ಕೆ.ಆರ್.ನಗರ: ಆರೋಗ್ಯ ಇಲಾಖೆಯಿಂದ ಕ್ಷಿಪ್ರ ಆರೋಗ್ಯ ಕಾರ್ಯಪಡೆಯು ಪ್ರತಿ ಮನೆಗಳಿಗೆ ತೆರಳಿ ಡೆಂ ಘೀ, ಚಿಕೂನ್‌ಗುನ್ಯಾ ಮತ್ತಿತರ ಮಾರಕ ಕಾಯಿಲೆಗಳ ನಿಯಂತ್ರಣದ ಬಗ್ಗೆ ಜಾಗೃತಿ ಮೂಡಿಸುತ್ತಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಕೆ.ಆರ್.ಮಹೇಂದ್ರಪ್ಪ ಹೇಳಿದರು.
ಪಟ್ಟಣದ ಮಧುವನಹಳ್ಳಿ ಬಡಾವಣೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳ ಕಚೇರಿ ಆಶ್ರಯದಲ್ಲಿ ನಡೆದ “ನಾಗರಿಕರಿಗೊಂದು ಸವಾಲು’ ಆರೋಗ್ಯ ಜಾಗೃತಿ ಪ್ರಯುಕ್ತ ಸಮೀಕ್ಷಾ ತಂಡದೊಂದಿಗೆ ಭೇಟಿ ನೀಡಿ ಪರಿಶೀಲಿಸಿ ಅವರು ಮಾತನಾಡಿದರು.
ಇದು ನೂತನ ಕಾರ್ಯಕ್ರಮವಾಗಿದ್ದು ಸಾರ್ವಜನಿಕರ ಅರಿವಿನ ಬಗ್ಗೆ ನಾವೇ ಪ್ರಶ್ನಿಸಿ ಉತ್ತರ ಪಡೆಯಲಿದ್ದೇವೆ. ಆರೋಗ್ಯವಂತ ಸಮಾಜ ನಿರ್ಮಾಣಕ್ಕಾಗಿ ನಾಗರಿಕರು ಸಹಕಾರ ನೀಡಬೇಕು. ಸಾಂಕ್ರಾಮಿಕ ರೋಗಗಳ ನಿಯಂತ್ರಣ ಎಲ್ಲರ ಜವಾಬ್ದಾರಿಯಾಗಿದೆ ಎಂದರು.
ಪ್ರತಿಯೊಬ್ಬರೂ ತಮ್ಮ ಮನೆಗಳಲ್ಲಿರುವ ನೀರಿನ ತೊಟ್ಟಿ, ಡ್ರಮ್, ಸಂಪುಗಳನ್ನು ವಾರಕ್ಕೊಮ್ಮೆ ಸ್ವತ್ಛಗೊಳಿಸಬೇಕು. ಆರೋಗ್ಯ ಇಲಾಖೆ ಎಷ್ಟೇ ಜಾಗೃತಿ ಮೂಡಿಸಿದರೂ ಸಾರ್ವಜನಿಕರು ಮತ್ತು ಸ್ಥಳೀಯರಲ್ಲಿ ಕಾಯಿಲೆಗಳ ಲಕ್ಷಣ ಹಾಗೂ ಅವುಗಳು ಹರಡುವ ಬಗ್ಗೆ ಅರಿವು ಮೂಡಿದಾಗ ಮಾತ್ರ ರೋಗ ತಡೆಗಟ್ಟಲು ಸಾಧ್ಯ ಎಂದರು.
ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ 60,370 ಮನೆಗಳನ್ನು ತಲುಪುವ ಗುರಿ ಹೊಂದಿದ್ದು, ಈಗಾಗಲೇ ಶೇ.80 ಗುರಿ ಸಾಧಿಸಲಾಗಿದೆ. ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳ ಮಾರ್ಗದರ್ಶನದಲ್ಲಿ 17 ವೈದ್ಯಾಧಿಕಾರಿಗಳು, 34 ಆರೋಗ್ಯ ಸಹಾಯಕರು, 10 ಮಂದಿ ಮೇಲ್ವಿಚಾರಕರು ಮತ್ತು 207 ಆಶಾ ಕಾರ್ಯಕರ್ತೆಯರನ್ನು ಈ ಕಾರ್ಯಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂದರು.
ಈ ವೇಳೆ, ಹಿರಿಯ ತಾಲೂಕು ಆರೋಗ್ಯ ಮೇಲ್ವಿಚಾರಕ ಕೆ.ವಿ.ರಮೇಶ್, ಆರೋಗ್ಯ ಶಿಕ್ಷಣಾಧಿಕಾರಿ ಸಿ.ಎಂ.ರೇಖಾ, ಕಿರಿಯ ಆರೋಗ್ಯ ಸಹಾಯಕರಾದ ಎಚ್.ಆರ್.ರುಕ್ಮಿಣಿ, ಕುಮಾರಿ ಲಕ್ಷ್ಮೀಬಾಯಿ, ಅಂಬರೀಶ್, ಸ್ಥಳೀಯರಾದ ಮೋಹನ್‌ಕುಮಾರಿ, ಎಂ.ಕೆ.ಜ್ಯೋತಿ, ಮೀನಾಕ್ಷಿ, ಜಯಮ್ಮ, ರಾಮಯ್ಯ, ಸಿದ್ದರಾಮಯ್ಯ ಇತರರಿದ್ದರು.