Advertisement

ಕೋಟೆಗೊಬ್ಬರು, “ಸುವರ್ಣ’ಕೋಟೆ ಕೊತ್ತಲ ಬೆಳಕು

12:22 PM Feb 03, 2018 | |

ಕೋಟೆ ಕೊತ್ತಲಗಳ ಛಾಯಾಗ್ರಹಣ ಅಷ್ಟು ಸುಲಭವಲ್ಲ. ಸೆಟೆದು ನಿಂತ ಕೋಟೆಯನ್ನು ಹಾಗೆ ಕ್ಲಿಕ್ಕಿಸುವುದು ದೊಡ್ಡ ಕೆಲಸವೂ ಅಲ್ಲ. ಆದರೆ, ಅದರ ಚರಿತೆಯನ್ನು ಅರಿಯುತ್ತಾ, ಅದರ ಭವ್ಯತೆಯನ್ನು, ಗತದ ಗತ್ತನ್ನು ಚಿತ್ರದಲ್ಲೂ ಸೆರೆಯಾಗುವಂತೆ ಬಂಧಿಸುವ ಕಲೆಗಾರಿಕೆ ಇದೆಯಲ್ಲ, ಅದು ಕಷ್ಟ. ವಿಶ್ವನಾಥ ಸುವರ್ಣ ಅವರು ಇಲ್ಲಿ ಅದನ್ನು ಸ್ವತ್ಛಂದವಾಗಿ ತೋರಿಸಿದ್ದಾರೆ.

Advertisement

ಚಂದ್ರನ ಮೇಲಿಂದ ನಿಂತು ನೋಡಿದರೆ, ಚೀನಾದ ಗೋಡೆ ಕಾಣುತ್ತದಂತೆ. ಅದನ್ನು ನಾವೂ ನೀವ್ಯಾರೂ ನೋಡಿರದ ಕಾರಣ ಅದು “ಅಂತೆ’ ಅಷ್ಟೇ. ಪ್ರಪಂಚದ ಅದ್ಭುತವೆನ್ನುವ ಆ ಮಹಾಗೋಡೆಯೊಂದರ ಪ್ರತಿರೂಪ ನಮ್ಮ ಕರುನಾಡಿನಲ್ಲಿದೆ ಎಂಬುದು ನಿಮಗೆ ಗೊತ್ತೇ? ಅಷ್ಟಕ್ಕೂ, ಅದನ್ನು ನೋಡಲು ಚಂದಿರನಲ್ಲಿಗೆ ಹೋಗಬೇಕಂತಿಲ್ಲ. ಕನ್ನಡಿಗರ ಕಣ್ಣಿಗೆ ದೂರ ಉಳಿದಿದ್ದ ಈ ಕೋಟೆಯನ್ನು ತೀರಾ ಹತ್ತಿರ ತೋರಿಸುತ್ತಿರುವ ಹೊತ್ತಗೆಯೊಂದನ್ನು ಪತ್ರಿಕಾ ಛಾಯಾಗ್ರಾಹಕ ವಿಶ್ವನಾಥ ಸುವರ್ಣ ಹೊರತಂದಿದ್ದಾರೆ. ಇದರಲ್ಲಿ ಚೀನಾದ ಮಹಾಗೋಡೆಯನ್ನು ಹೋಲುವ ಕೋಟೆಯಷ್ಟೇ ಅಲ್ಲ, ರಾಜ್ಯದ ಮೂವತ್ತು ಜಿಲ್ಲೆಗಳಲ್ಲಿ ಕಲ್ಲಿನ ಕಾವ್ಯವಾಗಿ ಅವಿತು ಕುಳಿತ, ಆಕರ್ಷಣೆಯನ್ನು ಹೊತ್ತು ನಿಂತ ಕೋಟೆಗಳ ಪುಟ್ಟ ಪುಟ್ಟ ಕತೆಗಳೇ ಇವೆ.

ಸುರಪುರ ತಾಲೂಕಿನ ಗ್ರಾಮ, ವಾಗಣಗೇರಿ ಅಂತ ಒಂದು ತಾಣ. ಬಿಜಾಪುರದ ಆದಿಲ್‌ಶಾಹನು ಒಂದನೇ ಪಿಡ್ಡನಾಯಕನಿಗೆ ಕರ್ಶಿಹಳ್ಳಿಯನ್ನು ಕೊಟ್ಟಾಗ ಅಲ್ಲಿ ಕೋಟೆ ಕಟ್ಟಿಸಿ “ವಾಗಣಗೇರಿ’ ಎಂದು ನಾಮಕರಣ ಮಾಡಿದನಂತೆ. ಇದು ಸುರಪುರ ಸಂಸ್ಥಾನದ ರಾಜಧಾನಿಯೂ ಆಗಿತ್ತು ಎಂದು ಅದರ ಹಿನ್ನೆಲೆ ಹೇಳುತ್ತಾ, ವಿಶ್ವನಾಥ ಸುವರ್ಣ ಅವರು ಅದರ ರಮ್ಯ ಚಿತ್ರವೊಂದನ್ನು ತೆಗೆದಿದ್ದಾರೆ. ಅದನ್ನು ಯಾರಿಗೇ ತೋರಿಸಿದರೂ, ಥಟ್ಟನೆ ಅವರ ಬಾಯಿಂದ ಬರುವುದು- ಇದು ಚೀನಾದ ಮಹಾಗೋಡೆಯ ಚಿತ್ರ ಎಂಬ ಉದ್ಗಾರವೇ!

ಸುರಪುರದ ವಾಗನಗೇರಿ ಕೋಟೆ

ಕೋಟೆ ಕೊತ್ತಲಗಳ ಛಾಯಾಗ್ರಹಣ ಅಷ್ಟು ಸುಲಭವಲ್ಲ. ಸೆಟೆದು ನಿಂತ ಕೋಟೆಯನ್ನು ಹಾಗೆ ಕ್ಲಿಕ್ಕಿಸುವುದು ದೊಡ್ಡ ಕೆಲಸವೂ ಅಲ್ಲ. ಆದರೆ, ಅದರ ಚರಿತೆಯನ್ನು ಅರಿಯುತ್ತಾ, ಅದರ ಭವ್ಯತೆಯನ್ನು, ಗತದ ಗತ್ತನ್ನು ಚಿತ್ರದಲ್ಲೂ ಸೆರೆಯಾಗುವಂತೆ ಬಂಧಿಸುವ ಕಲೆಗಾರಿಕೆ ಇದೆಯಲ್ಲ, ಅದು ಕಷ್ಟ. ಸುವರ್ಣ ಅವರು ಇಲ್ಲಿ ಅದನ್ನು ಸ್ವತ್ಛಂದವಾಗಿ ತೋರಿಸಿದ್ದಾರೆ.

Advertisement

ವಿಜಯಪುರದ ಕೋಟೆ 

ಚಿತ್ರದುರ್ಗ ಕೋಟೆಯ ಹೊರತಾಗಿ ರಾಜ್ಯದ ಬೇರೆಲ್ಲ ಕೋಟೆಗಳು ಅಷ್ಟೊಂದು ಪ್ರಚಾರಕ್ಕೆ ಬಂದಿರುವುದು ಕಡಿಮೆ. ಶಾಲಾ ಮಕ್ಕಳ ಪ್ರವಾಸಕ್ಕೋ, ಒಂದು ಸಿನಿಮಾ ಹಾಡಿಗೋ ಸೀಮಿತವಾಗಿ ಹೋಗುವ ಈ ಚರಿತೆಯ ಶಿಲಾವೈಭವಗಳನ್ನು ನಾಡಿನ ಮೂಲೆ ಮೂಲೆಗೆ ಹೋಗಿ ಸೆರೆಹಿಡಿದಿರುವ ಸಾಹಸವೇ ದೊಡ್ಡದು. 

ರಾಯಚೂರಿನ ಮುದುಗಲ್‌ ಕೋಟೆ 

ವಿಶ್ವನಾಥ ಸುವರ್ಣ ಅವರು ಕರ್ನಾಟಕದ ಕೋಟೆಗಳ ಕುರಿತು ರಚಿಸಿರುವ ಬೃಹತ್‌ ಛಾಯಾಚಿತ್ರಗಳ ಸಂಪುಟದ ಹೆಸರು “ಕರುನಾಡ ಕೋಟೆಗಳ ಸುವರ್ಣ ನೋಟ’. ಹೆಸರಿಗೆ ತಕ್ಕಂತೆ ಅದು ನಿಜಕ್ಕೂ ಸುವರ್ಣ ನೋಟವೇ. ಈ ಹೊತ್ತಗೆಯಲ್ಲಿ ಕಾಸರಗೋಡಿನ ಬೇಕಲ್‌ ಕೋಟೆ, ದಕ್ಷಿಣ ಕನ್ನಡದ ಉಲ್ಲಾಳ ಕೋಟೆ, ಸಕಲೇಶಪುರದ ಮಂಜರಾಬಾದ್‌ ಕೋಟೆ, ಪಾವಗಡ ಕೋಟೆ, ಹೈದರಾಲಿಯ ಜನ್ಮಸ್ಥಳವಾದ ಕೋಲಾರ ಬಳಿಯ ಬೂದಿಕೋಟೆ, ಗೋಕರ್ಣ ಬಳಿಯ ಮಿರ್ಜಾನ್‌ ಕೋಟೆ, ಚಿತ್ರದುರ್ಗದ ಏಳು ಸುತ್ತಿನ ಕೋಟೆ, ಕವಲೇದುರ್ಗ ಹಾಗೂ ಬಿದನೂರಿನ ಕೋಟೆ, ಚಂದ್ರಗುತ್ತಿಯ ಕೋಟೆಗಳು, ಬೆಂಗಳೂರಿನ ಕೋಟೆ, ಮಾಗಡಿ, ಪಾವಗಡ ಕೋಟೆ, ಮೈಸೂರಿನ ಅಂಬಾವಿಲಾಸ ಅರಮನೆ, ಚೆಲುವಾಂಬ ಅರಮನೆ, ಕಾರಂಜಿ ಮ್ಯಾನ್ಸನ್‌, ಲಲಿತ ಮಹಲ್‌, ಜಯಲಕ್ಷ್ಮಿ ಅರಮನೆ …ಹೀಗೆ ಬೀದರ್‌ ಜಿಲ್ಲೆಯ ಬಸವಕಲ್ಯಾಣ, ಭಾಲ್ಕಿಯಿಂದ ಆರಂಭಿಸಿ, ದಕ್ಷಿಣದ ಮಿರ್ಜಾನ ಕೋಟೆಯವರೆಗೆ ಎಲ್ಲ 30 ಜಿಲ್ಲೆಗಳ ಕೋಟೆ, ಅರಮನೆಗಳ ಛಾಯಾಚಿತ್ರಗಳಿವೆ. 

ಗುಲಬರ್ಗಾದ ಮಳಖೇಡ ಕೋಟೆ 

ಕೇವಲ ಛಾಯಾಚಿತ್ರವಷ್ಟೇ ಅಲ್ಲ, ಪ್ರತಿ ಕೋಟೆಯ ಬಗೆಗಿನ ಮಾಹಿತಿ, ಅಲ್ಲಿನ ಇತಿಹಾಸ, ವಾಸ್ತುಶಿಲ್ಪ, ಕೋಟೆಗೆ ಆ ಹೆಸರು ಬರಲು ಕಾರಣವೇನು, ಇತಿಹಾಸದ ಯಾವ ಯಾವ ಘಟನೆಗಳಿಗೆ ಆ ಕೋಟೆ ಸಾಕ್ಷಿಯಾಗಿದೆ, ಕೋಟೆಯ ವೈಶಿಷ್ಟéವೇನು.. ಹೀಗೆ ಒಬ್ಬ ಕುತೂಹಲಿ ಓದುಗನಿಗೆ, ಪ್ರವಾಸಿಗನಿಗೆ ಏನೇನು ಬೇಕೋ ಎಲ್ಲವನ್ನೂ ಸಂಕ್ಷಿಪ್ತವಾಗಿ ವಿವರಿಸಲಾಗಿದೆ. 

“ರಾಜ್ಯದ ಕೆಲವೇ ಕೆಲವು ಕೋಟೆಗಳನ್ನು ಹೊರತುಪಡಿಸಿ ಉಳಿದೆಲ್ಲ ಕೋಟೆಗಳ ಸ್ಥಿತಿ ತೀರಾ ಶೋಚನೀಯವಾಗಿದೆ. ಕೆಲವು ಕಡೆ ಗಿಡ-ಮರಗಳಿಂದ ಕೋಟೆಗಳು ಮುಚ್ಚಿ ಹೋಗಿದ್ದರೆ, ಇನ್ನು ಹಲವು ಕೋಟೆಗಳನ್ನು ಜನರು ಶೌಚಾಲಯವಾಗಿ ಬಳಸುತ್ತಿದ್ದಾರೆ. ನಮ್ಮ ರಾಜರ ಭವ್ಯ ಇತಿಹಾಸವನ್ನು ಸಾರುವ, ಸಾವಿರಾರು ವರ್ಷಗಳ ಹಳೆಯ ಸ್ಮಾರಕಗಳ ಕುರಿತು ಜನರಿಂದ ಹಿಡಿದು, ಸರ್ಕಾರದವರೆಗೆ ಎಲ್ಲರೂ ನಿರ್ಲಕ್ಷ್ಯ ವಹಿಸಿದ್ದಾರೆ. ಹೀಗೇ ಮುಂದುವರಿದರೆ, ಇನ್ನೂ ಏಳೆಂಟು ವರ್ಷಗಳಲ್ಲಿ ಅವೆಷ್ಟೋ ಕೋಟೆಗಳು ಸಂಪೂರ್ಣವಾಗಿ ಶಿಥಿಲಗೊಳ್ಳುವುದು ಖಂಡಿತ. ಅಂಥ ಸಂದರ್ಭವನ್ನು ನೆನೆಸಿಕೊಂಡರೆ ಬೇಸರವಾಗುತ್ತದೆ’
-ವಿಶ್ವನಾಥ ಸುವರ್ಣ

Advertisement

Udayavani is now on Telegram. Click here to join our channel and stay updated with the latest news.

Next