ಬೆಂಗಳೂರು:ಕೊನೆಗೂ ನೂತನ ಲೋಕಾಯುಕ್ತರಾಗಿ ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿ ಅವರ ನೇಮಕಕ್ಕೆ ರಾಜ್ಯಪಾಲ ವಜುಬಾಯಿ ವಾಲಾ ಗುರುವಾರ ಅಂಕಿತ ಹಾಕಿದ್ದಾರೆ.
ರಾಜಕೀಯ ಹಗ್ಗಜಗ್ಗಾಟ ಹಾಗೂ ಅರ್ಹತೆಯ ಗೊಂದಲಗಳಿಂದಾಗಿ ಕಳೆದೊಂದು ವರ್ಷದಿಂದ ಖಾಲಿ ಇದ್ದ ಲೋಕಾಯುಕ್ತ ಹುದ್ದೆಯ ನೇಮಕಾತಿಗಾಗಿ, ಜ.9ರಂದು ಉನ್ನತ ಮಟ್ಟದ ಸಭೆ ನಡೆಸಿದ್ದ ರಾಜ್ಯ ಸರ್ಕಾರ ಲೋಕಾಯುಕ್ತ ಹುದ್ದೆಗೆ ಹೈಕೋರ್ಟ್ ನಿವೃತ್ತ ನ್ಯಾಯ ಮೂರ್ತಿ ಪಿ.ವಿಶ್ವನಾಥ ಶೆಟ್ಟಿ ಅವರ ಹೆಸರನ್ನು ಶಿಫಾರಸು ಮಾಡಿ ರಾಜ್ಯಪಾಲರಿಗೆ ಕಳುಹಿಸಲಾಗಿತ್ತು.
ಏತನ್ಮಧ್ಯೆ ಎಸ್.ಆರ್.ಹಿರೇಮಠ್ ಅವರು ವಿಶ್ವನಾಥ ಶೆಟ್ಟಿ ಅವರನ್ನು ಲೋಕಾಯುಕ್ತರನ್ನಾಗಿ ನೇಮಕ ಮಾಡುವುದಕ್ಕೆ ವಿರೋಧ ವ್ಯಕ್ತಪಡಿಸಿ, ರಾಜ್ಯಪಾಲರಿಗೆ ದೂರು ನೀಡಿದ್ದರು. ಬಳಿಕ ರಾಜ್ಯಪಾಲರು ಈ ಬಗ್ಗೆ ಸ್ಪಷ್ಟನೆ ಕೊಡುವಂತೆ ಕೇಳಿ ವಿಶ್ವನಾಥ ಶೆಟ್ಟಿ ಅವರ ಹೆಸರನ್ನು ರಾಜ್ಯಪಾಲರು ವಾಪಸ್ ಕಳುಹಿಸಿದ್ದರು. ಸರ್ಕಾರ ನೀಡಿದ ವಿವರಣೆಯ ಬಳಿಕ ಕೊನೆಗೂ ರಾಜ್ಯಪಾಲರು ವಿಶ್ವನಾಥ ಶೆಟ್ಟಿ ಅವರನ್ನು ಲೋಕಾಯುಕ್ತರನ್ನಾಗಿ ನೇಮಕ ಮಾಡುವ ಶಿಫಾರಸಿಗೆ ಅಂಕಿತ ಹಾಕಿದ್ದಾರೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಭ್ರಷ್ಟಾಚಾರದ ಆರೋಪದ ಹಿನ್ನೆಲೆಯಲ್ಲಿ ನ್ಯಾ.ಭಾಸ್ಕರ್‌ರಾವ್ 2015ರ ಡಿಸೆಂಬರ್ 8ರಂದು ಲೋಕಾಯುಕ್ತ ಹುದ್ದೆಗೆ ರಾಜೀನಾಮೆ ಕೊಟ್ಟಿದ್ದರು. ಅದಾದ ಬಳಿಕ ಛತ್ತೀಸ್‌ಗಢ ಹೈಕೋರ್ಟ್‌ನ ನಿವೃತ್ತ ಮುಖ್ಯನ್ಯಾಯಮೂರ್ತಿ, ರಾಜ್ಯ ಮಾನವ ಹಕ್ಕುಗಳ ಆಯೋಗದ ಮಾಜಿ ಅಧ್ಯಕ್ಷ ಹಾಗೂ ರಾಜ್ಯ ಕಾನೂನು ಆಯೋಗದ ಹಾಲಿ ಅಧ್ಯಕ್ಷ ಕನ್ನಡಿಗ ನ್ಯಾ.ಎಸ್.ಆರ್. ನಾಯಕ ಅವರನ್ನು ಲೋಕಾಯುಕ್ತರನ್ನಾಗಿ ನೇಮಕ ಮಾಡಲು ಸರ್ಕಾರ ಮುಂದಾಗಿತ್ತು. ಆದರೆ, ನ್ಯಾ.ಎಸ್.ಆರ್ .ನಾಯಕ್ ಸಹಕಾರ ಸಂಘಗಳ ನಿಯಮಗಳನ್ನು ಉಲ್ಲಂಘಿಸಿ ನಿವೇಶನ ಪಡೆದುಕೊಂಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಇವರ ನೇಮಕಕ್ಕೆ ವಿರೋಧ ವ್ಯಕ್ತವಾಗಿತ್ತು. ಎಸ್.ಆರ್ ನಾಯಕ್ ಹೆಸರನ್ನು ರಾಜ್ಯಪಾಲರು 2 ಬಾರಿ ತಿರಸ್ಕರಿಸಿದ್ದರು.