ಬೆಂಗಳೂರು: ಕುಡಿಯುವ ನೀರು ಸರಬರಾಜು ಹಾಗೂ ಜಾನುವಾರುಗಳಿಗೆ ಮೇವು ಸರಬರಾಜು ಖಾತರಿ ಪಡಿಸಿಕೊಳ್ಳಲು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಪ್ರತಿ ದಿನ ಕಡ್ಡಾಯವಾಗಿ ಗ್ರಾಮಗಳಿಗೆ ಭೇಟಿ ನೀಡುವಂತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೂಚನೆ ನೀಡಿದ್ದಾರೆ.
ಬರ ಪರಿಸ್ಥಿತಿ ಕುರಿತು ಬುಧವಾರ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಕಾರ್ಯ ನಿರ್ವಹಣಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದ ಅವರು, ಸಮಸ್ಯೆ ಇರುವ ಗ್ರಾಮಗಳಲ್ಲಿ ಸ್ಥಳದಲ್ಲಿಯೇ ಪರಿಹಾರ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ. ಜನ ಜಾನುವಾರುಗಳಿಗೆ ಕುಡಿಯುವ ನೀರು ಹಾಗೂ ಮೇವಿನ ಸರಬರಾಜಿನಲ್ಲಿ ಯಾವುದೇ ವ್ಯತ್ಯಯ ಉಂಟಾಂಗದಂತೆ ಎಚ್ಚರ ವಹಿಸಿ ಎಂದು ಸೂಚಿಸಿದರು.
ಬಿಲ್ ಪಾವತಿಗೆ ವಾರದ ಗಡುವು: ಕುಡಿಯುವ ನೀರು ಸರಬರಾಜು ಮಾಡುವ ಟ್ಯಾಂಕರ್‌ಗಳಿಗೆ ಏಪ್ರಿಲ್ ತಿಂಗಳವರೆಗಿನ ಬಾಕಿ ಬಿಲ್‌ನ್ನು ವಾರದೊಳಗೆ ಪಾವತಿ ಮಾಡಬೇಕು. ಇನ್ನು ಮುಂದೆ 15 ದಿನಗಳಿಗೊಮ್ಮೆ ನೀರಿನ ಬಿಲ್ ಪಾವತಿ ಮಾಡಬೇಕು. ಅವಧಿ ಮುಗಿದ ಮೇಲೆ ಬಿಲ್ ಸಲ್ಲಿಸಿದರೆ, ಪಿಡಿಒ, ಇಓಗಳೇ ಹೊಣೆಗಾರರು. ಅವರ ವಿರುದ್ಧ ಕ್ರಮ ಕೈಗೊಳ್ಳಿ.
ಕುಡಿಯುವ ನೀರು ಸರಬರಾಜು ಮಾಡುವ ಟ್ಯಾಂಕರ್‌ಗಳ ಚಲನ ವಲನ ತಿಳಿಯಲು ಜಿಪಿಎಸ್ ಅಳವಡಿಸಲು ಕ್ರಮ ಕೈಗೊಳ್ಳಬೇಕು. ರಾಜ್ಯದಲ್ಲಿ 1,873 ಕೊಳವೆ ಬಾವಿಗಳನ್ನು ಬಾಡಿಗೆ ಪಡೆಯಲಾಗಿದೆ. ಅಗತ್ಯ ಬಿದ್ದರೆ, ಖಾಸಗಿಯವರಿಂದ ಹೆಚ್ಚಿನ ಕೊಳವೆ ಬಾವಿಗಳನ್ನು ಬಾಡಿಗೆ ಪಡೆಯಿರಿ. ಬರ ಪರಿಹಾರ ಕಾಮಗಾರಿಗೆ ಹಣದ ಕೊರತೆಯಿಲ್ಲ. ಹಣ ಸೋರಿಕೆಯಾಗುವುದನ್ನು ಅಧಿಕಾರಿಗಳು ತಡೆಯಬೇಕು ಎಂದು ಸೂಚಿಸಿದರು.
ಕೊಡಗು ನೆರೆ ಅನಾಹುತ ತಡೆಗೆ ಮುಂಜಾಗ್ರತೆ: ಕೊಡಗಿನಲ್ಲಿ ಮುಂಗಾರು ಹಂಗಾಮಿನಲ್ಲಿ ನೆರೆ ಅನಾಹುತ ತಡೆಗಟ್ಟಲು ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳಿ ಎಂದು ಸಿಎಂ ಸೂಚಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕೊಡಗು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಕೊಡಗಿನಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಭೂ ಕುಸಿತವಾಗುವ ಸ್ಥಳಗಳನ್ನು ಗುರುತಿಸಲಾಗಿದ್ದು, ಈ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಕೈಗೊಂಡಿದೆ.
ಸತತ ಮೇಲ್ವಿಚಾರಣೆಗೆ ನೋಡಲ್ ಅಧಿಕಾರಿಯನ್ನು ನೇಮಕ ಮಾಡಲಾಗಿದೆ. ಪ್ರವಾಹ ಉಂಟಾದಲ್ಲಿ ತಕ್ಷಣವೇ ಪರಿಹಾರ ಕ್ರಮ ಕೈಗೊಳ್ಳಲು 8 ತಂಡಗಳನ್ನು ರಚಿಸಲಾಗಿದೆ. ಜೂನ್ ಕೊನೆ ವಾರದಲ್ಲಿ ರಾಷ್ಟ್ರೀಯ ವಿಪತ್ತು ಪರಿಹಾರ ತಂಡವನ್ನು ಕೊಡಗಿಗೆ ನಿಯೋಜಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಹಾರಂಗಿ ಜಲಾಶಯದ ಹೂಳೆತ್ತುವ ಕಾರ್ಯಕ್ಕೆ ಜಲ ಸಂಪನ್ಮೂಲ ಇಲಾಖೆ ಕ್ರಮ ಕೈಗೊಳ್ಳುತ್ತಿದ್ದು, ಅಗ್ನಿಶಾಮಕ ಹಾಗೂ ಇತರ ಇಲಾಖೆಗಳಿಗೆ ರಕ್ಷಣಾ ಕಾರ್ಯಕ್ಕೆ ಅಗತ್ಯವಿರುವ ಪರಿಕರಗಳ ಖರೀದಿಗೆ ಕ್ರಮ ಕೈಗೊಳ್ಳಲಾಗಿದೆ. ನೆರೆ ಸಂತ್ರಸ್ಥರಿಗೆ ಗೃಹ ನಿರ್ಮಾಣ ಕಾರ್ಯ ಬಹುತೇಕ ಪೂರ್ಣಗೊಂಡಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಇದೇ ವೇಳೆ, ನಿರ್ಮಾಣವಾಗಿರುವ ಎರಡು ಬಡಾವಣೆಗಳಿಗೆ ರಸ್ತೆ ಸಂಪರ್ಕ, ಒಳ ಚರಂಡಿ ಮತ್ತಿತರ ಮೂಲ ಸೌಕರ್ಯ ಕಲ್ಪಿಸಲು ಪ್ರಸ್ತಾವನೆಗೆ ಅನುಮೋದನೆ ನೀಡಿದ ಮುಖ್ಯಮಂತ್ರಿಗಳು, ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚಿಸಿದರು.