Advertisement
ಪ್ರತೀ 100 ಮಕ್ಕಳಲ್ಲಿ 8 ಮಂದಿ ಸಮುದಾಯದಲ್ಲಿ ಮತ್ತು 10 ಮಕ್ಕಳು ಶಾಲೆಯಲ್ಲಿ ವಕ್ರೀಕಾರಕ ದೋಷದಿಂದ ಬಳಲುತ್ತಿದ್ದಾರೆ. ಸರಿಪಡಿಸದ ವಕ್ರೀಕಾರಕ ದೋಷದಿಂದ ಉಂಟಾಗುವ ದೃಷ್ಟಿದೋಷವನ್ನು ಸೂಕ್ತ ಕನ್ನಡಕ ಒದಗಿಸುವ ಮೂಲಕ ತಪ್ಪಿಸಬಹುದು. ಭಾರತದಲ್ಲಿ, ಮಕ್ಕಳಲ್ಲಿ ವಕ್ರೀಕಾರಕ ದೋಷವನ್ನು ಪ್ರಮುಖ ಆರೋಗ್ಯ ಸಮಸ್ಯೆ ಎಂದು ಪರಿಗಣಿಸಲಾಗುತ್ತದೆ. ಸರಿಪಡಿಸದ ವಕ್ರೀಕಾರಕ ದೋಷವು ಆಂಬ್ಲಿಯೋಪಿಯಾ, ಸ್ಕ್ವಿಂಟ್(ಮೆಳ್ಳೆಗಣ್ಣು) ಇತ್ಯಾದಿಗಳಂತಹ ಹಲವಾರು ಇತರ ಕಣ್ಣಿನ ಪರಿಸ್ಥಿತಿಗಳಿಗೆ (ದ್ವಿತೀಯ ಸ್ಥಿತಿಗಳು) ಕಾರಣವಾಗಬಹುದು ಮತ್ತು ಮಗುವಿನ ಶೈಕ್ಷಣಿಕ ಕಾರ್ಯಕ್ಷಮತೆಯ ಮೇಲೆ ಗಮನಾರ್ಹ ಪರಿಣಾಮ ಬೀರಬಹುದು.
Related Articles
Advertisement
ಮಕ್ಕಳಲ್ಲಿ ದೃಷ್ಟಿದೋಷದ ಲಕ್ಷಣಗಳು
3-12 ತಿಂಗಳುಗಳು
ವಸ್ತುಗಳನ್ನು ಪತ್ತೆಹಚ್ಚದಿರುವುದು
ಪರಿಚಿತ ಮುಖಗಳನ್ನು ನೋಡದೆ ಇರುವುದು
12 ತಿಂಗಳುಗಳಿಂದ-3 ವರ್ಷದವರೆಗೆ
ಮಗು ಯಾವಾಗಲು ವಸ್ತುಗಳನ್ನು ಅತೀ ಹತ್ತಿರದಲ್ಲಿ ಕಾಣುವುದು
ನಡೆದಾಡಲು ಅಥವಾ ಅಡ್ಡಾಡಲು ಕಷ್ಟಕರವಾಗುದು
ಹೆಚ್ಚಾಗಿ ಗೋಡೆಗೆ ಅಥವಾ ವಸ್ತುಗಳಿಗೆ ಬಡಿದುಕೊಳ್ಳುವುದು
ದೂರದಲ್ಲಿ ಆಗುವ ವಿಷಯಗಳ್ಳನ್ನು ಗುರುತಿಸದಿರುವುದು
3 ವರ್ಷಗಳ ಅನಂತರ
ಯಾವಾಗಲೂ ಕಣ್ಣುಗಳನ್ನು ಉಜ್ಜುವುದು
ದೂರದ ಆಗುಹೋಗುಗಳನ್ನು ಗುರುತಿಸದಿರುವುದು
ಹತ್ತಿರದಿಂದ ವಸ್ತುಗಳನ್ನು ನೋಡುವುದು
ಕಣ್ಣು ನೋವು
ವಕ್ರೀಕಾರಕ ದೋಷದ ಕಾರಣಗಳು
ವಕ್ರೀಕಾರಕ ದೋಷವು ಆನುವಂಶಿಕ. ಹೆಚ್ಚಿನ ವಕ್ರೀಕಾರಕ ದೋಷವು ಪೋಷಕರಿಂದ ಆನುವಂಶಿಕವಾಗಿ ಬಂದಿರುತ್ತದೆ.
ಅತೀ ಹೆಚ್ಚು ಸಮೀಪದ ಕೆಲಸ ಮತ್ತು ಡಿಜಿಟಲ್ ಸಾಧನಗಳ ಹೆಚ್ಚಿನ ಬಳಕೆ.
ಮಕ್ಕಳ ಅವಧಿಪೂರ್ವ ಜನನ ಅಥವಾ ತಾಯಿಯ ಸೋಂಕು.
ಕಣ್ಣಿನ ಬೆಳವಣಿಗೆಗೆ ಸಂಬಂಧಿತ ಚಟುವಟಿಕೆಗಳು, ಕಣ್ಣಿನ ಅಕ್ಷಿಪಟಲದ ಉದ್ದದ ವಿಸ್ತರಣೆ
ಪೋಷಣೆಯ ಕೊರತೆ
ದೃಷ್ಟಿದೋಷದ ದುಷ್ಪರಿಣಾಮಗಳು
ಅಂಬ್‌ಲ್ಯೋಪಿಯಾ
ಕೂಸುಕಣ್ಣು ಅಥವಾ ಮೆಳ್ಳೆಗಣ್ಣು
ರೆಟಿನಾದಲ್ಲಿ ಆಗುವ ವ್ಯತಾಸ
ದೃಷ್ಟಿದೌರ್ಬಲ್ಯ
ವಕ್ರೀಕಾರಕ ದೋಷದ ನಿರ್ವಹಣೆ ಕನ್ನಡಕ ಮತ್ತು ಕಾಂಟಾಕ್ಟ್ ಲೆನ್ಸ್ ವಕ್ರೀಕಾರಕ ದೋಷದ ನಿರ್ವಹಣೆಯ ಮೊದಲ ಮತ್ತು ಮೂಲ ಪರಿಹಾರ. ಇದು ಹೆಚ್ಚಿನ ಕಣ್ಣಿನ ತಜ್ಞರ ಆಯ್ಕೆಯಾಗಿದೆ. ಏಕೆಂದರೆ ಈ ಚಿಕಿತ್ಸೆಯ ಪರಿಣಾಮವು ತತ್‌ಕ್ಷಣವೇ ಸ್ಪಷ್ಟವಾಗಿ ಗೋಚರಿಸುತ್ತದೆ ಮತ್ತು ದೃಷ್ಟಿಯ ಸ್ಪಷ್ಟತೆಯನ್ನು ಸುಧಾರಿಸುತ್ತದೆ.
ಚಿಕಿತ್ಸೆಯ ಆಯ್ಕೆಗಳು
ಕನ್ನಡಕ ವಕ್ರೀಕಾರಕ ದೋಷದ ಪ್ರಕಾರದ ಅನುಗುಣವಾಗಿ
ಕಾಂಟಾಕ್ಟ್ ಲೆನ್ಸ್ ಅಥವಾ ವಿಶೇಷ ಕಾಂಟ್ಯಾಕ್ಟ್ ಲೆನ್ಸ್ ಗಳು- ವಕ್ರೀಕಾರಕ ದೋಷಕ್ಕೆ ಅನುಗುಣವಾಗಿ
ವಕ್ರೀಕಾರಕ ಶಸ್ತ್ರಚಿಕಿತ್ಸೆಗಳು
ಜೀವನ ಶೈಲಿಯ ಮಾರ್ಪಾಡು
ಪರದೆಯ ಸಮಯವನ್ನು ನಿರ್ಬಂಧಿಸಿ, ಡಿಜಿಟಲ್ ಉಪಕರಣಗಳ ಬಳಕೆ ಮಿತಗೊಳಿಸಿ
20-20-20 ನಿಯಮ (ಪ್ರತೀ 20 ನಿಮಿಷಕ್ಕೆ 20 ಸೆಕೆಂಡುಗಳ ವಿರಾಮವನ್ನು ತೆಗೆದುಕೊಳ್ಳಿ ಮತ್ತು 20 ಅಡಿ ದೂರವನ್ನು ನೋಡಿ)
ಹೊರಾಂಗಣ ಚಟುವಟಿಕೆಗಳನ್ನು ಹೆಚ್ಚಿಸಿ, ಸಮೀಪದ ಕೆಲಸ ಮಿತಿಗೊಳಿಸಿ
ಹಸುರು ತರಕಾರಿಗಳು, ಕ್ಯಾರೆಟ್, ಮೀನು ಆಹಾರ (ವಿಟಮಿನ್ ಸಿ ಪೂರಕಗಳು) ಮತ್ತು ಒಮೆಗಾ 3 ಕೊಬ್ಬಿನಂಶ ಆಹಾರಗಳಲ್ಲಿ ಹೆಚ್ಚಿಸಿ
ಸಾರಾಂಶ
ಜಾಗತಿಕವಾಗಿ ವಕ್ರೀಕಾರಕ ದೋಷದಿಂದ 5ರಿಂದ 15 ವರ್ಷ ನಡುವಣ ವಯಸ್ಸಿನ 12.8 ಮಿಲಿಯನ್ ಮಕ್ಕಳು ದೃಷ್ಟಿಹೀನರಾಗಿದ್ದಾರೆ ಎಂದು ಅಂದಾಜಿಸಲಾಗಿದೆ. ಜಾಗತಿಕವಾಗಿ ಎಲ್ಲ ವಯೋಮಾನದ 800 ಮಿಲಿಯನ್‌ಗಿಂತಲೂ ಹೆಚ್ಚು ಜನರು ದೃಷ್ಟಿಹೀನತೆಯನ್ನು ಹೊಂದಿರುವುದು ಸರಿಪಡಿಸದ ವಕ್ರೀಕಾರಕ ದೋಷಗಳಿಂದ ಮಾತ್ರ. ಸಮಯೋಚಿತ ಚಿಕಿತ್ಸೆ ಮತ್ತು ನಿರ್ವಹಣೆಯನ್ನು ಒದಗಿಸುವ ಮೂಲಕ ಮತ್ತು ಜೀವನಶೈಲಿಯ ಬದಲಾವಣೆಯನ್ನು ತರುವುದರಿಂದ ಈ ಹೊರೆಯನ್ನು ಕಡಿಮೆ ಮಾಡಬಹುದಾಗಿದೆ.
ವಿಶ್ವ ದೃಷ್ಟಿ ದಿನಾಚರಣೆ ಅ. 13, 2022 “ಕಣ್ಣುಗಳು ಮುಖದ ಕನ್ನಡಿಯಿದ್ದಂತೆ’
ಪ್ರತೀ ವರ್ಷ ಅಕ್ಟೋಬರ್ ತಿಂಗಳ 2ನೇ ಗುರುವಾರ ವಿಶ್ವ ದೃಷ್ಟಿ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಈ ವರ್ಷದ ವಿಶ್ವ ದೃಷ್ಟಿ ದಿನಾಚರಣೆಯ ವಿಷಯವು “ನಿಮ್ಮ ಕಣ್ಣುಗಳನ್ನು ಪ್ರೀತಿಸಿ’ ಎಂಬುದಾಗಿದೆ.
ಜಾಗತಿಕವಾಗಿ ಕಡಿಮೆ ಎಂದರೂ 2.2 ಬಿಲಿಯನ್ ಜನರು ಕಣ್ಣಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ ಮತ್ತು ವಿಭಿನ್ನ ರೀತಿಯ ದೃಷ್ಟಿ ಸಮಸ್ಯೆಗಳು ಆಯಾಯ ಪ್ರಾಯದವರಲ್ಲಿ ಕಾಣಿಸಿಕೊಳ್ಳಬಹುದು. ಮಕ್ಕಳಲ್ಲಿ ವಕ್ರೀಕಾರಕ ದೋಷ, ಮಧ್ಯವಯಸ್ಕರಲ್ಲಿ ಅಥವಾ ವಯಸ್ಕರಲ್ಲಿ ಪ್ರಸºಯೋಪಿಯಾ (ಮುಪ್ಪಿನಲ್ಲಿ ಸಹಜವಾಗಿ ಉಂಟಾಗುವ ದೂರದೃಷ್ಟಿ ದೋಷ) ಹಾಗೂ ಈ ಆಧುನಿಕ ಯುಗದ ಆಧುನಿಕ ಕಾಯಿಲೆಗಳಾದ ಸಕ್ಕರೆ ಕಾಯಿಲೆ, ಅಧಿಕ ರಕ್ತದ ಒತ್ತಡದಿಂದ ಕಣ್ಣಿನಲ್ಲಿ ಬದಲಾವಣೆಗಳು ಆಗಬಹುದು.
ಆದ್ದರಿಂದ ಪ್ರತೀ ವರ್ಷ ಕಣ್ಣಿನ ಪರೀಕ್ಷೆ ಮಾಡಿಸುವುದು ಅನಿವಾರ್ಯವಾಗಿದೆ. ಈಗಿನ ಧೂಳುಮಿಶ್ರಿತ ವಾತಾವರಣ ಹಾಗೂ ವಿಪರೀತ ಬಿಸಿಲಿನಿಂದ ಕಣ್ಣುಗಳನ್ನು ಕಾಪಾಡಲು ಪ್ರೊಟೆಕ್ಷನ್ ಗ್ಲಾಸಸ್ ಅಂದರೆ ಕಪ್ಪು ಕನ್ನಡಕದಂತಹ ಉಪಕರಣಗಳನ್ನು ಬಳಸುವುದು ಉತ್ತಮ.
ನಿಮ್ಮ ಕಣ್ಣುಗಳನ್ನು ಪ್ರೀತಿಸಿ, ಅವುಗಳ ಆರೈಕೆ ಮಾಡಿ; ಯಾಕೆಂದರೆ ಅವು ನಿಮಗೆ ಜಗತ್ತನ್ನು ತೋರಿಸುತ್ತವೆ.
ಮಕ್ಕಳಲ್ಲಿ ಕಂಡುಬರುವ ವಕ್ರೀಕಾರಕ ದೋಷದ ವಿಧಗಳು
ಸಮೀಪ ದೃಷ್ಟಿ: ದೂರದ ವಸ್ತುಗಳನ್ನು ನೋಡುವಲ್ಲಿ ತೊಂದರೆ
ದೂರದೃಷ್ಟಿ: ಹತ್ತಿರದ ವಸ್ತುಗಳನ್ನು ನೋಡುವಲ್ಲಿ ತೊಂದರೆ
ಅಸ್ಟಿಗ್‌ಮ್ಯಾಟಿಸ್ಮ್: ವಸ್ತುಗಳು ವಕ್ರಾಕಾರವಾಗಿ ಕಾಣಿಸುವುದು
ದೃಷ್ಟಿ ಸಮಸ್ಯೆಗಳನ್ನು ಗುರುತಿಸುವಲ್ಲಿ ಮತ್ತು ಹೊರೆಯನ್ನು ಕಡಿಮೆ ಮಾಡುವಲ್ಲಿ ಪೋಷಕರ ಪಾತ್ರ
ಚಿಕ್ಕ ಮಕ್ಕಳಿಗೆ ಮಾತಿನ ಸಂವಹನದಲ್ಲಿ ಮಿತಿ ಇರುವುದರಿಂದ ಎಲ್ಲ ಮಕ್ಕಳು ಅವರು ಎದುರಿಸುತ್ತಿರುವ ತೊಂದರೆಗಳು ಅಥವಾ ದೃಷ್ಟಿ ಸಮಸ್ಯೆಯನ್ನು ಹಂಚಿಕೊಳ್ಳುವುದಿಲ್ಲ. ಆದ್ದರಿಂದ ಪೋಷಕರು ತಮ್ಮ ಮಕ್ಕಳು ಎದುರಿಸುತ್ತಿರುವ ಯಾವುದೇ ಕಣ್ಣಿನ ಸಮಸ್ಯೆಗಳನ್ನು ಎಚ್ಚರಿಕೆಯಿಂದ ಗಮನಿಸಬೇಕು ಮತ್ತು ನಿಯಮಿತವಾಗಿ ನೇತ್ರಶಾಸ್ತ್ರಜ್ಞರಿಂದ ಕಣ್ಣುಗಳನ್ನು ಪರೀಕ್ಷಿಸಬೇಕು.
-ರಾಧಿಕಾ ಸಹಾಯಕ ಪ್ರಾಧ್ಯಾಪಕರು ಡಿಪಾರ್ಟ್‌ಮೆಂಟ್ ಒಫ್ ಆಪ್ತೋಮೆಟ್ರಿ, ಎಂಸಿಎಚ್‌ಪಿ, ಮಾಹೆ, ಮಣಿಪಾಲ
-ಜುಡಿತ್ ಶೆಫಾಲಿ ಜತ್ತನ್ನ ಸಹಾಯಕ ಪ್ರಾಧ್ಯಾಪಕರು, ಡಿಪಾರ್ಟ್‌ಮೆಂಟ್ ಒಫ್ ಆಪ್ತೋಮೆಟ್ರಿ, ಎಂಸಿಎಚ್‌ಪಿ, ಮಾಹೆ, ಮಣಿಪಾಲ
(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಆಪ್ತಮಾಲಜಿ ವಿಭಾಗ, ಕೆಎಂಸಿ, ಮಾಹೆ, ಮಂಗಳೂರು)