Advertisement

Golden Jubilee: ಕರ್ನಾಟಕ ನಾಮಕರಣಕ್ಕೆ 50 ವರ್ಷ: 100 ಸಾಧಕರಿಗೆ ಸುವರ್ಣ ಸಂಭ್ರಮ ಪ್ರಶಸ್ತಿ

02:58 AM Oct 31, 2024 | Team Udayavani |

ಬೆಂಗಳೂರು: ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣವಾಗಿ 50 ವರ್ಷದ ತುಂಬಿದ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಕೊಡಮಾಡುವ ಕರ್ನಾಟಕ ಸುವರ್ಣ ಸಂಭ್ರಮ ಮಹೋತ್ಸವ ಪ್ರಶಸ್ತಿಗೆ 50 ಪುರುಷ ಸಾಧಕರು ಹಾಗೂ 50 ಮಹಿಳಾ ಸಾಧಕರನ್ನು ಆಯ್ಕೆ ಮಾಡಿದ್ದು ನ. 1ರಂದು ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿಯ ಜತೆಗೆ ಸುವರ್ಣ ಸಂಭ್ರಮ ಪ್ರಶಸ್ತಿಯನ್ನೂ ಪ್ರದಾನ ಮಾಡಲಾಗುತ್ತದೆ.

Advertisement

ವಿಧಾನಸೌಧ ಮುಂಭಾಗದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್‌, ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್‌, ಶೋಭಾ ಕರಂದ್ಲಾಜೆ ಸೇರಿದಂತೆ ಗಣ್ಯರು ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಪ್ರಶಸ್ತಿಯು 50 ಸಾವಿರ ರೂ. ನಗದು, ಪ್ರಶಸ್ತಿ ಫ‌ಲಕ ಒಳಗೊಂಡರಲಿದೆ.

ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿದಂತೆಯೇ ಜಾನಪದ, ವೈದ್ಯಕೀಯ, ಸಾಹಿತ್ಯ, ಕಲೆ, ರಂಗಭೂಮಿ, ಸಮಾಜಸೇವೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಸುವರ್ಣ ಸಂಭ್ರಮ ಪ್ರಶಸ್ತಿಗೂ ಆಯ್ಕೆ ಮಾಡಿದ್ದು, ಪ್ರಾದೇಶಿಕ ಹಾಗೂ ಸಾಮಾಜಿಕ ನ್ಯಾಯ ನೀಡಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಮಾಸಾಂತ್ಯಕ್ಕೆ ಭುವನೇಶ್ವರಿ ಪ್ರತಿಮೆ ಅನಾವರಣ
ಸುವರ್ಣ ಸಂಭ್ರಮದ ಹಿನ್ನೆಲೆಯಲ್ಲಿ ಹಚ್ಚಿದ ಕನ್ನಡ ಜ್ಯೋತಿಯು ನಾಡಿನಾದ್ಯಂತ ಸಂಚರಿಸಿದ್ದು, ನ.1 ರಂದು ವಿಧಾನಸೌಧ ಆವರಣದಲ್ಲಿ ನಡೆಯಲಿರುವ ಸಮಾರಂಭವು ಈ ಜ್ಯೋತಿಯ ಸಮ್ಮುಖದಲ್ಲಿ ಸಾಕ್ಷಿಯಾಗಲಿದೆ. ಅದೇ ರೀತಿ ವಿಧಾನಸೌಧ ಆವರಣದಲ್ಲಿ ತಾಯಿ ಭುವನೇಶ್ವರಿಯ ಪ್ರತಿಮೆ ಸ್ಥಾಪನೆ ಕಾರ್ಯವೂ ನಡೆಯುತ್ತಿದ್ದು, ನ. 1ರಂದು ಅದನ್ನು ಅನಾವರಣ ಮಾಡುವ ಇಚ್ಛೆ ಇತ್ತು. ಆದರೆ, ಪ್ರತಿಮೆ ನಿರ್ಮಾಣ ಕಾರ್ಯವು ಶೇ. 50ರಷ್ಟು ಮಾತ್ರ ಮುಗಿದಿದ್ದು, ಶಿಲ್ಪಿಗಳು 1 ತಿಂಗಳ ಸಮಯಾವಕಾಶ ಕೇಳಿದ್ದಾರೆ. ಹೀಗಾಗಿ ನವೆಂಬರ್‌ ತಿಂಗಳ ಕೊನೆಗೆ ಪ್ರತಿಮೆ ಸಿದ್ಧವಾಗಲಿದ್ದು, ನಂತರ ಅನಾವರಣಗೊಳಿಸಲು ಪ್ರತ್ಯೇಕ ಕಾರ್ಯಕ್ರಮ ಮಾಡಲಾಗುವುದು ಎಂದು ಸಚಿವ ತಂಗಡಗಿ ವಿವರಿಸಿದರು.

ಸರಕಾರಿ ನೌಕರರಿಗೆ ಕೆಂಪು-ಹಳದಿ ಕೊರಳದಾರ ಕಡ್ಡಾಯ
ಹೆಸರಾಯಿತು ಕನ್ನಡ, ಉಸಿರಾಗಲಿ ಕನ್ನಡ ಅಭಿಯಾನದಡಿ ರಾಜ್ಯದ ಎಲ್ಲ ಸರಕಾರಿ ನೌಕರರು ತಮ್ಮ ಇಲಾಖೆಗಳ ಗುರುತಿನ ಚೀಟಿಯನ್ನು ಕೆಂಪು-ಹಳದಿ ಬಣ್ಣಗಳನ್ನು ಒಳಗೊಂಡಿರುವ ಕೊರಳುದಾರ (ಟ್ಯಾಗ್‌) ಧರಿಸಬೇಕು ಎಂಬುದನ್ನು ಕಡ್ಡಾಯಗೊಳಿಸಲಾಗಿದೆ. ಈ ಸಂಬಂಧ ಮತ್ತೂಮ್ಮೆ ಸುತ್ತೋಲೆ ಹೊರಡಿಸಿದ್ದು, ನ. 31ರಿಂದ ಕಡ್ಡಾಯವಾಗಿ ಎಲ್ಲ ಸರಕಾರಿ ನೌಕರರೂ ಕೆಂಪು-ಹಳದಿ ಕೊರಳುದಾರದೊಂದಿಗೆ ಗುರುತಿನ ಚೀಟಿ ಧರಿಸಿಯೇ ಕಚೇರಿಗಳಲ್ಲಿ ಕೆಲಸ ಮಾಡಬೇಕು ಎಂದು ಸಚಿವ ಶಿವರಾಜ ತಂಗಡಗಿ ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next