎಂದು ಸ್ಥಳೀಯರಾದ ನಿತ್ಯಾನಂದ ವಳಕಾಡು, ತಾರಾನಾಥ ಮೇಸ್ತ ಆತಂಕ ವ್ಯಕ್ತಪಡಿಸಿದ್ದಾರೆ.

Advertisement

ಹಳೆ ಯುಜಿಡಿ ಪೈಪ್‌ಲೈನ್‌ ಕುಸಿದಿದ್ದು, ಇದರ ದುರಸ್ತಿ ಕಾರ್ಯ ಸಾಗುತ್ತಿದೆ. ಶೀಘ್ರ ಕಾಮಗಾರಿ ಪೂರ್ಣಗೊಳ್ಳಲಿದೆ. ಜನರಿಗೆ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆ ಕ್ರಮಕೈಗೊಂಡು ಕಾಮಗಾರಿ ಪೂರ್ಣ ಗೊಳಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.
-ರಜನಿ ಹೆಬ್ಟಾರ್‌, ಉಪಾಧ್ಯಕ್ಷೆ, ವಳಕಾಡು ವಾರ್ಡ್‌ ಸದಸ್ಯೆ, ನಗರಸಭೆ ಉಡುಪಿ

ಒಳಚರಂಡಿ ವ್ಯವಸ್ಥೆ ಅಪೂರ್ಣ
ನಗರವು ಕಳೆದ 10 ವರ್ಷದಲ್ಲಿ ಶರವೇಗದಲ್ಲಿ ಬೆಳೆಯುತ್ತಿದ್ದರೂ ಅದಕ್ಕೆ ಪೂರಕವಾಗುವ ರೀತಿಯಲ್ಲಿ ಒಳಚರಂಡಿ ವ್ಯವಸ್ಥೆ(ಯುಜಿಡಿ) ರೂಪುಗೊಂಡಿಲ್ಲ. ಎಲ್ಲೆಲ್ಲಿ ಸಮಸ್ಯೆಗಳಿವೆಯೊ ಅಲ್ಲಲ್ಲಿ ನೋಡಿಕೊಂಡು ಇಂತಿಷ್ಟು ಅನುದಾನ ಮೀಸಲಿಟ್ಟು ಆಗಾಗ ಯುಜಿಡಿ ಕಾಮಗಾರಿಗಳನ್ನು ರೂಪಿಸಲಾಗುತ್ತದೆ. ಇಡೀ ನಗರಕ್ಕೆ ಮುಂದಿನ 50 ವರ್ಷಗಳ ದೂರದೃಷ್ಟಿಯೊಂದಿಗೆ ಶಾಶ್ವತ ಯುಜಿಡಿ ಯೋಜನೆಗೆ ಕಾಲ ಇನ್ನೂ ಕೂಡಿ ಬಂದಿಲ್ಲ. ಹಿಂದಿನ ಸರಕಾರದಲ್ಲಿ ಯುಜಿಡಿ ಅನುದಾನಕ್ಕೆ ಗರಿಷ್ಠ ಪ್ರಯತ್ನ ನಡೆದರೂ, ಅನುದಾನ ಬಿಡುಗಡೆಗೊಳ್ಳದೆ ಇಂದಿಗೂ ಈ ಯೋಜನೆ ನನೆಗುದಿಗೆ ಬಿದ್ದಿದೆ.

ಕುಸಿಯುತ್ತಿದೆ ಹಳೆ ಯುಜಿಡಿ
ಹಳೆ ಕಾಲದ ಯುಜಿಡಿ ಪೈಪ್‌ಲೈನ್‌ ಹಾನಿಗೊಳಗಾಗುವುದು, ಕುಸಿಯುವ ಮೂಲಕ ಅಲ್ಲಲ್ಲಿ ಬ್ಲಾಕ್‌ ಆಗಿ ಜನರು ತೊಂದರೆಪಡುವಂತ ಸ್ಥಿತಿ ನಿರ್ಮಾಣಗೊಂಡಿದೆ. ಒಂದು ಕಡೆ ಕುಸಿದು ಹಾನಿಯಾಗಿ ಬ್ಲಾಕ್‌ ಆದಲ್ಲಿ ಅದನ್ನು ತೆರವುಗೊಳಿಸಿ ದುರಸ್ತಿಪಡಿಸಲು ಹಲವು ದಿನಗಳೇ ಬೇಕಾಗಿರುತ್ತದೆ. ಸುಲಭದಲ್ಲಿ ಕಾಮಗಾರಿ ನಿರ್ವಹಿಸುವ ಅತ್ಯಾಧುನಿಕ ಪರಿಕರ, ಅಗತ್ಯ ಕಾಮಗಾರಿಗೆ ಸೂಕ್ತ ಅನುದಾನ ಮೀಸಲಿಡುವ ನಿಟ್ಟಿನಲ್ಲಿ ನಗರಸಭೆ ಕ್ರಮವಹಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next