ಬೆಂಗಳೂರು: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಿಂದ ವಿದ್ಯಾರ್ಥಿಗಳಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ ಎಐಡಿಎಸ್‌ಒ ಹಾಗೂ ವಿಟಿಯು ವಿದ್ಯಾರ್ಥಿಗಳ ಹೋರಾಟ ಸಮಿತಿಯಿಂದ ಎಂಜಿನಿಯರಿಂಗ್ ಕಾಲೇಜು ಬಂದ್ ನಡೆಸಿತು. ಇದೇ ವೇಳೆ ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್‌ನಿಂದ ಪ್ರತ್ಯೇಕವಾಗಿ ಪ್ರತಿಭಟನೆ ನಡೆಯಿತು.
ಒಂದೆಡೆ ಎಐಡಿಎಸ್‌ಒ ಕಾರ್ಯಕರ್ತರು ಹಾಗೂ ವಿಟಿಯು ವಿದ್ಯಾರ್ಥಿಗಳ ಹೋರಾಟ ಸಮಿತಿಯ ಕಾರ್ಯಕರ್ತರು ಎಂಜಿನಿಯರಿಂಗ್ ಕಾಲೇಜ್ ಬಂದ್ ಮಾಡಿಸಿದರೆ ಮತ್ತೂಂದೆಡೆ ಎಬಿವಿಪಿ ಕಾರ್ಯಕರ್ತರು ನಗರದ ಮೈಸೂರ್ ಬ್ಯಾಂಕ್ ವೃತ್ತದಲ್ಲಿ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದರು.
ಕಾಲೇಜ್ ಬಂದ್ ಕರೆಗೆ ಬೆಂಗಳೂರಿನ 45 ಕಾಲೇಜು ಸೇರಿ ರಾಜ್ಯದ 160ಕ್ಕೂ ಅಧಿಕ ಕಾಲೇಜಿನ ವಿದ್ಯಾರ್ಥಿಗಳು ಬೆಂಬಲ ನೀಡಿ ಬಂದ್ ಮಾಡಿ, ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಬೀದಿಗಿಳಿದ ವಿದ್ಯಾರ್ಥಿಗಳು 2010 ಸ್ಕೀಮ್ ( ನಾನ್- ಸಿಬಿಸಿಎಸ್) ವಿದ್ಯಾರ್ಥಿಗಳಿಗೆ ಇಯರ್ ಬ್ಯಾಕ್ ಹಾಗೂ ಕ್ರಿಟಿಕಲ್ ಇಯರ್ ಬ್ಯಾಕ್ ತೆಗೆದುಹಾಕಿ, ಸಿಬಿಸಿಎಸ್ ವಿದ್ಯಾರ್ಥಿಗಳಿಗೆ ಸಪ್ಲಿಮೆಂಟರಿ ಪರೀಕ್ಷೆಯನ್ನು ನೀಡಬೇಕೆಂದು ಒತ್ತಾಯಿಸಿ ಘೋಷಣೆ ಕೂಗಿದರು.
ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರ ಹಾಗೂ ಬೆಂಗಳೂರಿನ ಮೈಸೂರ್ ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.ಎಐಡಿಎಸ್‌ಒನ ರಾಜ್ಯ ಉಪಾಧ್ಯಕ್ಷ ವಿರನಂದನ್ ಮಾತನಾಡಿ, ವಿಟಿಯು ಅಧಿಕಾರಿಗಳು ಮಾಡಿರುವ ತಪ್ಪಿನಿಂದ 50 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯ ಅತಂತ್ರವಾಗಿದೆ.
ಕಳೆದ ಒಂದು ತಿಂಗಳಿನಿಂದ ವಿದ್ಯಾರ್ಥಿಗಳು ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ. ಆದರೆ ವಿಟಿಯು ಅಧಿಕಾರಿಗಳು ಯಾವುದೇ ಸ್ಪಂದನೆ ನೀಡಿಲ್ಲ ಹಾಗೂ ಸಮಸ್ಯೆಯನ್ನು ಸರಿಪಡಿಸಿಲ್ಲ. 8 ದಿನಗಳ ಅವಧಿಯೊಳಗೆ ಸಮಸ್ಯೆ ಸರಿಪಡಿಸದೇ ಇದ್ದರೆ ಉಗ್ರ ಹೋರಾಟ ಮಾಡಲಿದ್ದೇವೆ ಎಂಬ ಎಚ್ಚರಿಕೆ ನೀಡಿದರು.