Advertisement

ಸ್ಲಂ ಬಡಾವಣೆಗೆ ವೈದ್ಯಕೀಯ ತಂಡ ಭೇಟಿ

12:05 PM Nov 16, 2018 | Team Udayavani |

ವಾಡಿ: ಕೀಲು ನೋವು ಹಾಗೂ ವಿಪರಿತ ಜ್ವರ ಪ್ರಕರಣಗಳು ಕಂಡು ಬಂದ ಪಟ್ಟಣದ ವಾರ್ಡ್‌ 15ರ ಸರ್ದಾರ್ಜಿ ಸ್ಲಂ
ಬಡಾವಣೆಗೆ ಗುರುವಾರ ಜಿಲ್ಲಾ ವೈದ್ಯಕೀಯ ಕೀಟ ಶಾಸ್ತ್ರಜ್ಞ ತಂಡ ಭೇಟಿ ನೀಡಿ ರೋಗದ ಮೂಲ ಪತ್ತೆ ಹಚ್ಚು ಕಾರ್ಯ ಮಾಡಿದರೆ, ಇನ್ನೊಂದೆಡೆ ಪುರಸಭೆ ಪೌರಕಾರ್ಮಿಕರು ಚರಂಡಿ ಸ್ವತ್ಛತೆಗೆ ಮುಂದಾಗಿದ್ದು ಕಂಡು ಬಂದಿತು.

Advertisement

ಪಟ್ಟಣದ ಪುರಸಭೆ ವ್ಯಾಪ್ತಿಯ ವಾರ್ಡ್‌ 15ರ ಶಿವಾಜಿ ಚೌಕ್‌ ಹಾಗೂ ಸರ್ದಾರ್ಜಿ ಏರಿಯಾದಲ್ಲಿ ಹಲವು ಕುಟುಂಬಗಳು ಕಳೆದ ಅನೇಕ ದಿನಗಳಿಂದ ಕೀಲು ನೋವು, ಜ್ವರ ಹಾಗೂ ಆಯಾಸದಿಂದ ಬಳಲುವ ಮೂಲಕ ಹಾಸಿಗೆ ಹಿಡಿದಿದ್ದರು. ವಿಷಯ ತಿಳಿದು ಬಡಾವಣೆ ಆಶಾ ಕಾರ್ಯಕರ್ತೆಯೊಂದಿಗೆ ಪ್ರಕರಣದ ಜಾಡು ಹಿಡುದು ಹೊರಟ ಜಿಲ್ಲಾ ಕೀಟ ಶಾಸ್ತ್ರಜ್ಞ ಚಾಮರಾಜ ದೊಡ್ಡಮನಿ, ರೋಗಿಗಳ ಮನೆಗಳಿಗೆ ಭೇಟಿ ನೀಡಿ ಅಗತ್ಯ ಮಾಹಿತಿ ಕಲೆಹಾಕಿದರು.

ಈ ವೇಳೆ ಮಾತನಾಡಿದ ಕೀಟ ಶಾಸ್ತ್ರಜ್ಞ ಚಾಮರಾಜ ದೊಡ್ಡಮನಿ, ಬಡಾವಣೆ ರೋಗಿಗಳ ರಕ್ತದ ಮಾದರಿ ಕಲೆ ಹಾಕಿದ್ದೇವೆ. ಸೊಳ್ಳೆ ಉತ್ಪತಿಸುವ ಲಾರ್ವಾ ಇರುವುದು ಪತ್ತೆಯಾಗಿದೆ. ಶುಕ್ರವಾರದಿಂದ ಮನೆಮನೆಗೆ ಹೋಗಿ ಇಡೀ ಬಡಾವಣೆ ಜನರ ರಕ್ತದ ಮಾದರಿ ಪಡೆಯಲಾಗುವುದು.
 
ಬಡಾವಣೆಯಲ್ಲಿ ಸಿಂಪರಣೆ ಮಾಡಲು ಪುರಸಭೆ ನೈರ್ಮಾಲ್ಯಾಧಿಕಾರಿಗೆ ಔಷಧ ನೀಡಲಾಗಿದೆ. ಫಾಗಿಂಗ್‌ ಮಾಡಿಸಲು ಹೇಳಿದ್ದೇವೆ. ರೋಗ ಹತೋಟಿಗೆ ತರಲು ಆರೋಗ್ಯ ಇಲಾಖೆ ಎಲ್ಲ ರೀತಿಯ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು.

ತಾಲೂಕು ಅರೋಗ್ಯ ಶಿಕ್ಷಣಾಧಿಕಾರಿ ಜತೆಗೆ ನ್ಯೂಡಲ್‌ ಟೆಕ್ನಾಲಿಸ್ಟ್‌ ಅನೀಲ ಚಿನ್ಮಳ್ಳಿ ಮತ್ತು ಲಕ್ಷ್ಮಣ ರಾಠೊಡ, ಆರೋಗ್ಯ ಸಹಾಯಕಿಯರು ಇದ್ದರು. ಈ ಕುರಿತು ನ.15ರಂದು ಕೀಲು ನೋವಿಗೆ ತತ್ತರಿಸಿದ ಸ್ಲಂ ಜನ ಎಂಬ ಶಿರ್ಷಿಕೆಯಡಿ ವಿಶೇಷ ವರದಿ ಪ್ರಕಟವಾಗಿದ್ದನ್ನು ಗಮನಿಸಬಹುದು.

ಕೀಲು ನೋವು ಮತ್ತು ವಿಪರಿತ ಜ್ವರ ಕಾಣಿಸಿಕೊಂಡರೆ ಅದು ಚಿಕುನ್‌ ಗುನ್ಯಾ ರೋಗದ ಲಕ್ಷಣವಾಗಿರುತ್ತದೆ. ಇದು ಸೊಳ್ಳೆ ಕಡಿತದಿಂದಲೇ ಹರಡುತ್ತದೆ. ಕೀಟ ಶಾಸ್ತ್ರಜ್ಞರು ವಾಡಿ ಪಟ್ಟಣಕ್ಕೆ ಭೇಟಿ ನೀಡಿದ್ದು, ಹತ್ತಾರು ಜನರ ರಕ್ತ ಮಾದರಿ ಪಡೆದಿದ್ದಾರೆ. ರಕ್ತ ಪರೀಕ್ಷೆಯಿಂದ ರೋಗ ಪತ್ತೆಯಾಗಲಿದೆ. ಬಡಾವಣೆಯಲ್ಲಿನ ಸೊಳ್ಳೆಗಳನ್ನೂ ಪರೀಕ್ಷೆಗೆ ಒಳಪಡಿಸಲಾಗುವುದು. ಈ ಕುರಿತು ಆರೋಗ್ಯ ಇಲಾಖೆ ನೇತೃತ್ವದಲ್ಲಿ ಸೋಮವಾರ ಪುರಸಭೆ ಅಧಿಕಾರಿಗಳ ಸಭೆ ನಡೆಸುತ್ತೇವೆ.  
 ಡಾ| ಸುರೇಶ ಮೇಕಿನ್‌, ತಾಲೂಕು ವೈದ್ಯಾಧಿಕಾರಿಗಳು ಚಿತ್ತಾಪುರ

Advertisement
Advertisement

Udayavani is now on Telegram. Click here to join our channel and stay updated with the latest news.

Next